ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪಟ್ಟಣದ ಹಳೆ ಬಸ್ ನಿಲ್ದಾಣಕ್ಕೆ ಹೋಗುವ ತಿರುವಿನಲ್ಲಿ ನ.1ರಂದು ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಮಾಡುವ ವಿಚಾರದಲ್ಲಿ ಮೂಡಿದ್ದ ಗೊಂದಲವು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹಾಗೂ ಜಿ.ಎಸ್. ಗಡ್ಡದೇವರಮಠ ಹಾಗೂ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಕಾನೂನಿನ ತೀರ್ಮಾನದಂತೆ ವಾಲ್ಮೀಕಿ ವೃತ್ತ ನಿರ್ಮಾಣ ಮಾಡಲು ವಾಲ್ಮೀಕಿ ಸಮಾಜದ ಮುಖಂಡರು ಒಪ್ಪಿಕೊಳ್ಳುವ ಮೂಲಕ ಗೊಂದಲಕ್ಕೆ ಪರಿಹಾರ ಕಂಡು ಕೊಂಡ ಘಟನೆ ಭಾನುವಾರ ನಡೆಯಿತು. ಪಟ್ಟಣದ ಹಳೆ ಬಸ್ ನಿಲ್ದಾಣಕ್ಕೆ ಹೋಗುವ ಸರ್ಕಲ್‌ನಲ್ಲಿ ವಾಲ್ಮೀಕಿ ವೃತ್ತ ನಿರ್ಮಿಸುವ ವಿಚಾರದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಹಳೆ ಬಸ್ ನಿಲ್ದಾಣದ ಅಕ್ಕ ಪಕ್ಕದ ನಿವಾಸಿಗಳ ನಡುವೆ ನಡೆದ ಗೊಂದಲಕ್ಕೆ ಕಾನೂನಿನ ಅನುಮತಿ ಪಡೆದು ಸರ್ಕಲ್ ನಿರ್ಮಾಣ ಮಾಡೋಣ ಹಾಗೂ ಬೇರೆ ಯಾವುದೇ ಸರ್ಕಲ್ ನಿರ್ಮಾಣ ಮಾಡುವುದು ಬೇಡ ಎಂಬ ತೀರ್ಮಾನವನ್ನು ವಾಲ್ಮೀಕಿ ಸಮಾಜದ ಹಿರಿಯರು ತೆಗೆದುಕೊಂಡಿದ್ದರಿಂದ ತಾತ್ಕಾಲಿಕವಾಗಿ ಗೊಂದಲ ಬಗೆಹರಿಯಿತು.

ಈ ವೇಳೆ ವಾಲ್ಮೀಕಿ ಸಮಾಜದ ತಾಲೂಕಾ ಅಧ್ಯಕ್ಷ ಭೀಮಣ್ಣ ಯಂಗಾಡಿ, ಸಣ್ಣೀರಪ್ಪ ಹಳ್ಳೆಪ್ಪನವರ, ಪ್ರಕಾಶ ಬೆಂತೂರ, ಯಲ್ಲಪ್ಪ ತಳವಾರ ಮಾತನಾಡಿ, ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರದಲ್ಲಿನ ಕ್ರಾಸ್‌ನಲ್ಲಿ ಮಹರ್ಷಿ ವಾಲ್ಮೀಕಿ ಸರ್ಕಲ್ ಮಾಡುವ ವಿಚಾರದಲ್ಲಿ ಎದ್ದಿರುವ ಗೊಂದಲಗಳು ನೋವಿನ ಸಂಗತಿಯಾಗಿದೆ. ಪಟ್ಟಣದಲ್ಲಿ ಈಗ ಉಂಟಾಗಿರುವ ಗೊಂದಲ ಬಗೆಹರಿಸುವ ಮೂಲಕ ಹಾಗೂ ಕಾನೂನಿನ ಅನುಮತಿ ಪಡೆದು ವಾಲ್ಮೀಕಿ ವೃತ್ತ ನಿರ್ಮಾಣ ಮಾಡೋಣ. ಅನಾವಶ್ಯವಕವಾಗಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದರು.

ಈ ವೇಳೆ ರಾಮಣ್ಣ ಲಮಾಣಿ, ಚಂದ್ರು ತಳವಾರ, ಬಸವರಾಜ ಮೇಲ್ಮುರಿ, ಶಿವಪ್ಪ ಕಲ್ಲೂರ, ಗಂಗಾಧರ ಪರಸಣ್ಣವರ, ರಾಜು ಓಲೇಕಾರ, ಶರಣು ಗೋಡಿ, ನಾಗರಾಜ ಮಡಿವಾಳರ, ಪದ್ಮರಾಜ ಪಾಟೀಲ, ಮಂಜುನಾಥ ಹಾವಳಕೇರಿ. ನಾಗರಾಜ ಹುಣಸಿಮರದ, ಕಲ್ಲಪ್ಪ ಗಂಗಣ್ಣವರ, ಚನ್ನಪ್ಪ ಬೆಟಸೂರ, ಹನಮಂತ ಜಾಲಿಮರದ, ವಿಜಯ ಕರಡಿ, ಕೆ.ಓ.ಹೂಲಿಕಟ್ಟಿ, ಎನ್.ಎನ್.ನೆಗಳೂರ, ಸೋಮಲಿಂಗಪ್ಪ ಬೇವಿನಮರದ ಇದ್ದರು.

ಈ ವೇಳೆ ಹಳೆ ಬಸ್ ನಿಲ್ದಾಣದ ಅಕ್ಕಪಕ್ಕದ ನಿವಾಸಿಗಳು ಅಲ್ಲಿಗೆ ಆಗಮಿಸಿ ಇಲ್ಲಿ ಯಾವುದೇ ಸರ್ಕಲ್ ಮಾಡುವುದು ಬೇಡ, ಅದು ಹೇಗೆ ಇದೆಯೋ ಹಾಗೆ ಇರಲಿ ಎಂದು ಘೋಷಣೆ ಕೂಗಿದ್ದರಿಂದ ಹಳೆ ಬಸ್ ನಿಲ್ದಾಣದ ಸರ್ಕಲ್ ಕೆಲ ಹೊತ್ತು ಗೊಂದಲ ಗೂಡಾಗಿದ್ದು ಕಂಡು ಬಂತು.


ನಂತರ ವಾಲ್ಮೀಕಿ ಸಮಾಜ ತೆಗೆದುಕೊಂಡ ನಿರ್ಧಾರದಿಂದ ಎಲ್ಲರೂ ತಾತ್ಕಾಲಿಕ ಒಪ್ಪಿಗೆ ಸೂಚಿಸಿ ವಾಪಸ್ ಹೋದ ಘಟನೆ ನಡೆಯಿತು. ಈ ವೇಳೆ ಸಿಪಿಐ ಬಿ.ವಿ. ನ್ಯಾಮಗೌಡ ಹಾಗೂ ಪಿಎಸ್‌ಯ ಆನಂದ ಕ್ಯಾರಕಟ್ಟಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಪರಿಸ್ಥಿತಿ ತಿಳಿಗೊಳಿಸಿದರು.