ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯಾದ್ಯಂತ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಾರಂಭವಾಗಿದ್ದು, ಬುಧವಾರ ತಮ್ಮ ಗೃಹ ಕಚೇರಿಗೆ ಆಗಮಿಸಿದ ಬಿ.ಎಲ್.ಓ ಗಳಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರ ಅಗತ್ಯ ದಾಖಲೆ ಮತ್ತು ಮಾಹಿತಿ ನೀಡಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾದರು.ಬಳಿಕ ಮಾತನಾಡಿದ ಅವರು, ಅರ್ಹ ಯಾವೊಬ್ಬ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು. ಬೇರೆ ಊರುಗಳಲ್ಲಿ ಉದ್ಯೋಗದಲ್ಲಿರುವ ಜನರು, ಗುಳೆ ಹೋದವರು ಸೇರಿ ಯಾರ ಹೆಸರನ್ನೂ ಕೈ ಬಿಡಬಾರದು. ನಾವೂ ಕೂಡ ಪಕ್ಷದಿಂದ ಜನಜಾಗೃತಿ ಮೂಡಿಸುತ್ತಿದ್ದೇವೆ. ಅರ್ಹ ಮತದಾರರು ತಮ್ಮ ಮನೆಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ದಾಖಲೆ ಮತ್ತು ಮಾಹಿತಿ ನೀಡಿ ಸಹಕರಿಸಬೇಕು. ಮತದಾರರ ಪಟ್ಟಿಯಲ್ಲಿ ವಿವರಗಳು ಸರಿಯಾಗಿ ದಾಖಲಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಈ ಮೂಲಕ ಪ್ರಜಾಪ್ರಭುತ್ವ ಬಲಪಡಿಸಬೇಕು. ಮತ ಪ್ರತಿಯೊಬ್ಬರ ಹಕ್ಕಾಗಿದ್ದು, ಪ್ರತಿಯೊಂದು ಮತ ರಾಜ್ಯ ಮತ್ತು ದೇಶದ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ದಾಖಲಾಗಿರುವ ಕುರಿತು ಖಚಿತ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಅನರ್ಹರು, ಎರಡು ಕಡೆ ಹೆಸರು ಹೊಂದಿರುವವರ ವ್ಯಕ್ತಿಗಳ ಒಂದು ಕಡೆಯ ಹೆಸರನ್ನು ಬೇಕಿದ್ದರೆ ತೆಗೆಯಲಿ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಪರಿಷ್ಕರಣೆ ಆಗಲಿ, ಆದರೆ ಅರ್ಹರು ಹೊರಗುಳಿಯಬಾರದು. ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯದವರನ್ನು ಉದ್ದೇಶಪೂರ್ವಕವಾಗಿ ಹೊರಗಿಡಬಾರದು. ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇರಬಾರದು. ಪರಿಷ್ಕರಣೆಗೆ ಪಾಸ್‌ಪೋರ್ಟ್ ಹಾಗೂ ಆಧಾರ ಕಾರ್ಡ್ ನಡೆಯುವುದಿಲ್ಲ ಎಂಬ ನಿಯಮದ ವಿರುದ್ಧ ಕಿಡಿ ಕಾರಿದ ಅವರು, ಇದು ತೊಂದರೆ ಕೊಡೋ ಕೆಲಸ, ಅವರ ಉದ್ದೇಶವೇ ಬೇರೆಯಿದೆ. ಅರ್ಹರಲ್ಲದವರನ್ನು ಕೈಬಿಟ್ಟರೆ ಸಮಸ್ಯೆಯಿಲ್ಲ, ಆದರೆ ಅರ್ಹರನ್ನು ಕೈಬಿಡಬಾರದು. ಪಶ್ಚಿಮ ಬಂಗಾಳದ ಎಸ್‌ಐಆರ್ ಕುರಿತು ಉಲ್ಲೇಖಿಸಿದರು.ಎಸ್‌ಐಆರ್ ಪರಿಷ್ಕರಣೆ ನಡೆಸಿದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರೋ ವಿಚಾರದ ಕುರಿತು ಮಾತನಾಡಿ, 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. 136 ಸ್ಥಾನಗಳಿಂದ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಆದ ಪರಿಸ್ಥಿತಿ ಕರ್ನಾಟಕದಲ್ಲಿಯೂ ಆಗಲು ಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಆಯುಕ್ತ ಮತ್ತು ವಿಜಯಪುರ ನಗರ ವಿಧಾನಸಭೆ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ನಗರ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 46ರ ಬಿಎಲ್.ಓ ಎ.ಎಚ್. ಬಿಜ್ಜೂರ, ಮೇಲ್ವಿಚಾರಕ ಸುರೇಶ ಬಿರಾದಾರ ಹಾಗೂ ಸಿಬ್ಬಂದಿ ಉಸ್ಥಿತರಿದ್ದರು.
ರೈಲ್ವೆ ಕೋಚ್ ಡಿಪೋ ಸ್ಥಾಪನೆ, ಇನ್ನೊಂದು ಆಗಮನ, ನಿರ್ಗಮನ ದ್ವಾರ:
ಜಿಲ್ಲಾ ಕೇಂದ್ರದಲ್ಲಿ ರೈಲ್ವೆ ಸಂಪರ್ಕ ಬಲವರ್ಧನೆಗಾಗಿ ಕೋಚ್ ಡಿಪೋ ಸ್ಥಾಪಿಸಬೇಕು ಮತ್ತು ರೈಲು ನಿಲ್ದಾಣದಲ್ಲಿ ಇನ್ನೊಂದು ಆಗಮನ ಮತ್ತು ನಿರ್ಗಮನ ದ್ವಾರ ಅಭಿವೃದ್ಧಿ ಪಡಿಸಬೇಕೆಂದು ಕೋರಿ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣನವರ ಜತೆ ಚರ್ಚಿಸಲಾಗಿದೆ. ಈ ಸಂಬಂಧವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಹಾಗೂ ಸೋಮಣ್ಣನವರಿಗೂ ಪತ್ರ ಬರೆಯಲಾಗಿದೆ. ಹಿಂದೆ ವಿಜಯಪುರ ರೈಲು ನಿಲ್ದಾಣದ ಆವರಣದಲ್ಲೇ ಇದ್ದ ಗೂಡ್ಸ್ ಶೆಡ್‌ನ್ನು ಈಗ ಅಲಿಯಾಬಾದಿಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಕೋಚ್ ಡಿಪೋ ಸ್ಥಾಪನೆಗೆ ಜಾಗದ ಕೊರತೆಯೇನೂ ಇಲ್ಲ. ಇಲ್ಲಿ ಕೋಚ್ ಡಿಪೋ ಬಂದರೆ ಇದನ್ನು ನಿರ್ವಹಣೆ ಹಬ್ ಆಗಿ ಬೆಳೆಸಬಹುದು. ವಿಜಯಪುರ ಮತ್ತು ಉತ್ತರ ಕರ್ನಾಟಕದ ಪ್ರದೇಶಗಳಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ರೈಲು ಸಂಪರ್ಕ ಒದಗಿಸಬಹುದು. ವಿಜಯಪುರ ಚಾರಿತ್ರಿಕ ಸ್ಥಳವಾಗಿದ್ದು, ವರ್ಷವಿಡೀ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿರುವ ಪ್ರವಾಸೋದ್ಯಮ ತಾಣವಾಗಿದೆ. ಅದರಲ್ಲೂ ವಾರಾಂತ್ಯ, ಹಬ್ಬ ಹರಿದಿನಗಳು ಮತ್ತು ರಜೆ ದಿನಗಳಲ್ಲಿ ಜನದಟ್ಟಣೆ ಸೃಷ್ಟಿಯಾಗುತ್ತದೆ. ಆದ್ದರಿಂದ ವಿಜಯಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಇನ್ನೊಂದು ಆಗಮನ-ನಿರ್ಗಮನ ದ್ವಾರ ಸ್ಥಾಪಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದೇನೆ. ಕಳೆದ ಸೋಮವಾರ ನಡೆದ ರೈಲ್ವೆ ಇಲಾಖೆಯ ಕಾರ್ಯಕ್ರಮದ ಸಂದರ್ಭದಲ್ಲಿ ಈ ವಿಚಾರಗಳನ್ನು ಸೋಮಣ್ಣ ಅವರೊಂದಿಗೆ ಚರ್ಚಿಸಲಾಗಿದೆ. ಅವರಿಂದ ಸಕಾರಾತ್ಮಕ ಸ್ಪಂದನ ಸಿಕ್ಕಿದೆ. ಈ ಬೇಡಿಕೆಗಳು ಈಡೇರಿದರೆ, ಕೆಲವೇ ತಿಂಗಳಲ್ಲಿ ಆರಂಭವಾಗಲಿರುವ ಬೆಂಗಳೂರು-ವಿಜಯಪುರ ವಂದೇ ಭಾರತ್ ಎಕ್ಸಪ್ರೆಸ್ ಸೇವೆಯ ನಿರ್ವಹಣೆ ಕೂಡ ಸುಲಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.