ಭಕ್ತದ ಅಜ್ಞಾನ ಅಳಿಸಿದ ಮಹಾತ್ಮ ಸಿದ್ಧೇಶ್ವರ ಶ್ರೀ

| Published : Jan 03 2024, 01:45 AM IST

ಸಾರಾಂಶ

ಭಕ್ತದ ಅಜ್ಞಾನ ಅಳಿಸಿದ ಮಹಾತ್ಮ ಸಿದ್ಧೇಶ್ವರ ಶ್ರೀ: ಚಿತ್ತರಗಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಮ್ಮ ಶಿಸ್ತುಬದ್ಧ ಮತ್ತು ಸರಳ ಜೀವನ, ಸ್ಥಿತಪ್ರಜ್ಞೆಯ ಭಾವದಿಂದಾಗಿ ಜನಮನದಲ್ಲಿ ಚಿರಸ್ಥಾಯಿಯಾಗಿರುವ ವಿಜಯಪುರ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಸಿದ್ದೇಶ್ವರ ಮಹಾಸ್ವಾಮಿಗಳು ನಿರಂತರ ಬೆಳಗುವ ಸೂರ್ಯನಿದ್ದಂತೆ ಎಂದು ಹಿರಿಯ ಹೃದಯರೋಗ ತಜ್ಞ ಡಾ.ಜಿ.ಎಚ್.ಚಿತ್ತರಗಿ ನುಡಿದರು.

ರಬಕವಿಯ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ಮತ್ತು ಭಾರತ್ ಗ್ಯಾಸ್ ಸಂಸ್ಥೆಯವರು ಜಂಟಿಯಾಗಿ ಆಯೋಜಿಸಿದ್ದ ನಡೆದಾಡುವ ದೇವರು ಸಿದ್ದೇಶ್ವರ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಡವ-ಬಲ್ಲಿದ ಸುಜ್ಞಾನಿ-ಅಜ್ಞಾನಿ ಎಂಬ ಯಾವುದೇ ಬೇಧಭಾವವಿಲ್ಲದೇ ಎಲ್ಲರೊಡನೆ ಸಮನಾಗಿ ಬೆರೆತು ಎಲ್ಲರ ಮನಗಳಲ್ಲಿ ಜ್ಞಾನದ ಬೆಳಕು ಮೂಡಿಸುತ್ತಿದ್ದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಭೂಮಿ ಇರುವವರೆಗೂ ಎಲ್ಲರ ಮನೆ-ಮನಗಳಲ್ಲಿ ಶಾಶ್ವತವಾಗಿರುತ್ತಾರೆ.ಹೋದಲ್ಲೆಲ್ಲ ಅಂಧಕಾರ ಅಳಿಸಿ ತಮ್ಮ ಜ್ಞಾನ ಪ್ರಭೆ ಬೆಳಗಿಸಿ ಭಕ್ತದ ಅಜ್ಞಾನ ಅಳಿಸಿದ ಮಹಾತ್ಮ ಸಿದ್ಧೇಶ್ವರರು ಸೂರ್ಯಚಂದ್ರರು ಇರುವತನಕ ಚಿರಸ್ಥಾಯಿಯಾಗಿದ್ದಾರೆಂದರು.

ಮಲ್ಲಿಕಾರ್ಜುನ ಗಡೆಣ್ಣವರ ಪ್ರಾರ್ಥನೆ ಹಾಗೂ ಸ್ವಾಗತ ಕೋರಿದರು. ಬಣಜಿಗ ಸಮಾಜದ ಅಧ್ಯಕ್ಷ ಗಿರೀಶ ಮುತ್ತೂರ ಸಿದ್ದೇಶ್ವರಶ್ರೀಗಳು ಜ್ಞಾನದ ಮಹಾಸಾಗರವೇ ಆಗಿದ್ದರು. ಅಲ್ಲಿ ಯಾವುದೇ ಬೇಧಭಾವವಿಲ್ಲದೇ ಎಲ್ಲರಿಗೂ ಅವರ ಅನುಭಾವ ಸಿಂಚನದಡಿ ಪುನೀತರಾಗುವ ಸದವಕಾಶವಿತ್ತು. ಬಹುಭಾಷಾ ಕೋವಿದರಾಗಿದ್ದ ಶ್ರೀಗಳು ಎಲ್ಲ ವಿಷಯಗಳಲ್ಲೂ ನಿರರ್ಗಳವಾಗಿ ಮತ್ತು ಸಮರ್ಥವಾಗಿ ಎಲ್ಲರಿಗೂ ಗ್ರಾಹ್ಯವಾಗುವಂತೆ ವಿವರಿಸುವ ಅದ್ಭುತ ಗುಣ ಹೊಂದಿದ್ದರು. ಸರಳತೆಯೇ ಮೈದಳೆದಂತಿದ್ದ ಶ್ರೀಗಳ ದರ್ಶನದಿಂದಲೇ ಬದುಕು ಪಾವನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸೋಮಶೇಖರ ಕೊಟ್ರಶೆಟ್ಟಿ, ಶಿಕ್ಷಣ ಸಂಯೋಜಕ ಬಿ.ಎಂ.ಹಳೆಮನಿ, ಮಹಾದೇವ ಮುತ್ತೂರ, ಪ್ರೊ.ಬಸವರಾಜ ದುಂಬಾಳಿ, ರೇವಣ ಉಮದಿ, ಸಂಗಮೇಶ ಗುಣಕಿ, ಸಂಗಮೇಶ ಪರಮಶೆಟ್ಟಿ, ಸತೀಶ ಗದಗ, ಮಹಾಂತೇಶ ಬಿಳ್ಳೂರ, ಜಳಕಿ ಮೇಡಂ, ನಾವಿ ಸೇರಿದಂತೆ ಬಸವ ಶಿಕ್ಷಣ ಸಂಸ್ಥೆ ಸಿಬ್ಬಂದಿ, ಭಾರತ್ ಗ್ಯಾಸ್ ಸಿಬ್ಬಂದಿ, ಎಲ್ಲ ಗುರು-ಹಿರಿಯರು ಪಾಲ್ಗೊಂಡು ಮೊಂಬತ್ತಿ ಬೆಳಗಿಸಿ ಶ್ರೀಗಳಿಗೆ ಗೌರವ ಸಲ್ಲಿಸಿದರು.