ಕೆ.ಆರ್. ಕ್ಷೇತ್ರವೂ ಮತಗಳ್ಳತನದಿಂದ ಹೊರತಾಗಿಲ್ಲ

| Published : Oct 20 2025, 01:02 AM IST

ಸಾರಾಂಶ

ಕೃಷ್ಣರಾಜ ವಿಧಾನಸಭಾ ಕ್ಷೇತ್ರವೂ ಮತಕಳ್ಳತನದಿಂದ ಹೊರತಾಗಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿಯ ಮತಕಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನವನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಕೃಷ್ಣರಾಜ ಮತ್ತು ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿದ್ಯಾರಣ್ಯಪುರಂನ ಚಾಮುಂಡಿವನದ ಸ್ಟರ್ಲಿಂಗ್ ಥಿಯೇಟರ್ ಬಳಿ ಭಾನುವಾರ ನಡೆಸಲಾಯಿತು.

ಈ ಸಹಿ ಸಂಗ್ರಹ ಅಭಿಯಾನದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕೃಷ್ಣರಾಜ ವಿಧಾನಸಭಾ ಕ್ಷೇತ್ರವೂ ಮತಕಳ್ಳತನದಿಂದ ಹೊರತಾಗಿಲ್ಲ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲೂ 25 ಸಾವಿರ ಕಳ್ಳಮತವನ್ನು ಬಿಜೆಪಿ ಸರ್ಕಾರ ಆಡಳಿತವಿದ್ದಾಗ ಸೇರಿಸಿದ್ದರು ಎಂದು ಆರೋಪಿಸಿದರು.

ನಮ್ಮ ಕಾರ್ಯಕರ್ತರು ಮತದಾರರ ಅಂತಿಮ ಪಟ್ಟಿಯೊಂದಿಗೆ ಮನೆ ಮನೆ ಬಳಿಗೆ ತೆರಳಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಶ್ರೀರಾಂಪುರ, ಕುವೆಂಪುನಗರ, ವಿವೇಕಾನಂದರ, ಎಸ್.ಬಿ.ಎಂ ಬಡಾವಣೆ, ಜೆ.ಪಿ. ನಗರ ಭಾಗದಲ್ಲಿ ಖಾಲಿ ನಿವೇಶನಗಳು, ವಾಸವಿಲ್ಲದ ಮನೆಗಳ ನಂಬರ್ ಗಳಲ್ಲಿ 10, 15 ಮತಗಳನ್ನು ಸೇರಿಸಿದ್ದರು. ಕೆಲವೊಂದು ಮನೆಗಳಿಗೆ ಸಂಬಂಧ ಇಲ್ಲದಂತಹ ಬಿಜೆಪಿ ಪರ ಇರುವಂತಹ ಮತಗಳನ್ನು ಸೇರಿಸಿದ್ದರು. ಅಂತಹ ಕಳ್ಳಮತಗಳನ್ನು ಸಾಕ್ಷಿ ಸಮೇತ ಹುಡುಕಿ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಡಿಲೀಟ್ ಮಾಡಲಿಲ್ಲ. ಆ ರೀತಿ ಇನ್ನೂ ಸಾವಿರಾರು ಕಳ್ಳಮತಗಳು ಅಲ್ಲಲ್ಲಿ ಉಳಿದಿವೆ ಎಂದು ಅವರು ದೂರಿದರು.

ನಾವು ಈ ರೀತಿ ಪತ್ತೆ ಹಚ್ಚಿ ಡಿಲೀಟ್ ಮಾಡಿಸಲು ಪ್ರಯತ್ನಿಸಿದಾಗ ಬಿಜೆಪಿಯವರು ನಮ್ಮ ಮತವನ್ನು ತೆಗೆಯುತ್ತಿದ್ದಾರೆ ಎಂಬ ನಾಟಕವನ್ನು ಆ ಸಂದರ್ಭಲ್ಲಿ ಮಾಡುವ ಮೂಲಕ ಸಿಂಪತಿ ಗಿಟ್ಟಿಸುವ ಸಲುವಾಗಿ ಪ್ರಚಾರ ಪಡೆದಿದ್ದರು. ನಮ್ಮ ಕಾರ್ಯಕರ್ತರು ಪ್ರತೀ ಬೂತ್ ಗಳಲ್ಲಿಯೂ ಕಳ್ಳಮತ ಪತ್ತೆ ಹಚ್ಚಲು ಜಾಗೃತ ವಹಿಸುತ್ತಿದ್ದಾರೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರದ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ, ಅಭಿವೃದ್ಧಿ ಬಗ್ಗೆ ಚಿಂತನೆಯೂ ಇಲ್ಲ. ಕೋಮು ಸಾಮರಸ್ಯವನ್ನು ಕದಡಿ ಧರ್ಮವನ್ನು ಒಡೆದು ಆಳುವುದೇ ಬಿಜೆಪಿ ಸರ್ಕಾರದ ಉದ್ದೇಶ. ಮತಕಳ್ಳತನದ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೋಲೆಗೆ ಕೈ ಹಾಕಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದಂತಹ ಅಧಿಕಾರ ದುರುಪಯೋಗ ಹಿಂದಿನ ಯಾವ ಸರ್ಕಾರಗಳು ಮಾಡಿಲ್ಲ. ಇಡಿ, ಸಿಬಿಐ ಅಂತಹ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಲ್ಲದೆ ಪ್ರಸ್ತುತ ಮತಕಳ್ಳತನದಂತಹ ಸಂವಿಧಾನ ವಿರೋಧಿ ಚಟುವಟಿಕೆಗೆ ಕೈ ಹಾಕಿರುವುದು ನಾಚಿಕೆಗೇಡಿನ ವಿಷಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ನಗರ ಪಾಲಿಕೆ, ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗಳಲ್ಲಿಯೂ ಮತಕಳ್ಳತನವನ್ನು ಮುಂದುವರೆಸುವ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಿಡುವುದಿಲ್ಲ. ಈಗಾಗಲೇ ದೇಶದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 5 ರಿಂದ 10 ಸಾವಿರ ಮತಕಳ್ಳತನ ಮಾಡಿದ್ದು, ಅದು ಒಂದು ಲೋಕಸಭೆಗೆ 50 ಸಾವಿರ ಮತಕಳ್ಳತನ ಮಾಡಿದೆ. ಆ ಮೂಲಕ ದೇಶದಲ್ಲೆಡೆ ಹಲವಾರು ಬಿಜೆಪಿ ಸಂಸದರ ಗೆಲುವಿಗೆ ಸಹಕಾರಿಯಾಗಿದೆ. ಇಂತಹ ಮತಕಳ್ಳತನವನ್ನು ತಡೆಗಟ್ಟಲು ಪ್ರತೀ ವಾರ್ಡ್, ಬೂತ್ ಗಳಲ್ಲಿಯೂ ಕಾಂಗ್ರೆಸ್ ಪಕ್ಷ ಸಕ್ರೀಯವಾಗಿ ಕೆಲಸ ನಿರ್ವಹಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಮೂಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಮೇಯರ್ ಗಳಾದ ಟಿ.ಬಿ. ಚಿಕ್ಕಣ್ಣ, ನಾರಾಯಣ್, ಪುಷ್ಪಲತಾ ಚಿಕ್ಕಣ್ಣ, ಮಾಜಿ ಉಪ ಮೇಯರ್ ಸಿದ್ದರಾಜು, ಪಾಲಿಕೆ ಮಾಜಿ ಸದಸ್ಯರಾದ ಎಂ. ಸುನೀಲ್, ಜೆ. ಗೋಪಿ, ಶೋಭಾ ಸುನೀಲ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮುಖಂಡರಾದ ಜೋಗಿ ಮಹೇಶ್, ಲತಾ ಮೋಹನ್, ವೀಣಾ, ನಾಗರತ್ನಾ, ಕಮಲಾ, ಮಲ್ಲಾಜಮ್ಮ, ಆರ್.ಎಚ್. ಕುಮಾರ್, ನಿರಾಲ್ ಶಾ, ಭವ್ಯಾ, ಇಂದಿರಾ, ಜ್ಯೋತಿ, ಲಕ್ಷ್ಮಿ, ಸರಸ್ವತಿ, ಶಂಕರ್, ಗುಣಶೇಖರ್, ಸೋಮು, ವಿಶ್ವನಾಥ್, ವೆಂಕಟೇಶ್, ರಮೇಶ್ ರಾಮಪ್ಪ, ಜಗನ್ನಾಥ್ ಭೋವಿ, ಮಹೇಂದ್ರ ಗೌಡ, ಸಿದ್ಧರಾಮು, ಮಹದೇವು, ರಾಕೇಶ್, ನವೀನ್ ಎಂ. ಕೆಂಪಿ, ಲಖನ್, ಹೇಮಾ ಪುಟ್ಟಸ್ವಾಮಿ, ಹೇಮಂತ್ ಗೌಡ, ಮಲ್ಲೇಶ್, ಮದನ್, ಮನೋಜ್ ಪೈ, ರವೀಶ್, ಅರುಣ್ ಗಂಗಾಧರ್, ಅಜಯ್, ಕಲೀಂ ಷರೀಫ್, ನಾಸೀರ್ ಮೊದಲಾದವರು ಇದ್ದರು.