ಸಾರಾಂಶ
ಬದರಿಕೊಪ್ಪಲು ಗ್ರಾಮದಲ್ಲಿದ್ದ ಬಹುತೇಕ ಯುವಕರು ಬಂಧನ ಭೀತಿಯಿಂದ ಊರು ತೊರೆದಿದ್ದಾರೆ. ಎಲ್ಲಿದ್ದಾರೋ, ಹೇಗಿದ್ದಾರೋ ಎಂಬುದನ್ನು ತಿಳಿಯದೆ ಮನೆಯವರು ದಿಕ್ಕೆಟ್ಟಿದ್ದಾರೆ.
ನಾಗಮಂಗಲ : ಗಣೇಶನನ್ನು ಪ್ರತಿಷ್ಠಾಪಿಸಲಾಗಿದ್ದ ಬದರಿಕೊಪ್ಪಲು ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ. ಗಲಭೆ ನಡೆದು ಒಂಬತ್ತು ದಿನಗಳಾದರೂ ಇಲ್ಲಿನ ಜನರ ಆತಂಕ ಮಾತ್ರ ದೂರವಾಗಿಲ್ಲ. ಇನ್ನೂ ಭಯದ ವಾತಾವರಣದಲ್ಲೇ ಕಾಲದೂಡುತ್ತಿದ್ದಾರೆ.
ಗ್ರಾಮದಲ್ಲಿದ್ದ ಬಹುತೇಕ ಯುವಕರು ಬಂಧನ ಭೀತಿಯಿಂದ ಊರು ತೊರೆದಿದ್ದಾರೆ. ಎಲ್ಲಿದ್ದಾರೋ, ಹೇಗಿದ್ದಾರೋ ಎಂಬುದನ್ನು ತಿಳಿಯದೆ ಮನೆಯವರು ದಿಕ್ಕೆಟ್ಟಿದ್ದಾರೆ. ಹಲವರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿವೆ. ಮತ್ತೆ ಕೆಲವರದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ. ಮನೆಗೆ ಮಕ್ಕಳು ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಗಾಲಾಗಿ ಗೋಳಿಡುತ್ತಿದ್ದಾರೆ.
ಊರಿನಲ್ಲಿ ವಯಸ್ಸಾದ ವೃದ್ಧ-ವೃದ್ಧೆಯರು, ಮಹಿಳೆಯರು, ಮಕ್ಕಳು ಮಾತ್ರ ಉಳಿದುಕೊಂಡಿದ್ದಾರೆ. ಗಂಡಸರಿಲ್ಲದೆ ಬದ್ರಿಕೊಪ್ಪಲು ಗ್ರಾಮ ಬಿಕೋ ಎನ್ನುತ್ತಿವೆ. ರಸ್ತೆಗಳು ಹೆಚ್ಚು ಜನಸಂಚಾರವಿಲ್ಲದೆ ಖಾಲಿ ಹೊಡೆಯುತ್ತಿವೆ. ಮನೆಗೆ ಆಸರೆಯಾಗಿದ್ದವರು ಊರು ತೊರೆದಿರುವುದರಿಂದ ಜೀವನ ನಿರ್ವಹಣೆಗೆ ಕುಟುಂಬಸ್ಥರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ದುಡಿಯುವ ಗಂಡಸರು, ಯುವಕರಿಲ್ಲದೆ ದೈನಂದಿನ ಕೆಲಸ-ಕಾರ್ಯಗಳನ್ನು ನಡೆಸುವುದಕ್ಕೂ ಕಷ್ಟ ಅನುಭವಿಸುತ್ತಿರುವುದು ಕಂಡುಬಂದಿದೆ.
ಮಂಡ್ಯ ಮತ್ತು ಮೈಸೂರು ರಸ್ತೆಯಲ್ಲಿ ಮುಸಲ್ಮಾನರು ವಾಸವಾಗಿರುವ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಇದೆ. ಅಲ್ಲೂ ಯುವಕರು ನಾಪತ್ತೆಯಾಗಿದ್ದಾರೆ. ಮಕ್ಕಳು ನಾಪತ್ತೆಯಾಗಿರುವುದರಿಂದ ಸಂಬಂಧಿಕರು ಆಗಮಿಸಿ ಕುಟುಂಬಸ್ಥರನ್ನು ಸಮಾಧಾನಪಡಿಸುವ ಅವರ ಜೀವನಕ್ಕೆ ನೆರವಾಗುವ ಕೆಲಸದಲ್ಲಿ ತೊಡಗಿದ್ದಾರೆ. ಗಲಭೆಯಿಂದ ಹಾಳಾಗಿರುವ ಕಟ್ಟಡಗಳ ಮಾಲೀಕರು ಮುಂದೇನು ಮಾಡಬೇಕೆಂದು ತೋಚದೆ ದಿಕ್ಕೆಟ್ಟು ಕುಳಿತಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಹಲವಾರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಪಟ್ಟಿ ಮಾಡಿಕೊಂಡು ಊರಿಗೆ ಬರುವುದನ್ನೇ ಕಾಯುತ್ತಿದ್ದಾರೆ. ಇದರಿಂದಾಗಿ ಬದರಿಕೊಪ್ಪಲಿನ ಯುವಕರು ಹಾಗೂ ಮುಸ್ಲಿಂ ಪ್ರದೇಶದ ಯುವಕರು, ಗಂಡಸರು ಊರಿಗೆ ಬರುವುದಕ್ಕೆ ಹೆದರುತ್ತಿದ್ದಾರೆ. ಪೊಲೀಸರು ಆರೋಪಿಗಳನ್ನು ಹುಡುಕಿಕೊಂಡು ಯಾರ ಮನೆಗಳ ಬಳಿಯೂ ಬಾರದಿದ್ದರೂ, ಅವರ ಫೋನ್ ನಂಬರ್ ಕಲೆಹಾಕಿಕೊಂಡು ಅವರಿರುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೊಲೀಸ್ ಮಾಹಿತಿದಾರರ ಮೂಲಕ ಅವರ ಇರುವಿಕೆಯನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ಡಾ.ಸುಮೀತ್ ಅಮಾನತು
ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೊಬ್ಬ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ. ಕರ್ತವ್ಯಲೋಪದ ಆರೋಪದ ಮೇರೆಗೆ ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ಡಾ.ಸುಮಿತ್ ಅವರನ್ನು ಅಮಾನತುಗೊಳಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಪ್ರಕರಣ ಸಂಬಂಧ ನಾಗಮಂಗಲ ಟೌನ್ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಕರ್ತವ್ಯ ನಿರ್ಲಕ್ಷತೆ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಡಾ.ಸುಮೀತ್ ಅಮಾನತುಗಳಿಸಿ ಅವರ ಜಾಗಕ್ಕೆ ಪ್ರಭಾರ ಅಧಿಕಾರಿಯಾಗಿ ಶಿವಮೂರ್ತಿ ಅವರನ್ನು ನೇಮಕ ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
ವಾರದೊಳಗೆ ನಿಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸುವೆ: ಎಚ್‌ಡಿಕೆ
ನಮ್ಮವರಲ್ಲಿ ಹಲವರು ಜೈಲು ಸೇರಿದ್ದಾರೆ. ಗಂಡಸರು ಊರು ಬಿಟ್ಟಿದ್ದಾರೆ. ಬಂಧನಕ್ಕೆ ಹೆದರಿ ಯುವಕರು ಊರನ್ನೇ ತೊರೆದಿದ್ದಾರೆ. ನಮ್ಮ ಕುಟುಂಬಕ್ಕೆ ಆಧಾರವೇ ಇಲ್ಲ. ವಯಸ್ಸಾದವರನ್ನು ಆರೈಕೆ ಮಾಡುವವರಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯನ್ನು ನಾವೆಂದೂ ಎದುರಿಸಿರಲಿಲ್ಲ.
- ಹೀಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎದುರು ಬದರಿಕೊಪ್ಪಲು ಗ್ರಾಮದ ನಿವಾಸಿಗಳು ಕಣ್ಣೀರಿಟ್ಟರು.
ಕುಟುಂಬ ನಿರ್ವಹಣೆ ಖರ್ಚನ್ನು ಭರಿಸುವುದೂ ಕಷ್ಟವಾಗಿದೆ. ಗಂಡಸರಿಲ್ಲದ ಕಾರಣ ಒಂದು ವಾರಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ತಂದಿಟ್ಟುಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳು ಯಾವ ತಪ್ಪನ್ನೂ ಮಾಡಿಲ್ಲ. ಅವರನ್ನು ಬಂಧಿಸಿದ್ದಾರೆ. ಜೈಲಿನಲ್ಲಿ ಏನು ಕಷ್ಟ ಅನುಭವಿಸುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸುವ ದಾರಿಯೇ ಕಾಣುತ್ತಿಲ್ಲ. ಹೇಗಾದರೂ ನಮಗೆ ಸಹಾಯ ಮಾಡಿ. ಇಂತಹ ಸ್ಥಿತಿಯಲ್ಲಿ ನಮ್ಮ ಬೆಂಬಲಕ್ಕೆ ನಿಲ್ಲಲು ಯಾರೂ ಇಲ್ಲವೆಂದು ಅಳಲು ತೋಡಿಕೊಂಡರು.
ಮಹಿಳೆಯರನ್ನು ಸಮಾಧಾನಪಡಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಯಾರೂ ಹೆದರಬೇಡಿ. ನಿಮ್ಮ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನಾನು ಭರವಸೆ ಕೊಡುತ್ತೇನೆ. ಇನ್ನೊಂದು ವಾರದಲ್ಲಿ ನಿಮ್ಮ ಮಕ್ಕಳನ್ನ ಜೈಲಿನಿಂದ ಬಿಡಿಸುತ್ತೇನೆ. ವಕೀಲರನ್ನ ನಾನೇ ನೇಮಿಸಿಕೊಡುತ್ತೇನೆ ಎಂದು ಕುಮಾರಸ್ವಾಮಿ ಅಭಯ ನೀಡಿದರು.
ಮಾಜಿ ಶಾಸಕ ಸುರೇಶ್‌ಗೌಡ ಹಾಜರಿದ್ದರು.