ಸಾರಾಂಶ
ಗದಗ: ಇಂದಿನ ಯುವ ಜನಾಂಗ ಎಷ್ಟೇ ಶಿಕ್ಷಣ ಪಡೆದರೂ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಭೂ ತಾಯಿ ನಂಬಿದವರನ್ನು ಕೈಬಿಡುವುದಿಲ್ಲ, ಕೃಷಿಯಲ್ಲಿ ಆಧುನಿಕತೆ ಮತ್ತು ಸಾವಯವ ಪದ್ಧತಿಯನ್ನು ಅನುಸರಿಸುವ ಮೂಲಕ ಕೃಷಿಯಲ್ಲೂ ಅತ್ಯುನ್ನತ ಸಾಧನೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ ಎಂದು ಮುಂಡರಗಿಯ ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಹೇಳಿದರು.ನಗರದ ಉಷಾದೇವಿ ಗೋವಿಂದರಾಜ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ದಲ್ಲಿ ಶನಿವಾರ ನಡೆದ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ 11ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಾಧಕರು ಮನಸ್ಸು ಮಾಡಿದರೆ ಬರಡು ಭೂಮಿಯಲ್ಲೂ ಬಂಗಾರದಂತಹ ಬೆಳೆ ತೆಗೆಯಲು ಸಾಧ್ಯವಿದೆ. ಭೂಮಿಯಲ್ಲಿ ಅಮೃತವೂ ಇದೆ, ವಿಷವೂ ಇದೆ. ಯುವಕರು ಕೃಷಿಗೆ ಮಹತ್ವ ನೀಡದಿದ್ದಲ್ಲಿ ಬರಲಿರುವ ದಿನಗಳಲ್ಲಿ ಆಹಾರ ಧಾನ್ಯಕ್ಕಾಗಿ ಕಾಯ್ದಿರಿಸುವ, ಪರಿತಪಿಸುವ ಕಾಲ ಬಂದಿತು. ನಾನು ಹಲವು ದೇಶ ವಿದೇಶಗಳನ್ನು ಸಂಚರಿಸಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿರುವೆ ಭಾರತ, ಕರ್ನಾಟಕದ ಫಲವತ್ತಾದ ಭೂಮಿ ಕೃಷಿ ಸಾಧನೆಗೆ ಹೆಚ್ಚಿನ ಅವಕಾಶವಿದೆ ಎಂದರು.ಧಾರವಾಡ ಕೆಎಂಎಫ್ ನಿರ್ದೆಶಕ ಎಚ್.ಜಿ.ಹಿರೇಗೌಡ್ರ ಮಾತನಾಡಿ, ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಆರ್ಥಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಗ್ರಾಹಕರ ವಿಶ್ವಾಸವನ್ನು ಪಡೆದಿರುವ ಶಿವಸಂಗಮ ಬ್ಯಾಂಕ್ ಆಗಿ ಪರಿವರ್ತನೆ ಹೊಂದುವ ಎಲ್ಲ ಅರ್ಹತೆಗಳನ್ನು ಪಡೆದಿದೆ ಎಂದರು.ರಾಷ್ಟ್ರಪತಿ ಪದಕ ಪುರಸ್ಕೃತ, ಪಿಎಸ್‌ಐ ಮಾರುತಿ ಜೋಗದಂಡಕರ ಹಾಗೂ ಗುರುರಾಜ ಬೂದಿಹಾಳ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು ಅಪರಾಧಗಳು ಕಡಿಮೆಯಾಗಲು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಸಂಸ್ಥಾಪಕ ಅಧ್ಯಕ್ಷ ಜಿ.ಎಂ.ಪಲ್ಲೇದ ಮಾತನಾಡಿ, ಶಿವಸಂಗಮ ಎಲ್ಲ ಜನಾಂಗವನ್ನು ಒಳಗೊಂಡ, ಎಲ್ಲ ಜನಾಂಗಕ್ಕೂ ಆರ್ಥಿಕ ನೆರವು ನೀಡುವ ಸಂಸ್ಥೆಯಾಗಿದೆ. ಗ್ರಾಹಕರು ಸಂಸ್ಥೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ ಹಾಗೆಯೇ ಸಂಸ್ಥೆಯು ಸಾಲಗಾರರ ಮೇಲೆ ವಿಶ್ವಾಸವಿಟ್ಟಿದ್ದು ಅವರು ಸರಿಯಾಗಿ ಸಾಲದ ಮರುಪಾವತಿ ಮಾಡಿದ್ದರ ಪರಿಣಾಮವಾಗಿ ಸಂಸ್ಥೆ ಇಂದು ಗ್ರಾಹಕರ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವೀರಯ್ಯ ಶಿವಕಾಳಿಮಠ ಮಾತನಾಡಿ, ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಿರುವ ಸಂಸ್ಥೆಯು 2025ನೇ ಸಾಲಿನಲ್ಲಿ 52 ಲಕ್ಷ 27 ಸಾವಿರ ರು.ಗಳ ನಿವ್ವಳ ಲಾಭವನ್ನು ಪಡೆದಿದ್ದು ಶೇರುದಾರರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲಿದೆ, ಈ ಸಾಧನೆಗೆ ಗ್ರಾಹಕರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದರು.
ಸಮಾರಂಭದಲ್ಲಿ ಸಾಧಕ ಮಹನೀಯರನ್ನ ಸನ್ಮಾನಿಸಿ ಗೌರವಿಸಲಾಯಿತು. ಡಾ. ರಾಜಶೇಖರ ಗಚ್ಚಿನಮಠ, ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಮಾತನಾಡಿದರು.ಈ ವೇಳೆ ಎಂ.ಬಿ.ಲಿಂಗದಾಳ, ಗೀತಾ ಪಲ್ಲೇದ, ಸರೋಜಾ ಲಿಂಗದಾಳ, ಶೋಭಾ ಶಿವಕಾಳಿಮಠ, ಕವಿತಾ ದೇಸಾಯಿಮಠ, ಕಳಕಪ್ಪ ನಾಗರಾಳ, ಸುರೇಶ ಸರ್ವಿ ಸೇರಿದಂತೆ ಇತರರು ಇದ್ದರು.