ನಾಯಿಗಳಿಗೆ ಮೈಕ್ರೋ ಚಿಪ್‌: ಬಿಬಿಎಂಪಿಗೆ ನೋಟಿಸ್‌ ಜಾರಿ

| Published : May 12 2024, 01:15 AM IST

ನಾಯಿಗಳಿಗೆ ಮೈಕ್ರೋ ಚಿಪ್‌: ಬಿಬಿಎಂಪಿಗೆ ನೋಟಿಸ್‌ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ಬಿಬಿಎಂಪಿ ಟೆಂಡರ್ ಕರೆದಿರುವ ಸಂಬಂಧ ರಾಜ್ಯ ಸರ್ಕಾರ ಹಾಗೂ ಪಾಲಿಕೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ಬಿಬಿಎಂಪಿ ಟೆಂಡರ್ ಕರೆದಿರುವ ಸಂಬಂಧ ರಾಜ್ಯ ಸರ್ಕಾರ ಹಾಗೂ ಪಾಲಿಕೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಟೆಂಡರ್‌ ಪ್ರಕ್ರಿಯೆ ಪ್ರಶ್ನಿಸಿ ನಗರದ ಹೆಬ್ಬಾಳ ನಿವಾಸಿ ಎಸ್‌.ಪ್ರಿಯದರ್ಶಿನಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್‌ ಯಾದವ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಜೂನ್‌ ಮೊದಲ ವಾರಕ್ಕೆ ಮುಂದೂಡಿದೆ.

ನಗರದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಡಿಸಿದ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ಬಿಬಿಎಂಪಿ ಟೆಂಡರ್ ಕರೆದಿದೆ. ಆದರೆ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ .ಜತೆಗೆ, ಲಸಿಕೆ ಮತ್ತು ಮೈಕ್ರೊಚಿಪ್‌ ಅಳವಡಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಟೆಂಡರ್ ಕರೆಯುವ ಅಧಿಕಾರವನ್ನೂ ಬಿಬಿಎಂಪಿ ಹೊಂದಿಲ್ಲ. ಟೆಂಡರ್‌ ಪ್ರಕ್ರಿಯೆಯಲ್ಲಿ ಎಸ್‌ಒಪಿ ಅನುಸರಿಸಿಲ್ಲ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅಲ್ಲದೆ, ಮೈಕ್ರೋಚಿಪ್‌ ಅಳವಡಿಕೆ ನಂತರ ನಾಯಿಗಳು ಎದುರಿಸುವ ಪ್ರತಿಕೂಲ ಪರಿಣಾಮಗಳಿಗೆ ಯಾರು ಜವಾಬ್ದಾರರಾಗಿರುತ್ತಾರೆ ಎಂಬುದನ್ನು ಖಚಿತಪಡಿಸಿಲ್ಲ. ಸಮರ್ಪಕ ಅಧ್ಯಯನ ಮಾಡದೇ ಟೆಂಡರ್‌ ಕರೆಯಲಾಗಿದೆ. ಈ ಯೋಜನೆಗೆ ಸಾರ್ವಜನಿಕ ಹಣದ ವ್ಯರ್ಥ ಮಾಡುವ ಜತೆಗೆ ಮುಗ್ಧ ಪ್ರಾಣಿಗಳ ಜೀವದ ಜತೆ ಚೆಲ್ಲಾಟ ಆಡಲಾಗುತ್ತಿದೆ. ಆದ್ದರಿಂದ ಟೆಂಡರ್ ಪ್ರಕ್ರಿಯೆ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೆ ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಚಿಪ್ ಅಳವಡಿಸುವುದಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.