17ರಂದು ಬ್ಯಾಡಗಿಯಲ್ಲಿ ಪಕ್ಷಾತೀತವಾಗಿ ತಿರಂಗಾ ಯಾತ್ರೆ: ವಿರೂಪಾಕ್ಷಪ್ಪ ಬಳ್ಳಾರಿ

| Published : May 11 2025, 11:47 PM IST

17ರಂದು ಬ್ಯಾಡಗಿಯಲ್ಲಿ ಪಕ್ಷಾತೀತವಾಗಿ ತಿರಂಗಾ ಯಾತ್ರೆ: ವಿರೂಪಾಕ್ಷಪ್ಪ ಬಳ್ಳಾರಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಇದೀಗ ಯುದ್ಧದ ಕಾರ್ಮೋಡ ಕವಿದಿದೆ. ಕಾಶ್ಮೀರದಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಅಮಾಯಕ ಪ್ರವಾಸಿಗರನ್ನು ಪಾಕಿಸ್ತಾನದ ಪ್ರಚೋದನೆಯಿಂದ ಕೊಂದಿರುವ ಉಗ್ರರ ಹುಟ್ಟಡಗಿಸುವ ಕಾಲ ಸನ್ನಿಹಿತವಾಗಿದೆ.

ಬ್ಯಾಡಗಿ: ಪಾಕಿಸ್ತಾನದ ವಿರುದ್ಧ ಪ್ರಾಣದ ಹಂಗು ತೊರೆದು ದೇಶವನ್ನು ಕಾಯುತ್ತಿರುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಮೇ 17ರಂದು ಪಕ್ಷಾತೀತವಾಗಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ತಿರಂಗಾ ಯಾತ್ರೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಇದೀಗ ಯುದ್ಧದ ಕಾರ್ಮೋಡ ಕವಿದಿದೆ. ಕಾಶ್ಮೀರದಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಅಮಾಯಕ ಪ್ರವಾಸಿಗರನ್ನು ಪಾಕಿಸ್ತಾನದ ಪ್ರಚೋದನೆಯಿಂದ ಕೊಂದಿರುವ ಉಗ್ರರ ಹುಟ್ಟಡಗಿಸುವ ಕಾಲ ಸನ್ನಿಹಿತವಾಗಿದೆ ಎಂದರು.ಪದೇ ಪದೇ ಕಾಲು ಕೆರೆದು ಭಾರತದ ಮೇಲೆ ದಾಳಿ ಮಾಡುವ ಪಾಕಿಸ್ತಾನದ ಖೇಲ್ ಖತಂ ಮಾಡಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಯುದ್ಧ ಸಾರಿದ್ದಾರೆ. ಇದಕ್ಕಾಗಿ ರಜೆಯ ಮೇಲಿದ್ದ ದೇಶದ ಮೂಲೆ ಮೂಲೆಯಲ್ಲಿನ ಸೈನಿಕರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ಪಕ್ಷಾತೀತವಾಗಿ ಬೆಂಬಲಿಸಿ: ತಿರಂಗಾ ಯಾತ್ರೆಯನ್ನ ಬಿಜೆಪಿ ವತಿಯಿಂದ ಮಾಡುತ್ತಿಲ್ಲ. ಇದನ್ನು ದೇಶದ ಒಬ್ಬ ನಾಗರಿಕರಾಗಿ ನಡೆಸಲು ಮುಂದಾಗಿದ್ದೇವೆ. ಯಾವುದೇ ಪಕ್ಷಕ್ಕಿಂತ ದೇಶ ದೊಡ್ಡದು ಎಂಬುದು ಸಾರ್ವಕಾಲಿಕ ಸತ್ಯ. ಈ ಹಿನ್ನೆಲೆಯಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ರೈತ ಸಂಘ, ವಕೀಲರ ಸಂಘ, ಕರವೇ, ರೋಟರಿ, ವರ್ತಕರ ಸಂಘ, ಮಹಿಳಾ ಸಂಘಗಳು, ರಾಜ್ಯ ನೌಕಕರ ಸಂಘ, ಆಟೋ ಚಾಲಕರು, ಹಮಾಲರ ಸಂಘ, ಟ್ಯಾಕ್ಸಿ ಚಾಲಕರ ಮಾಲೀಕರ ಸಂಘ, ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು, ದಲಿತ ಸಂಘರ್ಷ ಸಮಿತಿ, ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿ ದೇಶ ಕಾಯುವ ಸೈನಿಕರ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಯಾತ್ರೆಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ನರಿ ಬುದ್ಧಿಯ ಪಾಕಿಸ್ತಾನ: ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡ ಮುರಿಗೆಪ್ಪ ಶೆಟ್ಟರ್, ನರಿಬುದ್ಧಿಯ ಪಾಕಿಸ್ತಾನ ಕದನ ವಿರಾಮ ಘೋಷಣೆ ಮಾಡಿದರೂ ಮತ್ತೆ ಯುದ್ಧ ನಿಯಮ ಉಲ್ಲಂಘನೆ ಮಾಡಿ ಅಮಾಯಕರ ಮೇಲೆ ಶೆಲ್ ದಾಳಿ ನಡೆಸಿ ನಂಬಿಕೆಗೆ ಅರ್ಹವಲ್ಲ ಎಂಬುದನ್ನು ವಿಶ್ವಕ್ಕೆ ಸಾಬೀತು ಮಾಡಿದೆ ಎಂದರು.

ಸಭೆಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಸದಸ್ಯರಾದ ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಕವಿತಾ ಸೊಪ್ಪಿನಮಠ, ಮಲ್ಲಮ್ಮ ಪಾಟೀಲ, ವಿನಯ ಹಿರೇಮಠ, ಮುಖಂಡರಾದ ಶಂಕರಗೌಡ ಪಾಟೀಲ, ನಿಂಗಪ್ಪ ಬಟ್ಟಲಕಟ್ಟಿ, ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ಶಂಕ್ರಣ್ಣ ಅಕ್ಕಿ, ಸಣ್ಣಪ್ಪ ಮಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಮುಖ ಬೀದಿಗಳಲ್ಲಿ ಸಂಚಾರ...

ತಿರಂಗಾ ಯಾತ್ರೆ ಮೇ 17ರಂದು ಪಟ್ಟಣದ ಮಾರುಕಟ್ಟೆಯಲ್ಲಿನ ಸಿದ್ಧೇಶ್ವರ ದೇವಸ್ಥಾನದಿಂದ ಬೆಳಗ್ಗೆ 10 ಗಂಟೆಗೆ ಆರಂಭವಾಗಿ, ಮುಖ್ಯರಸ್ತೆ, ಸುಭಾಷ ಸರ್ಕಲ್, ಸೇರಿದಂತೆ ಹಲವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ತಹಸೀಲ್ದಾರ್ ಕಚೇರಿ ತಲುಪಲಿದೆ.