ದೇಶದ ಅತ್ಯಂತ ಹಿರಿಯ ಶಾಸಕ, ಕಾಂಗ್ರೆಸ್‌ ನಾಯಕ, ಉದ್ಯಮಿ ಹಾಗೂ ವೀರಶೈವ ಲಿಂಗಾಯತ ಮಹಾಸಭಾಗೆ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ (94) ಭಾನುವಾರ ನಿಧನರಾದರು.

- ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರು

- ದೇಶದ ಅತ್ಯಂತ ಹಿರಿಯ ಶಾಸಕ ಶಾಮನೂರು

- 13 ವರ್ಷ ಮಹಾಸಭಾ ಅಧ್ಯಕ್ಷರಾಗಿದ್ದ ಮುಖಂಡ

- ಸುದೀರ್ಘ ಕಾಲ ಮಹಾಸಭಾ ಅಧ್ಯಕ್ಷ ಎಂಬ ಹೆಗ್ಗಳಿಕೆ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದ ಅತ್ಯಂತ ಹಿರಿಯ ಶಾಸಕ, ಕಾಂಗ್ರೆಸ್‌ ನಾಯಕ, ಉದ್ಯಮಿ ಹಾಗೂ ವೀರಶೈವ ಲಿಂಗಾಯತ ಮಹಾಸಭಾಗೆ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ (94) ಭಾನುವಾರ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ, ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಕಳೆದ ಅ.23 ರಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದೂವರೆ ತಿಂಗಳಿನಿಂದ ಅಲ್ಲಿಯೇ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ 6.20ಕ್ಕೆ ಅವರು ಕೊನೆಯುಸಿರೆಳೆದರು ಎಂದು ಸ್ಪರ್ಶ ಆಸ್ಪತ್ರೆಗಳ ಮುಖ್ಯಸ್ಥ ಹಾಗೂ ಮೃತ ಶಾಮನೂರು ಶಿವಶಂಕರಪ್ಪ ಅವರ ಅಳಿಯ ಡಾ.ಶರಣ ಶಿವರಾಜ್‌ ಪಾಟೀಲ್‌ ಮಾಹಿತಿ ನೀಡಿದ್ದಾರೆ.

94 ವರ್ಷ ವಯಸ್ಸಿನ ಶಾಮನೂರು ಅವರು ದೇಶದ ಯಾವುದೇ ರಾಜ್ಯ ವಿಧಾನಸಭೆಯನ್ನು ಪ್ರತಿನಿಧಿಸುವ ಶಾಸಕರ ಪೈಕಿ ಅತ್ಯಂತ ಹಿರಿಯರಾಗಿದ್ದರು. ಪ್ರಸ್ತುತ, ರಾಜ್ಯ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅವರು, ಅದರ ರಾಜ್ಯಾಧ್ಯಕ್ಷರಾಗಿ ಸತತ 13 ವರ್ಷ ಸುದೀರ್ಘ ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ್ದರು.

ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿನ ಧ್ವನಿಯಾಗಿದ್ದ ಶಾಮನೂರು ಶಿವಶಂಕರಪ್ಪ, ಆರು ಬಾರಿ ಶಾಸಕ, ಒಂದು ಬಾರಿ ಸಂಸದ ಹಾಗೂ ತೋಟಗಾರಿಕಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ದಾವಣಗೆರೆ ರಾಜಕಾರಣದ ಮೇಲೆ ತಮ್ಮದೇ ಆದ ಪ್ರಭಾವ ಹೊಂದಿದ್ದ ಅವರು, ಕಾಂಗ್ರೆಸ್‌ ಹಿರಿಯ ತಲೆಗಲ್ಲೊಬ್ಬರಾಗಿದ್ದರು. ಶಾಮನೂರು ಅವರು ಗಣಿಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸೇರಿ ಮೂವರು ಗಂಡು ಮಕ್ಕಳು ಸೇರಿ ಒಟ್ಟು ಏಳು ಮಕ್ಕಳನ್ನು ಅಗಲಿದ್ದಾರೆ. ಇವರ ಸೊಸೆ ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯ ಸಂಸದೆಯಾಗಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ದುಃಖ ಮಡುಗಟ್ಟಿದೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಸೇರಿ ಹಲವು ಗಣ್ಯರು ಮತ್ತು ಪಕ್ಷಾತೀತವಾಗಿ ಶಾಮನೂರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸ್ಪರ್ಶ ಆಸ್ಪತ್ರೆಗೆ ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದ್ದು, ಕೇಂದ್ರ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಉದ್ಯಮಿ ಅಶೋಕ್‌ ಖೇಣಿ, ಸ್ಪರ್ಶ ಆಸ್ಪತ್ರೆ ಡಿಜಿಪಿ ಡಾ.ಎಂ.ಎ.ಸಲೀಂ ಸೇರಿ ಮತ್ತಿತರರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೋಮವಾರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ. ಮಂಗಳವಾರ ದಾವಣಗೆರೆಯ ಕಲ್ಲೇಶ್ವರ ರೈಸ್‌ ಮಿಲ್‌ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.