ಬಾಳೆಹೊನ್ನೂರು, ಶಾಲೆಗಳಿಗೆ ದಾನ ನೀಡಿರುವ ಜಮೀನುಗಳು, ಆಸ್ತಿಗಳ ಸಂರಕ್ಷಣೆಗೆ ಶೀಘ್ರದಲ್ಲಿ ಹೊಸ ಮಸೂದೆ ಸಿದ್ಧಪಡಿಸಿ ಅಧಿವೇಶನದಲ್ಲಿ ಮಂಡಿಸಿ ಪಾಸ್ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶಾಲೆಗಳಿಗೆ ದಾನ ನೀಡಿರುವ ಜಮೀನುಗಳು, ಆಸ್ತಿಗಳ ಸಂರಕ್ಷಣೆಗೆ ಶೀಘ್ರದಲ್ಲಿ ಹೊಸ ಮಸೂದೆ ಸಿದ್ಧಪಡಿಸಿ ಅಧಿವೇಶನದಲ್ಲಿ ಮಂಡಿಸಿ ಪಾಸ್ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಮೇಲ್ಪಾಲ್‌ನಲ್ಲಿ ಕರ್ಕೇಶ್ವರ ಗ್ರಾಪಂನ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರಿ ಶಾಲೆಗಳ ಆಸ್ತಿ ಕೆಲವೆಡೆ ಸದ್ಭಳಕೆ ಆಗದಿರುವ ಕುರಿತು ದೂರುಗಳು ಬಂದಿದ್ದು, ಈ ಬಗ್ಗೆ ಒಂದು ಮಸೂದೆಯನ್ನು ಅಧಿವೇಶನದಲ್ಲಿ ಪಾಸ್ ಮಾಡಿ ಯಾರಿಗೂ ತೊಂದರೆಯಾಗದ ಹಾಗೆ, ಶಾಲಾ ಆಸ್ತಿಗಳನ್ನು ಸಂರಕ್ಷಣೆ ಮಾಡ ಲಾಗುವುದು. ಫಾರಂ ನಂ7 ಇರುವವರಿಗೂ ಅನ್ಯಾಯವಾಗದ ರೀತಿ ನೋಡಿಕೊಳ್ಳಲಾಗುವುದು ಎಂದರು.

ಶಿಕ್ಷಣಕ್ಕೆ ಕೊಟ್ಟಿರುವ ದಾನಗಳನ್ನು ರಕ್ಷಣೆ ಮಾಡುವ ಬಿಲ್ ನ್ನು ಈ ಅಧಿವೇಶದಲ್ಲಿ ಪಾಸ್‌ ಮಾಡಬೇಕು ಎಂದು ಯೋಜಿಸ ಲಾಗಿತ್ತು ಆದರೆ ಈ ಬಾರಿ ಸಾಧ್ಯವಾಗಿಲ್ಲ. ಇದಕ್ಕೆ ಹಲವು ಕಾನೂನಾತ್ಮಕ ಪ್ರಕ್ರಿಯೆಗಳು ಮಾಡಬೇಕಿದೆ. ಇನ್ನೂ ಒಂದು ತಿಂಗಳ ಆನಂತರ ಬಿಲ್ ಪಾಸ್ ಮಾಡಲಾಗುವುದು ಎಂದರು.

ಬೆಳೆ ಹಾನಿ ಪರಿಹಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಎಲ್ಲೆಡೆ ಗ್ರಾಪಂ ವ್ಯಾಪ್ತಿಯಲ್ಲಿ ಮಳೆ ಮಾಪನ ಇಟ್ಟಿರುವುದರಲ್ಲಿ ಗೊಂದಲವಿದೆ, ಈ ಹಿಂದೆ ಇಟ್ಟ ಮಳೆ ಮಾಪನಗಳು ತುಕ್ಕು ಹಿಡಿದು ಹಾಳಾಗಿವೆ. ಅದಕ್ಕಾಗಿ ಕಂದಾಯ ಸಚಿವ ಕೃಷ್ಣ ಬೈರೇ ಗೌಡರು ಎಲ್ಲಾ ಕಡೆಗಳಲ್ಲೂ ಹೊಸ ವಿಧಾನ ಹಾಗೂ ಹೊಸ ಮಳೆ ಮಾಪನ ಯಂತ್ರ ಅಳವಡಿಸಬೇಕು ಎಂದು ತಿಳಿಸಿದ್ದಾರೆ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ, ಬೆಳೆ ವಿಮೆ ಬಗ್ಗೆ ವರದಿ ತರಿಸಿ ಸಚಿವರಾದ ಕೆ.ಜೆ.ಜಾರ್ಜ್, ಮಂಕಾಳ್ ವೈದ್ಯ ಹಾಗೂ ನಾನು ಸೇರಿ ಮೂರು ಜಿಲ್ಲೆಗಳ ಒಂದು ಸಭೆ ನಡೆಸಿ ಡೆವಲಪ್‌ಮೆಂಟ್ ಕಮೀಷನರ್ ಬಳಿ ತೆರಳಿ ವರದಿ ನೀಡಿ, ವಿಮಾ ಕಂಪೆನಿಯವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ನೋಡಿ ಅದರ ಮೇಲೆ ಕ್ರಮ ತೆಗೆದು ಕೊಳ್ಳಲಾಗುವುದು. ರೈತರ ಹಿತ ಕಾಪಾಡುವ ಉದ್ದೇಶದಿಂದ ರಾಜ್ಯಕ್ಕೆ ಒಂದು ನೀತಿ ಮಾಡ ಲಾಗುವುದು. ಇದು ನಮ್ಮ ಜವಾಬ್ದಾರಿ ಎಂದು ನುಡಿದರು.

ಬೆಳೆ ಪರಿಹಾರ ಕೇಂದ್ರ ಸರ್ಕಾರದವರು ಕೇವಲ ನಿಗದಿ ಮಾಡುತ್ತಾರೆ. ಆದರೆ ಆಮೇಲೆ ಅವರು ಪತ್ತೆಯೇ ಇರುವುದಿಲ್ಲ. ಕೇಂದ್ರಕ್ಕೆ ಹೋಗಿ ಬಿಜೆಪಿಯವರು ಈ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿಯವರು ಬರೀ ರೈತರ ಹಾದಿ ತಪ್ಪಿಸುವ ಕೆಲಸ ಮಾಡುತ್ತಾರೆ. ಅವರ ಕರ್ತವ್ಯ ಮರೆತಿರುವುದು ಎದ್ದು ಕಾಣಿಸುತ್ತಿದೆ. ಕಬ್ಬು ಬೆಳೆ ಎಂಆರ್‌ಪಿ ನಿಗದಿಪಡಿಸುವುದು ಕೇಂದ್ರ ದವರು ಮಾಡಬೇಕಿತ್ತು. ಆದರೆ ಅವರು ಬಂದಿಲ್ಲ. ಇದನ್ನು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗದಿಪಡಿಸಿದ್ದಾರೆ. ಕೊಳೆ ರೋಗ ನಿಯಂತ್ರಣಕ್ಕೆ ರಾಜ್ಯದಲ್ಲಿ ₹186 ಕೋಟಿ ಕೇಳಿದ್ದು ಕಾದು ನೋಡೋಣ ಎಂದರು.೦೫ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಮೇಲ್ಪಾಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕರ್ಕೇಶ್ವರ ಗ್ರಾಪಂನ ಕಟ್ಟಡವನ್ನು ಸಚಿವ ಎಸ್.ಮಧು ಬಂಗಾರಪ್ಪ ಉದ್ಘಾಟಿಸಿದರು. ಶಾಸಕ ಟಿ.ಡಿ.ರಾಜೇಗೌಡ, ಡಾ. ಕೆ.ಪಿ.ಅಂಶುಮಂತ್, ರಾಜೇಶ್ ಕೇಶವತ್ತಿ, ಚಂದ್ರಮ್ಮ, ಹೇಮಲತಾ ಇದ್ದರು.