ಸಾರಾಂಶ
ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ತನ್ನ ನಾಲ್ವರು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ನಾಲ್ವರು ಮಕ್ಕಳು ಮೃತಪಟ್ಟು ತಾಯಿಯನ್ನು ಜನರೇ ಉಳಿಸಿದ ಮನಕಲಕುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬೇನಾಳ ಬ್ರಿಡ್ಜ್ ಬಳಿಯ ಸೋಮವಾರ ನಡೆದಿದೆ.
ಆಲಮಟ್ಟಿ : ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ತನ್ನ ನಾಲ್ವರು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ನಾಲ್ವರು ಮಕ್ಕಳು ಮೃತಪಟ್ಟು ತಾಯಿಯನ್ನು ಜನರೇ ಉಳಿಸಿದ ಮನಕಲಕುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬೇನಾಳ ಬ್ರಿಡ್ಜ್ ಬಳಿಯ ಸೋಮವಾರ ನಡೆದಿದೆ.ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3) ಹಾಗೂ ಅವಳಿ ಮಕ್ಕಳಾದ ಹಸೇನ ನಿಂಗರಾಜ ಭಜಂತ್ರಿ ಹಾಗೂ ಹುಸೇನ ನಿಂಗರಾಜ ಭಜಂತ್ರಿ (13 ತಿಂಗಳು) ಮೃತಪಟ್ಟ ಮಕ್ಕಳು. ಭಾಗ್ಯ ಭಜಂತ್ರಿ ಬದುಕುಳಿದ ತಾಯಿ. ಕಾಲುವೆಗೆ ಬಿದ್ದಿದ್ದ ಮೃತ ಮಕ್ಕಳ ತಾಯಿ ಭಾಗ್ಯಳನ್ನು ಮೀನುಗಾರರೇ ಕಾಲುವೆಯಿಂದ ರಕ್ಷಣೆ ಮಾಡಿದ್ದಾರೆ.
ಭಾಗ್ಯ ತನ್ನ ನಾಲ್ವರು ಮಕ್ಕಳೊಂದಿಗೆ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೌಟುಂಬಿಕ ಕಲಹದಿಂದ ಬೇಸತ್ತು ಭಾಗ್ಯ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು ಎನ್ನಲಾಗಿದೆ.
ಆದರೆ, ದುರಾದೃಷ್ಟವಶಾತ್ ಮಕ್ಕಳು ಮೃತಪಟ್ಟಿವೆ. ಗಾಯಗೊಂಡಿರುವ ಭಾಗ್ಯಳನ್ನು ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಮಕ್ಕಳ ಪೈಕಿ ರಕ್ಷಾ ಹಾಗೂ ತನು ಮೃತದೇಹಗಳು ಪತ್ತೆಯಾಗಿದ್ದು, ಹಸೇನ ಹಾಗೂ ಹುಸೇನ ಎಂಬ ಅವಳಿ ಮಕ್ಕಳ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ನಿಡಗುಂದಿ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.