ಸಾರಾಂಶ
ಮಕರ ಸಂಕ್ರಾಂತಿ ಹಬ್ಬ ಕಾರ್ಯಕ್ರಮದಲ್ಲಿ ಯುವ ಕಲಾವಿದರ ತಂಡ ಜಾಗೃತಿ ಗೀತೆ, ಜಾನಪದ ಗೀತೆ ಮತ್ತು ಲಾವಣಿಗಳ ಮೂಲಕ ವಿಚಾರಣಾಧೀನ ಕೈದಿಗಳ ಮನ ರಂಜಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಮಕರ ಸಂಕ್ರಾಂತಿ ಹಬ್ಬ ವಿಶಿಷ್ಟವಾಗಿ ಆಚರಿಸಲಾಯಿತು.
ಬಂಟ್ವಾಳದ ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಅರವಿಂದ ಕುಡ್ಲ ಮತ್ತು ಬೈಕಂಪಾಡಿ ಸರ್ಕಾರಿ ಪ್ರೌಢ ಶಿಕ್ಷಣ ಶಾಲೆಯ ಶಿಕ್ಷಕ ಪ್ರೇಮನಾಥ್ ಆಚಾರ್ಯ ನೇತೃತ್ವದಲ್ಲಿ ಯುವ ಕಲಾವಿದರ ತಂಡ ಜಾಗೃತಿ ಗೀತೆ, ಜಾನಪದ ಗೀತೆ ಮತ್ತು ಲಾವಣಿಗಳ ಮೂಲಕ ವಿಚಾರಣಾಧೀನ ಕೈದಿಗಳ ಮನ ರಂಜಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಾಗೃಹದ ಅಧೀಕ್ಷಕರಾದ ಓಬಳೇಶಪ್ಪ ವಹಿಸಿ, ವಿಚಾರಣಾಧೀನ ಕೈದಿಗಳ ಮನದಲ್ಲಿ ಪರಿವರ್ತನೆ ತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇದೊಂದು ಅಪೂರ್ವ ಕಾರ್ಯಕ್ರಮ ಎಂದು ಓಬಳೇಶಪ್ಪ ಶ್ಲಾಘಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲ ಸುಕೇಶ್ ಕುಮಾರ್ ಶೆಟ್ಟಿ ಪ್ರಾಧಿಕಾರದಿಂದ ದೊರೆಯುವ ಕಾನೂನು ನೆರವಿನ ಬಗ್ಗೆ ವಿವರಿಸಿದರು.ಕೆನರಾ ಹೈಸ್ಕೂಲ್ ಮತ್ತು ಸಂತ ಅಲೋಶಿಯಸ್ ಹೈಸ್ಕೂಲ್‌ನ ವಿದ್ಯಾರ್ಥಿಗಳೂ ರಂಗ ಗೀತೆಗಳು, ಜಾನಪದ ಗೀತೆಗಳನ್ನು ಹಾಡಿ ವಿಚಾರಣಾಧೀನ ಕೈದಿಗಳಲ್ಲಿ ಜಾಗೃತಿ ಮೂಡಿಸಿದರು. ಕೈದಿಗಳೂ ಚಪ್ಪಾಳೆ ತಟ್ಟಿ, ಹಾಡಿಗೆ ದನಿಗೂಡಿಸಿ ಸಂಭ್ರಮಿಸಿದರು.