ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಜೆಗಳ ಆಕಾಂಕ್ಷೆಗಳನ್ನು ಈಡೇರಿಸಲು ಸಂಸತ್ತು, ವಿಧಾನಸಭೆಗಳಲ್ಲಿ ಜನಕಲ್ಯಾಣದ ಆರೋಗ್ಯಕರ ಚರ್ಚೆಗಳಾಗಬೇಕು. ರಾಜಕೀಯ ಚರ್ಚೆ, ಗದ್ದಲ, ಆರೋಪ-ಪ್ರತ್ಯಾರೋಪಗಳಿಗೆ ಅವಕಾಶ ನೀಡಬಾರದು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಕಾಮನ್‌ವೆಲ್ತ್ ಸಂಸದೀಯ ಸಂಘದ ಭಾರತ ವಲಯದ 11ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದಿನದಿಂದ ದಿನಕ್ಕೆ ಜನಪ್ರತಿನಿಧಿ ಸಭೆಗಳಲ್ಲಿ ಗಾಂಭೀರ್ಯತೆ ಇಲ್ಲದೆ, ಚರ್ಚೆಗಳ ಗುಣಮಟ್ಟ ತಳಮಟ್ಟಕ್ಕೆ ತಲುಪುತ್ತಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳೇ ಪ್ರಾಮುಖ್ಯತೆ ಪಡೆದು ಜನರ ಅಭಿವೃದ್ಧಿ ಸಂಬಂಧಿಸಿದ ವಿಷಯಗಳ ಗೌಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸದನಗಳಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಧ್ವನಿಯೂ ಕೇಳಿಸಬೇಕು. ಸಮ್ಮತಿ, ಅಸಮ್ಮತಿ, ಪರ-ವಿರೋಧ ಸಂವಾದ, ಚರ್ಚೆಗಳ ಮೂಲಕ ಜನರ ಕಷ್ಟ ಪರಿಹರಿಸುವ ಕಾನೂನು, ನೀತಿ ರೂಪಿಸಬೇಕು. ರಾಜಕೀಯಕ್ಕೆ ಕಲಾಪಗಳು ಬಲಿಯಾಗಬಾರದು. ಅದಕ್ಕಾಗಿ ವಿಧಾನಮಂಡಲ ಕಾರ್ಯ ಪದ್ಧತಿ ಸುಧಾರಣೆಯಾಗಬೇಕು. ದೇಶದ ಎಲ್ಲೆಡೆ ಅಂತಹ ವ್ಯವಸ್ಥೆ ಅನುಷ್ಠಾನಗೊಳಿಸುವ ಸಮಯ ಈಗ ಬಂದಿದೆ ಎಂದು ಓಂ ಬಿರ್ಲಾ ಹೇಳಿದರು.ಶಾಸನಸಭೆಗಳಲ್ಲಿ ಚರ್ಚೆಗಳು, ಸಂವಾದಗಳು, ಸಮಾಜವನ್ನು ಧನಾತ್ಮಕವಾಗಿ ಬದಲಿಸುವ ಸುಧಾರಣೆಗೆ ಶಿಫಾರಸುಗಳು ಈ ಸಮ್ಮೇಳನದಲ್ಲಿ ಮೂಡಿ ಬರಬೇಕು ಮತ್ತು ಅವುಗಳನ್ನು ಎಲ್ಲಾ ಕಡೆ ಅಳವಡಿಸಿಕೊಳ್ಳುವಂತಾಗಬೇಕು ಎಂದು ಓಂ ಬಿರ್ಲಾ ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸದನಗಳು ಕೇವಲ ಔಪಚಾರಿಕತೆ ಸೀಮಿತವಾಗದೆ ನೈಜ ವಿಚಾರಗಳ ಕುರಿತು ವಿಶ್ವಾಸ ಮೂಡಿಸುವ ಗಹನವಾದ ಚರ್ಚೆಗಳ ವೇದಿಕೆಯಾಗಬೇಕು. ಚರ್ಚೆ ಮೂಲಕ ಪಾರರ್ಶಕತೆ, ಮೌಲ್ಯಾಧಾರಿತ ನೀತಿ ರೂಪಿಸಬೇಕು. ಜನಪ್ರತಿನಿಧಿಗಳು ಕೇವಲ ಚುನಾವಣೆ ವೇಳೆ ಮಾತ್ರ ಉತ್ತರದಾಯಿಗಳಾಗದೆ ಪ್ರತಿನಿತ್ಯವೂ ಜನರ ವಿಚಾರಗಳಿಗೆ ವಿಧಾನಸಭೆಯಲ್ಲಿ ಸ್ಪಂದಿಸುವ ಉತ್ತರದಾಯಿಗಳಾಗಬೇಕು ಎಂದರು.ಸಮಾಜದ ಎಲ್ಲಾ ವರ್ಗಗಳು, ಯುವಕರು, ಮಹಿಳೆಯರು, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಧ್ವನಿಯಾಗಿ ಚರ್ಚೆಗಳನ್ನು ನಡೆಸುವ ಬಹುತ್ವದ ವೇದಿಕೆಯಾಗಬೇಕು. ಸಂಸತ್ತಿನಲ್ಲಿ ಜನಗಳ ಧ್ವನಿ ಪ್ರತಿಧ್ವನಿಸಬೇಕು. ಜಗತ್ತಿನ ಅತ್ಯುತ್ತಮ ಸಂಸದೀಯ ವ್ಯವಹಾರಗಳ ಮಾದರಿಗಳನ್ನು ನೋಡಿ ಅನುಸರಿಸಬೇಕು. ಐರ್ಲ್ಯಾಂಡಿನ ಶಾಸನಸಭೆ, ಬ್ರೆಜಿಲ್‌ನ ಬಜೆಟ್ ರಚನೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಹಾಗೂ ನಮ್ಮ ದೇಶದ ಗ್ರಾಮ ಸಭೆಗಳು ಮಾದರಿಯಾಗಬೇಕು. ಪ್ರಜಾಪ್ರಭುತ್ವದಲ್ಲಿ ನಾವಿನ್ಯತೆ ಅಳವಡಿಸಿಕೊಳ್ಳುವ ಮೂಲಕ ಜನರ ನಂಬಿಕೆಗಳನ್ನು ಗಟ್ಟಿಗೊಳಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.ಸತ್ಯಕ್ಕಿಂತ ಸುಳ್ಳು ವೇಗವಾಗಿ ಹಬ್ಬಿ, ಭಾವನೆಗಳು ಮೇಲುಗೈ ಸಾಧಿಸುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಕಾಡುತ್ತಿದೆ. ಹೀಗಾಗಿ ಪ್ರಜಾಪ್ರಭುತ್ವದ ಮೂಲ ಆಶಯವಾಗಿರುವ ನ್ಯಾಯ, ಸಮಾನತೆ, ಭಾತೃತ್ವ, ಮೌಲ್ಯಗಳನ್ನು ಶಾಸನಸಭೆಗಳು ಎತ್ತಿ ಹಿಡಿಯಬೇಕು. ಸಿನಿಕತೆ, ವ್ಯವಹಾರಿಕ ರಾಜಕೀಯಕ್ಕೆ ಸಂಸತ್ತು ವೇದಿಕೆಯಾಗದೆ ಮೌಲ್ಯಗಳ ರಕ್ಷಕನಾಗಬೇಕು ಎಂದು ಸಿಎಂ ಕರೆ ನೀಡಿದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಜಗತ್ತಿನ ಅತ್ಯುತ್ತಮ ಸಂಸದೀಯ ವ್ಯವಹಾರಗಳು, ಪ್ರಕ್ರಿಯೆಗಳನ್ನು ಅಳವಡಿಸಿಕೊಂಡು ಶಾಸನಸಭೆಯನ್ನು ಅತ್ಯುತ್ತಮಗೊಳಿಸಲು ಈ ಸಮ್ಮೇಳನ ನೆರವಾಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು.