ಸಾರಾಂಶ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಗೆ ಬೆಳೆಗಳನ್ನು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ವೀಕ್ಷಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಗೆ ಬೆಳೆಗಳನ್ನು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ವೀಕ್ಷಣೆ ಮಾಡಿದರು.ತಾಲೂಕಿನ ಬಿಲ್ಕೆರೂರ ಗ್ರಾಮದ ರೈತರಾದ ಚಿನ್ನವ್ವ ಕುರಿ, ಹನುಮಂತ ಮೇಲ್ಯಾಡ ಬೆಳೆದ ಈರುಳ್ಳಿ, ಸಂಗವ್ವ ಮಾದರ ಅವರು ಬೆಳೆದ ತೊಗರಿ ಬೆಳೆ, ಬೋಡನಾಯಕನದಿನ್ನಿ ಗ್ರಾಮದ ರೈತರದಾರ ಹನುಮಂತ ಹೂಗಾರ ಬೆಳೆದ ಈರುಳ್ಳಿ, ಸಂಗಾಪೂರ ಗ್ರಾಮದ ರೈತರಾದ ವಿರೂಪಾಕ್ಷ ಕುರಿ ಹಾಗೂ ಭಗವತಿ ಗ್ರಾಮದ ರೈತರಾದ ಶಿವಪ್ಪ ಕುರಹಟ್ಟಿ, ಪರಮೇಶ್ವರ ಕುಂಬಾರ ಬೆಳೆದ ಈರುಳ್ಳಿ ಬೆಳೆಹಾನಿ ಕ್ಷೇತ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಪ್ರಸ್ತುತ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ಬಹಳ ಸೂಕ್ಷ್ಮ ಬೆಳೆಗಳಾಗಿದ್ದು, ಹೆಚ್ಚಿನ ತೇವಾಂಶದಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ಬೇರುಗಳಲ್ಲಿ ಕೊಳೆ ಬರಲು ಪ್ರಾರಂಭವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಹೆಚ್ಚಿನ ಹಾನಿ ಉಂಟಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು. ಕೃಷಿ ಬೆಳೆಗಳಾದ ಸೂರ್ಯಕ್ರಾಂತಿ, ತೊಗರಿ, ಹೆಸರು ಬೆಳೆಗಳು ಮಳೆಗೆ ಹಾನಿಯಾಗಿದ್ದು, ಹೆಚ್ಚಿನ ಮಳೆಯಿಂದ ಸೂರ್ಯಕಾಂತಿಯಲ್ಲಿ ಕಾಳು ಕಟ್ಟದೇ ಹಾನಿಯಾಗಿದೆ ಎಂದು ಸ್ಥಳೀಯ ರೈತರು ಹಾಗೂ ಅಧಿಕಾರಿಗಳು ತಿಳಿಸಿದರು.ವಿಜ್ಞಾನಿಗಳು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ರೀತಿಯಲ್ಲಿ ಬೆಳೆ ವೀಕ್ಷಿಸಿ ಮುಂಬರುವ ದಿನಗಳಲ್ಲಿ ರೈತರಿಗೆ ಅವಶ್ಯವಿರುವ ಮಾಹಿತಿ ನೀಡಲು ಶಾಸಕ ಮೇಟಿ ತಿಳಿಸಿದರು. ಹಾನಿಗೊಳಗಾದ ಬೆಳೆಗಳ ಕುರಿತು ಸಮಗ್ರ ಮಾಹಿತಿ ನೀಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಭೇಟಿ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಕೃಷಿ ಉಪನಿರ್ದೇಶಕ ಎಲ್.ಐ. ರೂಢಗಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ತಾಲೂಕು ಮಟ್ಟದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು.