ಸಾರಾಂಶ
ಚತುಷ್ಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಕಲ್ಲಡ್ಕ ಹಾಗೂ ಮೆಲ್ಕಾರ್ ನಡುವಿನ ಬೋಳಂಗಡಿ ತಿರುವು ಹಾಗೂ ಏರು ರಸ್ತೆ ಇದೀಗ ನೇರ ರಸ್ತೆಯಾಗಿ ಪರಿವರ್ತನೆ ಹೊಂದಿದ್ದು, ಏರು ರಸ್ತೆಯನ್ನು ತಗ್ಗಿಸಿ, ಕಾಂಕ್ರಿಟೀಕರಣದ ಚತುಷ್ಪಥ ರಸ್ತೆ ಸಿದ್ಧವಾಗುತ್ತಿದೆ. ಈ ಚತುಷ್ಪಥ ಹೆದ್ದಾರಿ ಕಾಮಗಾರಿಯ ಕಾರಣದಿಂದ ಹೆದ್ದಾರಿಯಿಂದ ನೇರ ನರಹರಿ ಪರ್ವತ ರಸ್ತೆಗೆ ಸಂಪರ್ಕಿಸುತ್ತಿದ್ದ ರಸ್ತೆಯನ್ನು ಕಡಿದು ಹಾಕಲಾಗಿದೆ.
ಆಟಿ ಅಮಾವಾಸ್ಯೆಯ ತೀರ್ಥ ಸ್ನಾನ ಭಕ್ತರಿಗೆ ಸಾಲುಸಾಲು ಸವಾಲುಮೌನೇಶ ವಿಶ್ವಕರ್ಮ
ಕನ್ನಡಪ್ರಭ ವಾರ್ತೆ ಬಂಟ್ವಾಳಪುರಾತನ ಇತಿಹಾಸವುಳ್ಳ ನರಹರಿ ಪರ್ವತ ಇದೀಗ ಚತುಷ್ಪಥ ಹೆದ್ದಾರಿ ಕಾಮಗಾರಿಯ ಕಾರಣಕ್ಕೆ ಮತ್ತಷ್ಟು ಎತ್ತರ ಹಾಗೂ ದೂರ ಎನ್ನುವಂತಾಗಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಕಲ್ಲಡ್ಕ ಹಾಗೂ ಮೆಲ್ಕಾರ್ ನಡುವಿನ ಬೋಳಂಗಡಿ ತಿರುವು ಹಾಗೂ ಏರು ರಸ್ತೆ ಇದೀಗ ನೇರ ರಸ್ತೆಯಾಗಿ ಪರಿವರ್ತನೆ ಹೊಂದಿದ್ದು, ಏರು ರಸ್ತೆಯನ್ನು ತಗ್ಗಿಸಿ, ಕಾಂಕ್ರಿಟೀಕರಣದ ಚತುಷ್ಪಥ ರಸ್ತೆ ಸಿದ್ಧವಾಗುತ್ತಿದೆ. ಈ ಚತುಷ್ಪಥ ಹೆದ್ದಾರಿ ಕಾಮಗಾರಿಯ ಕಾರಣದಿಂದ ಹೆದ್ದಾರಿಯಿಂದ ನೇರ ನರಹರಿ ಪರ್ವತ ರಸ್ತೆಗೆ ಸಂಪರ್ಕಿಸುತ್ತಿದ್ದ ರಸ್ತೆಯನ್ನು ಕಡಿದು ಹಾಕಲಾಗಿದ್ದು, ಪಕ್ಕದಲ್ಲಿಯೇ ಸರ್ವೀಸ್ ರಸ್ತೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾರಣದಿಂದ ಚತುಷ್ಪಥ ರಸ್ತೆಯಿಂದ ನರಹರಿ ಪರ್ವತ ಮತ್ತಷ್ಟು ಎತ್ತರ ಹಾಗೂ ಸುತ್ತು ಬಳಸಿ ಹೋಗಬೇಕಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ದೂರ ಎನ್ನುವಂತಾಗಿದೆ.ಭಕ್ತರಿಗೆ ಸವಾಲು:ಪುರಾತನ ಇತಿಹಾಸವುಳ್ಳ ಶ್ರೀ ಸದಾಶಿವ ದೇವಸ್ಥಾನಕ್ಕೆ ಪುರಾತನ ಇತಿಹಾಸವಿದ್ದು, ವರ್ಷಂಪ್ರತಿ ಇಲ್ಲಿ ನಡೆಯುವ ಆಟಿ ಅಮಾವಾಸ್ಯೆಯ ತೀರ್ಥಸ್ನಾನಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಬರುವುದು ಪ್ರತೀತಿ. ಈ ಬಾರಿ ಈ ರಸ್ತೆಗೆ ತಾಗಿಕೊಂಡೇ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ಹಲವು ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಕಾಮಗಾರಿಯ ಈಗಿನ ನೋಟದಲ್ಲಿ ಕಲ್ಲಡ್ಕ ಕಡೆಯಿಂದ ಹೋಗುವವರಿಗೆ ಮಾತ್ರ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳುತ್ತಿದ್ದು, ಬಿ.ಸಿ. ರೋಡು, ಮಂಗಳೂರಿನಿಂದ ಬರುವ ಭಕ್ತರು ಕಲ್ಲಡ್ಕ ಫ್ಲೈ ಓವರ್ ಮೇಲೆ ಸಾಗದೆ, ಕಲ್ಲಡ್ಕ ಸರ್ವೀಸ್ ರಸ್ತೆಗೆ ಸಾಗಿ ಕೆ.ಸಿ. ರೋಡು ತಿರುವಿನಲ್ಲಿ ಯೂಟರ್ನ್ ಹೊಡೆದು ನರಹರಿ ಪರ್ವತಕ್ಕೆ ಸರ್ವೀಸ್ ರಸ್ತೆಯ ಪಯಣ ಮಾಡಬೇಕಾಗಿದೆ.ಆಟಿ ಅಮಾವಾಸ್ಯೆಯ ತೀರ್ಥ ಸ್ನಾನಕ್ಕೆ ಬರುವ ಬಹುತೇಕ ಮಂದಿ ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಾರೆ. ವಾಹನಗಳಲ್ಲಿ ಬರುವವರು ತಮ್ಮ ವಾಹನಗಳನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬೆಟ್ಟ ಏರುತ್ತಿದ್ದರು. ಆದರೆ ಈ ಬಾರಿ ಹೆದ್ದಾರಿಯಲ್ಲಿ ಕಾಮಗಾರಿ ಕಾರಣದಿಂದ ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಕಾಡಲಿದೆ. ಸಂಚಾರಿ ಪೊಲೀಸರಿಗೂ ಹೆಚ್ಚು ತ್ರಾಸ ಉಂಟಾಗಲಿದೆ. ಹೆದ್ದಾರಿ ಪಕ್ಕದಲ್ಲಿ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದ ದ್ವಾರ ಈ ಹಿಂದೆ ಇದ್ದು, ಅಗೆದು ಹಾಕಿರುವ ಮಣ್ಣಿನ ನಡುವೆ ಈ ದ್ವಾರವೂ ಕಾಣಿಸುತ್ತಿಲ್ಲ. ಚತುಷ್ಪಥ ಹೆದ್ದಾರಿ ಕಾಮಗಾರಿಯ ಕಾರಣದಿಂದ ಭೂ ಕೈಲಾಸಕ್ಕೆ ದಾರಿ ಯಾವುದಯ್ಯಾ? ಎಂದು ಪ್ರಶ್ನಿಸಬೇಕಾದ ಅನಿವಾರ್ಯತೆಯೂ ಎದುರಾಗಿದೆ.24ರಂದು ಆಟಿ ಅಮಾವಾಸ್ಯೆಜುಲೈ ೨೪ರಂದು ಆಟಿ ಅಮಾವಾಸ್ಯೆಯ ತೀರ್ಥಸ್ನಾನ ನರಹರಿ ಪರ್ವತದಲ್ಲಿ ನಡೆಯಲಿದ್ದು, ಈ ದಿನ ಭಕ್ತರು ನರಹರಿ ಪರ್ವತದ ಮೇಲಿರುವ ಶಂಖ, ಚಕ್ರ, ಗಧಾ, ಪದ್ಮ ಕೆರೆಗಳಲ್ಲಿ ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಾರೆ.ಈ ದಿನದಂದು ತೀರ್ಥಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಮತ್ತು ಸಕಲ ರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಆಟಿ ಅಮಾವಾಸ್ಯೆಯಂದು ನರಹರಿ ಪರ್ವತದಲ್ಲಿ ತೀರ್ಥಸ್ನಾನ ಮಾಡುವುದರ ಜೊತೆಗೆ, ದೇವರಿಗೆ ಎಳನೀರನ್ನು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.