ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಂಡಸ್ತನ ಮತ್ತು ತಾಕತ್ತಿನ ಬಗ್ಗೆ ಪ್ರಶ್ನೆ ಮಾಡಿದ ಕ್ಷೇತ್ರದ ಶಾಸಕರ ಬಗ್ಗೆ ಜನರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಗಳವಾರ ಹೇಳಿದರು.ತಾಲೂಕಿನ ಸೋಮನಹಳ್ಳಿಯ ಅಡಿಗಾಸ್ ಹೋಟೆಲ್ ಬಳಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿ, ಮಂಡ್ಯ ಜಿಲ್ಲೆಯ ಜನರು ಪ್ರಬುದ್ಧ ಮತದಾರರಾಗಿದ್ದಾರೆ. ತಮ್ಮನ್ನು ಗೌರಯುತವಾಗಿ ನಡೆಸಿಕೊಂಡ ರಾಜಕಾರಣಿಗಳನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಮೆರೆಸುತ್ತಾರೆ. ದುರಂಕಾರದಿಂದ ಮೆರೆಯುವ ಯಾವುದೇ ರಾಜಕಾರಣಿಗಳಿಗೆ ಯಾವ ರೀತಿ ಪಾಠ ಕಲಿಸಬೇಕು ಎನ್ನುವುದು ಅವರಿಗೆ ಗೊತ್ತಿದೆ ಎನ್ನುವ ಮೂಲಕ ಶಾಸಕ ಕೆ.ಎಂ.ಉದಯ್ ವಿರುದ್ಧ ಪರೋಕ್ಷವಾಗಿ ನಿಖಿಲ್ ಕಿಡಿಕಾರಿದರು.
ಆರತಿ ಬೆಳಗಿ ಮಹಿಳೆಯರ ಸ್ವಾಗತ:ಪಾದಯಾತ್ರೆ ವೇಳೆ ತಾಲೂಕಿನ ವಿವಿಧ ಗ್ರಾಮಗಳ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿಗೆ ಹೂವಿನ ಸುರಿಮಳೆ ಸುರಿಸಿದರು. ಮಹಿಳೆಯರು ಆರತಿ ಬೆಳಗಿ ನಿಖಿಲ್ ಗೆ ಸ್ವಾಗತ ನೀಡಿ ಆಶೀರ್ವಾದ ಮಾಡಿದರು. ಹೆದ್ದಾರಿಯಲ್ಲಿ ಪಾದಯಾತ್ರೆ ವೇಳೆ ತಮಟೆ ಸದ್ದಿಗೆ ನಿಖಿಲ್ ಕುಣಿದು ನೃತ್ಯ ಮಾಡಿದ್ದು ಗಮನ ಸೆಳೆಯಿತು.
ಪಾದಯಾತ್ರೆ ಮಾರ್ಗ ಮಧ್ಯೆ ಮಂಡ್ಯ ಸಮೀಪ ಮಹಿಳೆಯೊಬ್ಬಳು ನಿಖಿಲ್ ಬಳಿ ತಮ್ಮ ಸಮಸ್ಯೆಗಳ ಬಗ್ಗೆ ಅಹವಾಲು ಹೇಳಿಕೊಂಡರು. ಈ ವೇಳೆ ಪರಿಹರಿಸುವ ಭರವಸೆ ನೀಡಿದರು. ರಸ್ತೆ ಬದಿ ಅಂಗಡಿಗೆ ತೆರಳಿದ ನಿಖಿಲ್ ತಂಪು ಪಾನೀಯ ಸೇವಿಸಿ ಸರಳತೆ ಮೆರೆದರು.ಮದ್ದೂರು ವಡೆ ಸವಿದ ಬಿಜೆಪಿ ನಾಯಕರು:ಬಿಜೆಪಿ - ಜೆಡಿಎಸ್ ನಾಯಕರು ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ತಾಲೂಕು ಹಾಗೂ ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಬೆಂಗಳೂರು - ಮೈಸೂರು ಹೆದ್ದಾರಿಯುದ್ಧಕ್ಕೂ ಸಿಗುವ ಗ್ರಾಮಗಳಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಮೈತ್ರಿ ನಾಯಕರಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಿದರು. ಪಟ್ಟಣದಲ್ಲಿ ಕಾರ್ಯಕರ್ತರು ನೀಡಿದ ಮದ್ದೂರು ವಡೆಯನ್ನು ವಿಜಯೇಂದ್ರ, ಅಶ್ವತ್ಥನಾರಾಯಣ್ ಸೇವಿಸಿದರು.