ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದೇಶದ ವೈವಿಧ್ಯಮಯ ಕಲೆ, ಸಂಗೀತ, ಸಂಸ್ಕೃತಿ ಅನಾವರಣಗೊಂಡು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿ ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ದ ನಾಲ್ಕು ದಿನಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌ಗೆ ಭಾನುವಾರ ತೆರೆಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರಾದ ಮೈಸೂರು ಮಂಜುನಾಥ್, ಪ್ರವೀಣ್ ಗೋಡ್ಖಿಂಡಿ, ವಿಜಯ ಪ್ರಕಾಶ್ ಅವರಿಗೆ ಆಳ್ವಾಸ್ ವಿರಾಸತ್ -೨೦೨೩ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮೊದಲ ದಿನ 100ಕ್ಕೂ ಅಧಿಕ ಕಲಾ ತಂಡಗಳ 3 ಸಾವಿರಕ್ಕೂ ಅಧಿಕ ಕಲಾವಿದರ ಭವ್ಯ ಸಾಂಸ್ಕೃತಿಕ ಮೆರವಣಿಗೆ ಮೂಲಕ ವರ್ಣರಂಜಿತ ಚಾಲನೆ ಪಡೆದುಕೊಂಡ ವಿರಾಸತ್‌ನಲ್ಲಿ ನಂತರದ ಮೂರು ದಿನ ಸಂಗೀತ, ಕಲಾ ದಿಗ್ಗಜರು ಅದ್ಭುತ ಸಾಂಸ್ಕೃತಿಕ ಲೋಕವನ್ನೇ ತೆರೆದಿಟ್ಟರು. ಈ ಬಾರಿಯೂ ಲಕ್ಷಾಂತರ ಪ್ರೇಕ್ಷಕರು ವಿರಾಸತ್‌ಗೆ ಸಾಕ್ಷಿಯಾದರು. ನಾಲ್ಕೂ ದಿನಗಳ ಕಾಲ ಜೈನಕಾಶಿ ಮೂಡುಬಿದಿರೆಯು ಸಂಸ್ಕೃತಿ, ಸಂಗೀತ ಕಾಶಿಯಾಗಿ ಪರಿವರ್ತನೆಯಾಗಿತ್ತು. ಜತೆಗೆ ಆಳ್ವಾಸ್ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ವೈಭವ ಹೊಸ ಲೋಕವನ್ನೇ ಸೃಷ್ಟಿಸಿ ಯುವ ಪೀಳಿಗೆಯ ಪ್ರತಿಭೆಗೂ ವೇದಿಕೆ ಒದಗಿಸಿತು.
ಸಪ್ತ ಮೇಳಗಳ ವಿಶೇಷ: ಆಳ್ವಾಸ್ ವಿರಾಸತ್‌ನಲ್ಲಿ ಇದೇ ಮೊದಲ ಬಾರಿಗೆ ಸಪ್ತ ಮೇಳಗಳನ್ನು ಆಯೋಜಿಸಿದ್ದು, ಜನಸಂದಣಿಯಿಂದ ಕಿಕ್ಕಿರಿದಿದ್ದವು. ಕೃಷಿ, ಆಹಾರ, ಫಲಪುಷ್ಪ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನಗಳು ಹೊಸ ವಿಚಾರಗಳನ್ನು ಜನರಿಗೆ ಉಣಬಡಿಸಿದವು. ಅಲ್ಲದೆ ಈ ವರ್ಷದ ವಿಶೇಷವಾಗಿ ಸಾಂಸ್ಕೃತಿಕ ರಥ ಸಂಚಲನ ಜನರ ಮನ ಸೂರೆಗೊಳಿಸಿತು.ಪ್ರಶಸ್ತಿ ಪುರಸ್ಕೃತರ ಸಂಗೀತ ರಸಧಾರೆ: ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕಾರ ಮಾಡಿದ ಮೈಸೂರು ಮಂಜುನಾಥ್ ಹಾಗೂ ಪ್ರವೀಣ್ ಗೋಡ್ಖಿಂಡಿ ಅವರ ವಯೊಲಿನ್, ಕೊಳಲಿನ ತಾರಕ ನಾದದ ಜುಗಲ್ ಬಂದಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು. ಬಳಿಕ ವಿಜಯ ಪ್ರಕಾಶ್ ಹಾಡಿನ ಮೋಡಿ, ಮೂವರ ತಾಳ- ವಾದ್ಯ -ಸಂಗೀತ ನಾದ ಪುತ್ತಿಗೆ ಗ್ರಾಮದ ಬಯಲು ರಂಗ ಮಂದಿರದಲ್ಲಿ ಅನುರಣಿಸಿತು. ವಿಜಯ ಪ್ರಕಾಶ್ ನಡೆಸಿಕೊಟ್ಟ ಸಂಗೀತ ರಸಸಂಜೆಯಲ್ಲಿ ಇಡೀ ಪ್ರೇಕ್ಷಕವರ್ಗ ಹುಚ್ಚೆದ್ದು ಕುಣಿದಾಡಿತು.ಬಾನ್ಸುರಿ, ವಯೋಲಿನ್, ಸ್ವರ ದಿಗ್ಗಜರಿಗೆ ‘ವಿರಾಸತ್ ಪ್ರಶಸ್ತಿ’ ಗೌರವ-
ಹೆಸರಾಂತ ವಯೋಲಿನ್ ವಾದಕ ಮೈಸೂರು ಮಂಜುನಾಥ್, ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರಿಗೆ ಭಾನುವಾರ ‘ಆಳ್ವಾಸ್ ವಿರಾಸತ್-2023’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ, ವಿರಾಸತ್ ರೂವಾರಿ ಮೋಹನ್ ಆಳ್ವ, ಸಂಸದ ನಳಿನ್ ಕುಮಾರ್ ಕಟೀಲು ಸನ್ಮಾನ ನೆರವೇರಿಸಿದರು.ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದ ವಿಶಾಲ ವೈಭವದ ವೇದಿಕೆಯಲ್ಲಿ ಆಸೀನರಾದ ಮೂವರು ಸಾಧಕರಿಗೆ ಅವರದ್ದೇ ರಾಗ ಸಂಯೋಜನೆಯ ವಯೋಲಿನ್, ಬಾನ್ಸುರಿ ಹಾಗೂ ಸಂಗೀತದ ಮೂಲಕ ಅಭಿಮಾನದ ಪ್ರೀತಿಯನ್ನು ಧಾರೆ ಎರೆಯಲಾಯಿತು.
ಶಾಲು, ಹೂಹಾರ, ಸ್ಮರಣಿಕೆ, ಪ್ರಶಸ್ತಿ ಪತ್ರದ ಜತೆಗೆ 1 ಲಕ್ಷ ರುಪಾಯಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪನ್ನೀರು, ತಿಲಕ, ಪುಷ್ಪಾರ್ಚನೆ ಹಾಗೂ ಆರತಿ ಮೂಲಕ ಗೌರವಿಸಲಾಯಿತು. ಆಳ್ವಾಸ್ ಸಾಂಸ್ಕೃತಿಕ ತಂಡವು ‘ಸ್ವರ ಗಾನದ ಆರತಿ’ ಗಾನ ಸುಧೆ ಹರಿಸಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೈಸೂರು ಮಂಜುನಾಥ್, ಲೋಕದ ಸಮಸ್ತ ಸಂಭ್ರಮವನ್ನು ಮೂಡುಬಿದಿರೆಗೆ ಮೋಹನ್ ಆಳ್ವರು ತಂದಿದ್ದಾರೆ. ದೇವೇಂದ್ರನೇ ನಾಚುವ ಹಾಗೆ ವಿರಾಸತ್ ಭಾಸವಾಗುತ್ತಿದೆ. ಅವರು ಕೇವಲ ವೈಭವ ಸೃಷ್ಟಿಸಿಲ್ಲ. ಅದನ್ನು ಜನರಿಗೆ ಸಮರ್ಪಿಸಿ ಶ್ರೇಷ್ಠರಾಗಿದ್ದಾರೆ. ಮೂಡುಬಿದಿರೆ ಎಂಬ ಸಾಮಾನ್ಯ ಊರನ್ನು ವಿಶ್ವ ಭೂಪಟಕ್ಕೆ ಸೇರಿಸಿದ್ದಾರೆ ಎಂದು ಬಣ್ಣಿಸಿದರು.
ಕಲೆಗೆ ಗೌರವ ಹಾಗೂ ವೈಭವವನ್ನು ತಿಳಿಯಲು ಜಗತ್ತಿಗೆ ಇಂದು ಮೂಡುಬಿದಿರೆ ಮಾಪಕವಾಗಿದೆ. ಇಲ್ಲಿ ಪಾಲ್ಗೊಳ್ಳಲು ಬಯಸಿದ ಕಲಾವಿದರ ಸಂಖ್ಯೆ ಬಹು ದೊಡ್ಡದಿದೆ. ಇಲ್ಲಿ ಇಲ್ಲದಿರುವುದು ಏನು? ಎಂದು ಅವರು ಭಾವುಕರಾದರು. ಕಲೆಯ ಮೂಲ ಉದ್ದೇಶವೇ ಸೌಂದರ್ಯ ಅರಿತು ಆಸ್ವಾದಿಸುವುದು. ಅದನ್ನು ಆಳ್ವರು ಮಾಡುತ್ತಿದ್ದು, ಇಲ್ಲಿ ನೂರಾರು ಕಲಾವಿದರು ಹುಟ್ಟಿಕೊಳ್ಳುತ್ತಾರೆ. ಆಳ್ವರು ಸಾಂಸ್ಕೃತಿಕ ರಾಯಭಾರಿ ಹಾಗೂ ವಿರಾಸತ್ ಪ್ರಶಸ್ತಿಯು ರಾಷ್ಟ್ರೀಯ ಪ್ರಶಸ್ತಿಗೂ ಮಿಗಿಲು ಎಂದು ಹೇಳಿದರು.ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಮೋಹನ್ ಆಳ್ವರ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಸ್ವರ್ಗ ಲೋಕ ಸೃಷ್ಟಿಯಾಗಿದೆ. ಮನಸ್ಸು ಅರಳಿಸುವ ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಆಳ್ವರ ಪರಿಶ್ರಮದ ಫಲ ಇದು. ಆಳ್ವಾಸ್ ವಿರಾಸತ್ ಪ್ರಶಸ್ತಿ ಪದ್ಮಶ್ರೀಗೂ ಮಿಗಿಲು ಎಂದು ಬಣ್ಣಿಸಿದರು.
ಅತಿಥಿಗಳನ್ನು ಬರಮಾಡಿಕೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ವಿರಾಸತ್ ಕೇವಲ ಮನೋರಂಜನಾ ಕಾರ್ಯಕ್ರಮ ಅಲ್ಲ, ದೇಶದ ಕಲೆಯನ್ನು, ಕಲಾವಿದರನ್ನು ಗೌರವಿಸುವ ಹಬ್ಬ. ನಾಡಿನಲ್ಲಿ ಕಲೆಯನ್ನು ಗೌರವಿಸುವ ಸಂಘಟಕರು ಹಾಗೂ ಸೌಂದರ್ಯ ಪ್ರಜ್ಞೆ ಇರುವ ಪ್ರೇಕ್ಷಕ ವರ್ಗ ಬೇಕು ಎಂದು ಆಶಿಸಿದರು. ನಾಡಿನ ಶ್ರೇಷ್ಠ ಕಲಾವಿದರನ್ನು ಗೌರವಿಸುತ್ತಿದ್ದೇವೆ ಎಂದು ಧನ್ಯತೆ ವ್ಯಕ್ತಪಡಿಸಿದರು.ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸಂಸದ ನಾರಾ ಸಿಂಗ್, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಅಭಯಚಂದ್ರ ಜೈನ್, ಶಾರದಾ ವಿದ್ಯಾಲಯದ ಎಂ.ಬಿ. ಪುರಾಣಿಕ್, ಉದ್ಯಮಿ ಶ್ರೀಪತಿ ಭಟ್ ಇದ್ದರು.