ಸಾರಾಂಶ
ಕೋಲಾರ : ರಾಜ್ಯದಲ್ಲಿ 5 ರುಪಾಯಿ ಹಾಲಿನ ದರ ಏರಿಕೆ ಕುರಿತು ಸಿಎಂ ಸಿದ್ದರಾಮಯ್ಯ ಮುನ್ಸೂಚನೆ ವಿಚಾರಕ್ಕೆ ಸಂಬಂಧಿಸದಂತೆ ಮಾತನಾಡಿದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ್ಯ, ಶಾಸಕ ಕೆ.ವೈ.ನಂಜೇಗೌಡ, ಹಾಲು ದರ ಹೆಚ್ಚಿಸುವಂತೆ ಹಾಲು ಒಕ್ಕೂಟ, ಸಹಕಾರ ಸಂಘಗಳಿಂದ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿರುವುದಾಗಿ ಹೇಳಿದರು.
ತಾಲೂಕಿನ ರಾಮಸಂದ್ರ ಬಳಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಹಾಲಿನ ದರ ಕಡಿಮೆ ಇದೆ, ಅದಕ್ಕಾಗಿ ಹಾಲಿನ ದರ ಏರಿಕೆ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಮ್ಮ ಬೆಂಬಲವಿದೆ ಎಂದು ಹೇಳಿದರಲ್ಲದೆ, ಹಾಲು ದರ ಏರಿಸಿ, ನೇರವಾಗಿ ರೈತರಿಗೆ ನೀಡಲು ನಿರ್ಧಾರ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಹಾಲಿನ ದರ ಕಡಿಮೆ
ಹಾಲು ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಲ್ಲ ರೈತರ ಕಲ್ಯಾಣಕ್ಕೆ ಹಾಲು ದರ ಏರಿಸುವ ಅನಿವಾರ್ಯತೆ ಇದೆ ಹಾಲಿನ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ದರ ಏರಿಕೆ ಅವಶ್ಯಕತೆ ಇದೆ ಅದಕ್ಕಾಗಿ ನಾವು ಸಹ ಸಿಎಂಗೆ ಸಲಹೆ ನೀಡಿದ್ದೇವೆ. ಬೇರೆ ರಾಜ್ಯದಲ್ಲಿ ಹಾಲು ದರಕ್ಕೂ, ಕರ್ನಾಟಕ ರಾಜ್ಯದಲ್ಲಿ ಹಾಲು ದರಕ್ಕೆ ೮ ರುಪಾಯಿ ವ್ಯತ್ಯಾಸವಿದೆ. ಹಾಲು ಉತ್ಪಾದನೆಗೆ ವೆಚ್ಚ ಹೆಚ್ಚಾಗಿದ್ದು, ದರ ಏರಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ವಿಪಕ್ಷಗಳು ಹಾಲು ದರ ಏರಿಕೆಗೆ ವಿರೋಧ ಮಾಡುತ್ತಿವೆ. ಎರಡು ತಿಂಗಳು ಮಾತ್ರ ಪ್ರೋತ್ಸಾಹ ಧನ ಬಾಕಿ ಇದೆ ನಮ್ಮ ಸರ್ಕಾರ ರೈತರ ಪರವಾಗಿದೆ, ರೈತರನ್ನು ಪ್ರೋತ್ಸಾಹಿಸುತ್ತಿದೆ. ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ ಆದರೆ ವಿಪಕ್ಷಗಳು ಮಾತ್ರ ಇದನ್ನ ಬಳಿಸಿಕೊಂಡು ಸರ್ಕಾರದ ವಿರುದ್ದ ಜನರನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.