ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಪ್ರಸ್ತುತ ದಿನಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುರ್ತು ಅಗತ್ಯವೆಂದು ಹೃದೋಗ್ರ ತಜ್ಞ ಡಾ.ಸುಜಯ್ ಹೇಳಿದರು.ವೀರಶೈವ ಸಮಾಜ, ಇನ್ನರ್‍ವೀಲ್ ಕ್ಲಬ್, ಮಹಿಳಾ ಸೇವಾ ಸಮಾಜದ, ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಮಹಿಳಾ ಸೇವಾ ಸಮಾಜದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಕ್ಕರೆ ಕಾಯಿಲೆ, ಕೊಬ್ಬು ಇವುಗಳು ಪ್ರತಿಯೊಬ್ಬರ ಆರೋಗ್ಯವನ್ನು ಹದಗೆಡಿಸುತ್ತವೆ. ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗುತ್ತಿದೆ. ಧೂಮಪಾನ, ಮದ್ಯಪಾನಗಳಿಂದಲೂ ಹೃದಯಾಘಾತ ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುಂದೆ ಆಗಬಹುದಾದ ಅನಾಹುತ ತಡೆಯುವಂತೆ ಸಲಹೆ ನೀಡಿದರು.
ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯವಾಗಿರಬೇಕಾದರೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಂಡು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ತಿಳಿಸಿದರು.ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಸದಾ ಒತ್ತಡದಲ್ಲಿ ಕೆಲಸ ಮಾಡುವ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದರು.
ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಮೋಕ್ಷರುದ್ರಸ್ವಾಮಿ ಮಾತನಾಡಿ 40 ವರ್ಷಗಳ ನಂತರ ಮಹಿಳೆಯರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಸಂಸಾರದ ಕಡೆ ಹೆಚ್ಚಿನ ಗಮನ ಕೊಡುವ ಮಹಿಳೆಯರು ಆರೋಗ್ಯದ ಕಡೆಗೂ ಲಕ್ಷ್ಯ ಕೊಡಬೇಕು ಸಲಹೆ ಮಾಡಿದರು.ಈ ವೇಳೆ ಡಾ.ಪ್ರಶಾಂತ್ ಮಾತನಾಡಿದರು. ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರ, ಖಜಾಂಚಿ ಕೆ.ಎಂ.ತಿಪ್ಪೇಸ್ವಾಮಿ, ಲತ ಉಮೇಶ್, ಇನ್ನರ್ ವೀಲ್ ಕ್ಲಬ್ ಜಂಟಿ ಕಾರ್ಯದರ್ಶಿ ವೀಣ ವೇದಿಕೆಯಲ್ಲಿದ್ದರು.