ಶೀಲ ಶಂಕಿಸಿ ಪತ್ನಿ, ಅಣ್ಣನ ಕೊಲೆ
KannadaprabhaNewsNetwork | Published : Oct 09 2023, 12:46 AM IST
ಶೀಲ ಶಂಕಿಸಿ ಪತ್ನಿ, ಅಣ್ಣನ ಕೊಲೆ
ಸಾರಾಂಶ
ಕಾವ್ಯಾ (28) ಹಾಗೂ ಕೊಟ್ರೇಶ (32) ಕೊಲೆಗೀಡಾದ ಅಣ್ಣ- ತಂಗಿಯರು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ ಹೆಂಡತಿಯ ಶೀಲ ಶಂಕಿಸಿ ಗಂಡ ಮತ್ತು ಮಾವನಿಂದ ಮಹಿಳೆ ಮತ್ತು ಅವಳ ಅಣ್ಣನ ಜೋಡಿ ಕೊಲೆ ಮಾಡಿದ ಘಟನೆ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಕಾವ್ಯಾ (28) ಹಾಗೂ ಕೊಟ್ರೇಶ (32) ಕೊಲೆಗೀಡಾದ ಅಣ್ಣ- ತಂಗಿಯರು. ಈ ಕುರಿತು ಮೃತರ ತಾಯಿ ಕೊಟ್ಟೂರಿನ ಜಿ. ಬಸಮ್ಮ ಎಂಬವರು ಚಿಗಟೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾವ್ಯಾ ಅವರನ್ನು 9 ವರ್ಷಗಳ ಹಿಂದೆ ಚಿಗಟೇರಿ ಗ್ರಾಮದ ನಂದೀಶ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಕಾವ್ಯಾ ಆಗಾಗ ತವರಿಗೆ ಹೋಗಿ ಬರುತ್ತಿದ್ದರು. ಅಲ್ಲದೇ ಬೇರೆಯವರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ್ದ ಪತಿ ಕಾವ್ಯಾ ಅವರ ಮೇಲೆ ಸಂಶಯಪಟ್ಟಿದ್ದರು. ಅಲ್ಲದೇ ಕಾವ್ಯಾ ತನ್ನ ಅಣ್ಣನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಅನುಮಾನದಿಂದ ಭಾನುವಾರ ಬೆಳಗಿನ ಜಾವ ಕೊಟ್ರೇಶ ಹಾಗೂ ಕಾವ್ಯಾ ಅವರನ್ನು ಪತಿ ನಂದೀಶ, ತಂದೆ ಜಾತಪ್ಪ ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತರ ತಾಯಿ ದೂರು ನೀಡಿದ್ದಾರೆ. ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳಾದ ಮೃತಳ ಗಂಡ ನಂದೀಶ ಹಾಗೂ ಮಾವ ಜಾತಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಪಿ ಶ್ರೀಹರಿಬಾಬು, ಡಿವೈಎಸ್ಪಿ ಡಾ. ವೆಂಕಟಪ್ಪ ನಾಯಕ, ತನಿಖಾಧಿಕಾರಿ ನಾಗರಾಜ ಎಂ. ಕಮ್ಮಾರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಟಿ.ಜಿ. ನಾಗರಾಜ ಸಿಬ್ಬಂದಿ ವಿಶೇಷ ತಂಡವು ಪ್ರಕರಣ ದಾಖಲಾಗಿ 12 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತದ ಸಿಬ್ಬಂದಿ ಕೊಟ್ರೇಶ, ಮುಭಾರಕ, ಲಕ್ಕಪ್ಪ, ರವಿದಾದಾಪುರ, ಮಹೇಶ, ಮಧುಕುಮಾರ ಹಾಗೂ ಇತರರು ಭಾಗಿಯಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಾಚರಣೆಗೆ ಎಸ್ಪಿ ಶ್ರೀಹರಿಬಾಬು ಶ್ಲಾಘಿಸಿದ್ದಾರೆ.