ಸಾರಾಂಶ
ಚಾಮರಾಜನಗರದಲ್ಲಿ ಲಾರಿ ಮಾಲಿಕರ ಪ್ರತಿಭಟನೆಯಿಂದಾಗಿ ಲಾರಿಗಳು ಸಾಲುಗಟ್ಟಿ ನಿಂತಿರುವುದು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯಾದ್ಯಂತ ಕರೆಕೊಟ್ಟಿದ್ದ ಲಾರಿ ಮುಷ್ಕರಕ್ಕೆ ಬೆಂಬಲಿಸಿ ಲಾರಿ ಮಾಲಿಕರು, ಚಾಲಕರು ಚಾಮರಾಜನಗರದ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಲಾರಿ ಮಾಲಿಕರು ಮತ್ತು ಚಾಲಕರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಜಿಯಾವುಲ್ಲಾ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಲಾರಿ ಮಾಲೀಕರ ಮೇಲೆ ಪದೇಪದೇ ಗದಾ ಪ್ರಹಾರ ಮಾಡಲಾಗುತ್ತಿದೆ. ಒಂದಲ್ಲಾ ಒಂದು ರೀತಿಯಲ್ಲಿ ಬೆಲೆ ಏರಿಕೆ ಮಾಡಿ ನಮ್ಮ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ಕಿಡಿಕಾರಿದರು.ದಿಂಬಂ ರಸ್ತೆ ಖಾಲಿ-ಖಾಲಿ: ರಾಜ್ಯದಲ್ಲಿ ಲಾರಿ ಮುಷ್ಕರ ಹಿನ್ನೆಲೆ, ತಮಿಳುನಾಡು ಗಡಿಯಲ್ಲಿ ಲಾರಿಗಳು ನಿಂತಲ್ಲೇ ನಿಂತಿದ್ದ ದೃಶ್ಯ ಮಂಗಳವಾರ ಬೆಳಗ್ಗೆ ಕಂಡುಬಂದಿತು. ರಾಜ್ಯಕ್ಕೆ ಬರದೇ ತಮಿಳುನಾಡಿನಲ್ಲೇ ನೂರಾರು ಲಾರಿಗಳು ನಿಂತಿವೆ. ಗಡಿಭಾಗದ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಬಿಕೋ ಎನ್ನುತ್ತಿದೆ. ದಿಂಬಂ ಘಟ್ಟದಲ್ಲಿ ಲಾರಿ ಸಂಚಾರವಿಲ್ಲದೇ ರಸ್ತೆ ಖಾಲಿ ಖಾಲಿಯಾಗಿದ್ದು ಇಲ್ಲಿ ದಿನನಿತ್ಯ ನೂರಾರು ಲಾರಿಗಳ ಸಂಚಾರ ಮಾಡುತ್ತಿದ್ದವು. ತಮಿಳುನಾಡಿನಿಂದ ನಿತ್ಯ ಸಾವಿರಾರು ಲಾರಿಗಳು ದಿಂಬಂ ಮೂಲಕ ರಾಜ್ಯಕ್ಕೆ ಬರುತ್ತಿದ್ದವು. ಆದರೆ, ಮುಷ್ಕರದಿಂದ ಲಾರಿಗಳು ನಿಂತಲ್ಲೇ ನಿಂತಿದ್ದವು.ರಾಮಾಪುರದಲ್ಲೂ ಪ್ರತಿಭಟನೆ
ಹನೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹನೂರು ತಾಲೂಕಿನ ರಾಮಾಪುರದಲ್ಲಿ ಲಾರಿ ಮಾಲಿಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ತಾಲೂಕಿನ ರಾಮಾಪುರದ ಹೊರವಲಯದಲ್ಲಿ ಲಾರಿ ಮಾಲಿಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನೆಡೆಸಿದರು. ಪ್ರಸ್ತುತ ಡಿಸೇಲ್ ದರ ಹೆಚ್ಚಳ, ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ಹಣ ವಸೂಲಿ, ಆರ್‌ಟಿಒ ಬಾರ್ಡರ್ ಚೆಕ್‌ಪೋಸ್ಟ್, ಎಫ್ಸಿ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿದರು. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಕರ್ನಾಟಕದಿಂದ ನಾಲ್ ರೋಡ್ ಮೂಲಕ ತಮಿಳುನಾಡಿನತ್ತ ತೆರಳುತ್ತಿದ್ದ ಹಾಗೂ ಕರ್ನಾಟಕದತ್ತ ಆಗಮಿಸುತ್ತಿದ್ದ ಲಾರಿಗಳ ಚಾಲಕರೂ ತೆರಳದೆ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಲಾರಿ ಮಾಲಿಕರ ಸಂಘದ ತಾಲೂಕು ಅಧ್ಯಕ್ಷ ಮಾರುತಿ, ಉಪಾದ್ಯಕ್ಷ ನಾಗೇಂದ್ರ ಮುರುಗೇಶ್, ಮಣಿ ಸೆಂದಿಲ್ ಕುಮಾರ್, ಸದಸ್ಯರಾದ ಮುರುಗೇಶ್, ಮಾದೇಶ್, ರಾಜು, ಪ್ರದೀಪ್ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.