ಸಾರಾಂಶ
ಮತದಾರರಿಗೆ ಧನ್ಯವಾದ ಸಲ್ಲಿಸಿದ ಉಸ್ತುವಾರಿ ಮಂತ್ರಿ । ಬಸವೇಶ್ವರರ ಪುತ್ಥಳಿ ನಿರ್ಮಾಣ ಕಾಮಗಾರಿ ವೀಕ್ಷಣೆ
ಕನ್ನಡಪ್ರಭ ವಾರ್ತೆ ಸಕಲೇಶಪುರಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿದ್ದಕ್ಕೆ ಜಿಲ್ಲೆಯ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹೇಳಿದರು.
ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಶನಿವಾರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಸವೇಶ್ವರರ ಪುತ್ಥಳಿ ಕಾಮಗಾರಿ ವೀಕ್ಷಿಸಿದ ನಂತರ ಮಾತನಾಡಿ, ‘ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದೆ. ವೀರಶೈವ ಸಮಾಜದ ವತಿಯಿಂದ ನಿರ್ಮಾಣವಾಗುತ್ತಿರುವ ಬಸವೇಶ್ವರ ಪುತ್ಥಳಿಯ ಅನಾವರಣ ಇದೇ ೧೩ರಂದು ಆಗುತ್ತಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಅದೇ ದಿನ ಮುಖ್ಯಮಂತ್ರಿ ಅವರು ಸಚಿವ ಸಂಪುಟ ಸಭೆ ಕರೆದಿರುವುದರಿಂದ ನಾನು ಇಂದು ಪುತ್ಥಳಿಯ ಕಾಮಗಾರಿ ವೀಕ್ಷಿಸುತ್ತಿದ್ದೇನೆ. ಅಂದು ಮಧ್ಯಾಹ್ನದ ನಂತರ ನಾನು ಸಚಿವ ಈಶ್ವರ್ ಖಂಡ್ರೆಯವರೊಂದಿಗೆ ಇಲ್ಲಿಗೆ ಬರಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.ತುಮಕೂರು ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ:
ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು, ತುಮಕೂರಿನಲ್ಲಿ ಸೋಲು ಕುರಿತ ಪ್ರಶ್ನೆಗೆ ಉತ್ತರಿಸಿ, ‘ನಾನು ಹಾಸನ ಜಿಲ್ಲಾ ಉಸ್ತುವಾರಿಯಾಗಿದ್ದು, ಗೃಹ ಸಚಿವ ಪರಮೇಶ್ವರ್ ತುಮಕೂರಿನ ಉಸ್ತುವಾರಿಯಾಗಿದ್ದರು. ತುಮಕೂರಿನಲ್ಲಿ ನಾನು ಹಾಗೂ ಪರಮೇಶ್ವರ್ ಇಬ್ಬರೂ ಇದ್ದದ್ದರಿಂದ ನಾನು ಹಾಸನದ ಚುನಾವಣೆಗೆ ಹೆಚ್ಚು ಒತ್ತು ಕೊಟ್ಟೆ. ತುಮಕೂರು ಚುನಾವಣೆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಮಧುಗಿರಿ ಕ್ಷೇತ್ರಕ್ಕೆ ಸೀಮಿತವಾಗಿದ್ದೆ. ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸದಿದ್ದರೆ ಹಾಸನಕ್ಕೆ ಬರಲ್ಲ ಅಂತ ಹೇಳಿದ್ದೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಪಕ್ಷದವರು, ಜಾತಿಯವರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿದ್ದಾರೆ’ ಎಂದು ಹೇಳಿದರು.‘ಪುಟ್ಟಸ್ವಾಮಿಗೌಡರ ಹೆಸರಿನ ಮೇಲೆ ಶ್ರೇಯಸ್‌ಗೆ ಹೆಚ್ಚಿನ ಬಹುಮತ ಬರಲು ಸಾಧ್ಯವಾಗಿದೆ. ನಾನು ಶ್ರೇಯಸ್ ಗೆಲ್ಲಿಸಿದ್ದೀನಿ ಅಂತ ಹೇಳಿದರೆ ಅದು ದುರಂಹಕಾರದ ಮಾತಾಗುತ್ತದೆ. ಈ ಕ್ಷೇತ್ರದ ಜನರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಬೇಕು. ತುಮಕೂರಿನಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ನಾನೇ, ಅದರಲ್ಲಿ ಅನುಮಾನ ಏನು ಇಲ್ಲ. ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಎರಡು ಸಾವಿರ ಮತವೂ ಇರಲಿಲ್ಲ, ನಾನು ಅವರಿಗೆ ಎಂಬತ್ತು ಸಾವಿರ ಮತ ಕೊಡಿಸಿದೆ. ದೇವೇಗೌಡರು ಸೋಲಲು ನಾನೇ ಕಾರಣ. ದೇವೇಗೌಡರು ತುಮಕೂರಿಗೆ ಬಂದು ನನ್ನನ್ನು ಸೋಲಿಸಿ ಎಂದು ಕಣ್ಣೀರಿಟ್ಟರು. ಆದರೆ ಏನು ಪ್ರಯೋಜನವಾಗಿಲ್ಲ. ನಾನು ಮುಚ್ಚು ಮರೆ ಮಾಡುವ ಅವಶ್ಯಕತೆ ಏನಿಲ್ಲ’ ಎಂದು ತಿಳಿಸಿದರು.
ಈ ಸಂರ್ಧಭದಲ್ಲಿ ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್ ದೇವರಾಜ್, ಕಾಂಗ್ರೆಸ್ ಮುಖಂಡರಾದ ನಾಗರ ಹಿತು, ಪಾಪಣ್ಣ, ಬೈಕೆರೆ ದೇವರಾಜ್, ಕೊಲ್ಲಹಳ್ಳಿ ಸಲೀಂ, ಮುಪೀಜ್ ಮುಂತಾದವರು ಹಾಜರಿದ್ದರು.