ಜಾಲಹಳ್ಳಿಯಲ್ಲಿ ನಿಧಿಗಳ್ಳರ ಹಾವಳಿ: ಪತ್ತೆಗೆ ಒತ್ತಾಯ

| Published : May 25 2024, 12:47 AM IST

ಜಾಲಹಳ್ಳಿಯಲ್ಲಿ ನಿಧಿಗಳ್ಳರ ಹಾವಳಿ: ಪತ್ತೆಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ವಲಯದಲ್ಲಿನ ಬಸವಣ್ಣ ದೇಗುಲದಲ್ಲಿ ಅಗೆದು ನಿಧಿಗಾಗಿ ಕಳ್ಳರ ಶೋಧ ಮಾಡಿದ್ದು, ಲಿಂಗಾಯತ ಸಮಾಜದ ಮುಖಂಡ ರಾಮನಗೌಡ ಮಾಲಿ ಪಾಟೀಲ್ ಅವರು ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಿದ್ದಾರೆ. ಈಗಾಗಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅದರೆ, ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ದೇವದುರ್ಗ

ತಾಲೂಕಿನ ಜಾಲಹಳ್ಳಿ ಗ್ರಾಮದ ವಲಯದಲ್ಲಿ ಈಚೆಗೆ ಬಸವಣ್ಣ ದೇಗುಲದಲ್ಲಿ ನಿಧಿಗಳ್ಳರು ಗುಂಡಿ ಅಗೆದು ನಿಧಿ ಶೋಧ ಮಾಡಿದ್ದಾರೆ.

ಗರ್ಭ ಗುಡಿಯಲ್ಲಿರುವ ಬಸವಣ್ಣನ ಮೂರ್ತಿಯನ್ನು ಕೂಡ ಅಸ್ಥಿರ ಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಲಿಂಗಾಯತ ಸಮಾಜದ ಮುಖಂಡ ರಾಮನಗೌಡ ಮಾಲಿ ಪಾಟೀಲ್ ಅವರು ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಿದ್ದಾರೆ. ಈಗಾಗಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅದರೆ, ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಿದರೆ, ಶ್ರೀಘ್ರವೇ ಪತ್ತೆ ಮಾಡಲು ಅನುಕೂಲ ಅಗಲಿ ಎಂದು ಸ್ಥಳೀಯ ಗ್ರಾಪಂ ಅಡಳಿತ ಮಂಡಳಿ ಗ್ರಾಮದಲ್ಲಿ ದಾನಿಗಳಿಂದ ಹಣ ಸಂಗ್ರಹ ಮಾಡಿ ಹಾಗೂ ಸ್ಥಳೀಯ ಸಂಪನ್ಮೂಲದಲ್ಲಿಯೇ ಸುಮಾರು ಎರಡು ಲಕ್ಷ ರುಪಾಯಿ ವೆಚ್ಚದಲ್ಲಿ ನಾಲ್ಕೂ ಕಡೆ ಸಿಸಿ ಕ್ಯಾಮೆರಾ ಅಳವಡಿಸಿ ಅದರ ಸಂಪರ್ಕವನ್ನು ನೇರವಾಗಿ ಪೊಲೀಸ್ ಠಾಣೆಗೆ ನೀಡಿದ್ದಾರೆ. ಅದರೆ, ಅದೂ ಕಳೆದ ಆರು ತಿಂಗಳಿಂದ ದುರಸ್ತಿಯಲ್ಲಿವೆ. ದುರಸ್ತಿ ಮಾಡಿಸಿಕೊಳ್ಳುವಷ್ಟು ಬಡತನದಲ್ಲಿ ಪೋಲಿಸ್ ಠಾಣೆ ನಿರ್ವಹಣೆ ಮಾಡಲಾಗುತ್ತಿದೆಯೇ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಲ್ಲದೇ ಗ್ರಾಮದಲ್ಲಿ ಯುವಕರು ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಬಿದ್ದಿರುವುದರಿಂದ ಯಾವುದೇ ಕೆಲಸ ಕಾರ್ಯ ಮಾಡದೇ ಪಾಲಕರು ದುಡಿದು ಹಾಕುವುದನ್ನೆ ತಿಂದು ಕೆಲವು ಯುವಕರು ನಿಧಿಗಳ್ಳತನಕ್ಕೆ ಇಳಿದ್ದಾರೆ.

ಇನ್ನೂ ಕೆಲವು ಪೊಲೀಸ್ ಸಿಬ್ಬಂದಿ ಅಕ್ರಮ ದಂಧೆಕೋರರ ಜೊತೆಗೆ ನಿರಂತರವಾಗಿ ಇರುವುದರಿಂದ ಕಳ್ಳರ ಬಗ್ಗೆ ನಾಗರಿಕರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಸಮಾಜಘಾತುಕರ ಜೊತೆ ಸೇರಿ ಪೊಲೀಸ್‌ ಪೇದೆಗಳು ಹೋಟೆಲ್‌ಗಳಲ್ಲಿ, ಸಾವಾಜಿ ಖಾನಾವಳಿ, ಡಾಬಾಗಳಲ್ಲಿ ಮೋಜು ಮಸ್ತಿ ಮಾಡುವುದನ್ನು ಜನತೆ ನೋಡಿದ್ದಾರೆ. ಆದ್ದರಿಂದ ಯಾವುದೇ ಅಕ್ರಮದಂಧೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಂತೆ ಅಗಿದೆ ಎಂದು ಹೆಸರು ಹೇಳಲುಚ್ಚಿಸದ ಗ್ರಾಮಸ್ಥರೊಬ್ಬರು ಆರೋಪಿಸಿದರು. ತಕ್ಷಣವೇ ನಿಧಿ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.