ಕನ್ನಡಪ್ರಭ ವಾರ್ತೆ ತುಮಕೂರು
ಬಸವ ಪೂರ್ವದಿಂದಲೂ ಇತಿಹಾಸವುಳ್ಳ ನೊಳಂಬ ಲಿಂಗಾಯತ ಸಮುದಾಯದ ಒಂದು ಸಮಗ್ರ ಅಧ್ಯಯನವನ್ನು ಮಾಡಿರುವ ಡಾ. ಡಿ.ಎನ್.ಯೋಗೀಶ್ವರಪ್ಪ ಅವರು ಅತ್ಯಂತ ವಾಸ್ತವ ನೆಲೆಯಲ್ಲಿ ಪೂರ್ಣಗೊಳಿಸಿ ನೊಳಂಬ ಲಿಂಗಾಯತರು ಎಂಬ ಕೃತಿಯನ್ನು ಮೌಲಿಕವಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ನೊಳಂಬ ಲಿಂಗಾಯತರ ಸಾಂಸ್ಕೃತಿಕ ಬದುಕಿನ ಸೂಕ್ಷ್ಮ ಆಯಾಮಗಳನ್ನು ಚರ್ಚಿಸುತ್ತದೆ ಎಂದು ಶರಣ ತತ್ವ ಚಿಂತಕರೂ, ಸಾಹಿತಿಗಳೂ ಆದ ಬಸವರಾಜಪ್ಪನವರು ನುಡಿದರು.ಅವರು ಬಸವ ಕೇಂದ್ರ ಹಾಗೂ ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ನಿಂದ ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಶರಣ ಸಂಗಮ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಡಾ. ಡಿ.ಎನ್.ಯೋಗೀಶ್ವರಪ್ಪನವರ ‘ನೊಳಂಬ ಲಿಂಗಾಯತರು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕೃತಿಯನ್ನು ಕುರಿತು ಸಾಹಿತಿಗಳಾದ ಸುಶೀಲಾ ಸದಾಶಿವಯ್ಯ ಮಾತನಾಡಿ, ಬಸವಾದಿ ಶರಣರು ಸ್ಥಾಪಿಸಿದ್ದ ಜಾತ್ಯತೀತ ಲಿಂಗಾಯತ ಧರ್ಮವನ್ನು ಅಪ್ಪಿ ಒಪ್ಪಿಕೊಂಡು ಬಂದಿದ್ದ ಅನೇಕ ಸಮುದಾಯಗಳು ತಮ್ಮ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಂಡರೂ ತಮ್ಮ ಮತಾಂತರ ಪೂರ್ವದ ವಾಸನೆಯನ್ನು ಬಿಡದೆ ಅತ್ತ ಪೂರ್ವ ಪರಂಪರೆಯನ್ನೂ, ಇತ್ತ ಬಸವಾದಿ ಶರಣರ ಆಚರಣೆಯನ್ನು ಪಾಲಿಸುತ್ತಾ ಬಂದಿರುವುದು ನೊಳಂಬ ಲಿಂಗಾಯತ ಸಮಾಜದಲ್ಲಿ ಹಾಸುಹೊಕ್ಕಾಗಿರುವುದನ್ನು ಲೇಖಕರು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ ಎಂದರು.ಮೈಸೂರು ಭಾಗದಲ್ಲಿ ಲಿಂಗಾಯತ ಸಮುದಾಯವನ್ನು ಜನಗಣತಿ ಕಾಲಕ್ಕೆ ಶೂದ್ರ ಸಮೂಹಕ್ಕೆ ಸೇರಿಸಿದಾಗ ಸಹಜವಾಗಿಯೇ ರೊಚ್ಚಿಗೆದ್ದ ಲಿಂಗಾಯತ ಹಿರಿಯರು ಪ್ರತಿಭಟನೆಗೆ ಮುಂದಾಗಿ ತಮ್ಮನ್ನು ಲಿಂಗಿ ಬ್ರಾಹ್ಮಣರೆಂದು ದಾಖಲಿಸಬೇಕೆಂದು ಒತ್ತಾಯಿಸಿ, ನಾಲ್ವಡಿ ಕೃಷ್ಣರಾಜ ಒಡೆಯರಿಂದ ಅನುಮತಿ ಪಡೆದ ಹೋರಾಟಗಳನ್ನು ಈ ಕೃತಿ ಒಳಗೊಂಡಿದೆ. ಲಿಂಗಾಯತರಲ್ಲಿ 98 ಒಳಪಂಗಡಗಳು ಇದ್ದು ಅವುಗಳಲ್ಲೇ ತಾರತಮ್ಯವಿದ್ದುದನ್ನು ಈ ಕೃತಿ ದಾಖಲಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಗುರು ಸಿದ್ಧರಾಮೇಶ್ವರರ ಆರಾಧಕರಾದ ನೊಳಂಬ ಲಿಂಗಾಯತರು ಪ್ರತಿವರ್ಷ ಬೃಹತ್ ಪ್ರಮಾಣದಲ್ಲಿ ಸಿದ್ಧರಾಮೇಶ್ವರರ ಜಯಂತಿ ಆಚರಿಸುವುದರ ಮೂಲಕ ಸಮಾಜವನ್ನು ಸಂಘಟಿಸುತ್ತಾ, ನೊಳಂಬ ಲಿಂಗಾಯತ ಸಂಘವನ್ನು ಸ್ಥಾಪಿಸಿ ಆ ಮೂಲಕ ಜನಮುಖಿ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಕೃತಿಯ ಲೇಖಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಲಿಂಗಾಯತರಲ್ಲಿ 98 ಒಳಪಂಗಡಗಳಿದ್ದು, ಅವುಗಳಲ್ಲಿ ನೊಳಂಬ ಲಿಂಗಾಯತರು ಎಂಟು ಜಿಲ್ಲೆಗಳಲ್ಲಿ ಗಣನೀಯವಾಗಿ ನೆಲೆಸಿದ್ದಾರೆ. ಕೆಲ ಜಿಲ್ಲೆಗಳಲ್ಲಿ ರಾಜಕೀಯವಾಗಿ ಪ್ರಭಾವಶಾಲಿಗಳಾಗಿದ್ದಾರೆ. ಬಹುಮುಖಿ ಸಂಸ್ಕೃತಿಯ ಆರಾಧಕರಾಗಿದ್ದ ಇವರ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಅಳಿಸಿಹೋಗುತ್ತಿರುವುದನ್ನು ಗಮನಿಸಿದ ನಾನು, ಆ ಸಂಸ್ಕೃತಿಯನ್ನು ದಾಖಲಿಸುವ ಉದ್ದೇಶದಿಂದ ಈ ಕೃತಿ ರಚನೆ ಮಾಡಿದ್ದೇನೆ ಎಂದರು.
ಪ್ರಾಧ್ಯಾಪಕ ಡಾ. ಎಂ.ಗೋವಿಂದರಾಯರವರು ಮಾತನಾಡಿ, ನೊಳಂಬ ಲಿಂಗಾಯತ ಸಮಾಜದ ಮೇಲೆ ಬೆಳಕನ್ನು ಚಲ್ಲುವ ಈ ಕೃತಿ ಸಮಾಜ ಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದ್ದು, ಇದು ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದರು.ವೇದಿಕೆಯಲ್ಲಿ ಕಲಾಶ್ರೀ ಡಾ. ಲಕ್ಷ್ಮಣದಾಸ್, ಪ್ರಕಾಶಕ ಸತೀಶ್ ಹೆಬ್ಬಾಕ ಹಾಜರಿದ್ದರು. ಬಸವ ಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು.
ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು. ಕಲ್ಪನಾ ಉಮೇಶ್ ಸ್ವಾಗತಿಸಿದರು. ಜಾಗತಿಗ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಬಿ.ನಾಗಭೂಷಣ್ ವಂದಿಸಿದರು. ಕುಸುಮಾ ಪ್ರಾರ್ಥಿಸಿದರು.-------ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಡಾ. ಡಿ.ಎನ್.ಯೋಗೀಶ್ವರಪ್ಪನವರ ನೊಳಂಬ ಲಿಂಗಾಯತರು ಕೃತಿಯನ್ನು ಬಸವರಾಜಪ್ಪ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಕೆ.ಎಸ್.ಸಿದ್ದಲಿಂಗಪ್ಪ, ಸುಶೀಲಾ ಸದಾಶಿವಯ್ಯ, ಡಾ. ಗೋವಿಂದರಾಯ, ಡಾ. ಡಿ.ಎನ್.ಯೋಗೀಶ್ವರಪ್ಪ, ಸಿದ್ಧಗಂಗಮ್ಮ, ಚಂದ್ರಶೇಖರ್, ಕಲ್ಪನಾ ಉಮೇಶ್ ಇತರರಿದ್ದರು.