ರಾಮನಗರದಲ್ಲಿ ವರುಣನ ಅವಾಂತರದಿಂದ ಜನಜೀವನ ಅಸ್ತವ್ಯಸ್ತ

| Published : Oct 12 2025, 01:00 AM IST

ಸಾರಾಂಶ

ಈ ವಿಷಯ ತಿಳಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿಯವರು ಅಧಿಕಾರಿಗಳೊಂದಿಗೆ ಗಾಂದಿನಗರ ಸ್ಲಂ ಕಾಲೋನಿ ಮತ್ತು ಕಾಯಿಸೊಪ್ಪಿನ ಬೀದಿಗೆ ಭೇಟಿ ನೀಡಿ, ಕಾಲೋನಿಯಲ್ಲಿ ಚರಂಡಿಯಲ್ಲಿ ಕೆಸರು ತುಂಬಿದ್ದರಿಂದ ಮಳೆ ನೀರು ಮನೆಯೊಳಗೆ ನುಗ್ಗಿರುವುದನ್ನು ಕಂಡ ಕೆ.ಶೇಷಾದ್ರಿಯವರು ಕೂಡಲೇ ಚರಂಡಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾ ಕೇಂದ್ರ ರಾಮನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕಿನ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಕನಕಪುರ ತಾಲೂಕಿನಲ್ಲಿ 5 ಸೆಂಟಿ ಮೀಟರ್ , ಮಾಗಡಿ ತಾಲೂಕಿನಲ್ಲಿ 3 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.

ಜಿಲ್ಲೆಯಲ್ಲಿ ಅಕ್ಟೋಬರ್ 9ರಂದು 10 ಮಿ.ಮೀ ವಾಡಿಕೆ ಮಳೆಗೆ 7 ಮಿ.ಮೀ ವಾಸ್ತವ ಮಳೆಯಾಗಿದ್ದು, ಶೇಕಡ 51ರಷ್ಟು ಮಳೆಯಾಗಿದೆ. ಅಕ್ಟೋಬರ್ 10ರಂದು ವಾಡಿಕೆಗಿಂತ ಹೆಚ್ಚುವರಿ ಮಳೆ ಸುರಿದಿದೆ.

ವರುಣನ ಅಬ್ಬರಕ್ಕೆ ಹತ್ತಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದ್ದು, ತೆಂಗಿನ ಮರ, ರಾಗಿ , ಬಾಳೆ, ಮುಸುಕಿನ ಜೋಳ ಬೆಳೆಗಳು ಹಾನಿಯಾಗಿ ನೆಲ ಕಚ್ಚಿವೆ. ಗದ್ದೆಗಳು ಕೆರೆಯಂತಾಗಿವೆ. ಹಸುಗಳಿಗೆ ಮೇವು ಕುಯ್ಯಲು‌ ಸಾಧ್ಯವಾಗದೇ ರೈತರು ಪರದಾಡುತ್ತಿದ್ದಾರೆ.

ರಾಮನಗರದ ರಂಗರಾಯನದೊಡ್ಡಿ ಕೆರೆ ಕೋಡಿ ಬಿದ್ದಿದ್ದು, ಕೆರೆ ನೀರು ರಾಜಕಾಲುವೆಯಲ್ಲಿ ಹರಿದು ಹೋಗಿದೆ. ಮಳೆಯಿಂದಾಗಿ ನಗರ ಸೇರಿದಂತೆ ಕೆಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳಿಗೂ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.

ನಗರದ ಹೊರವಲಯದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ, ಕಿಲೋಮೀಟರ್‌ನಷ್ಟು ದೂರ ವಾಹನಗಳ ದಟ್ಟಣೆ ಕಂಡುಬಂತು. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ಸಂಜೆ 8ರ ಸುಮಾರಿಗೆ ಭಾರೀ ಗಾಳಿಯೊಂದಿಗೆ ಶುರುವಾದ ಮಳೆ ಸತತ ಮೂರು ತಾಸು ಬಿಡದೆ ಸುರಿಯಿತು. ಇದರಿಂದಾಗಿ ಸಂಗಬಸವನದೊಡ್ಡಿ ಬಳಿಯ ಹೆದ್ದಾರಿಯ ಸೇತುವೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತು. ಕೆಳ ಸೇತುವೆಗಳ ಬಳಿಯೂ ನೀರು ಸಂಗ್ರಹಗೊಂಡಿತು. ಇದರಿಂದಾಗಿ ವಾಹನಗಳು ಸಾಲುಗಟ್ಟಿ ನಿಂತವು. ದ್ವಿಚಕ್ರ ವಾಹನಗಳ ಸವಾರರು ಅತ್ತ ಮಳೆಯಿಂದ ತಪ್ಪಿಸಿಕೊಳ್ಳಲು ಆಗದೆ, ಇತ್ತ ಬೇಗನೇ ಹೋಗಲು ಆಗದೆ ಪರದಾಡಿದರು.

ಮಳೆ ನೀರು ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗಬೇಕು. ಆದರೆ, ಕೆಲವೆಡೆ ನೀರು ಹರಿದು ಹೋಗುವ ತೂತುಗಳಲ್ಲಿ ಕಸ ಕಟ್ಟಿಕೊಂಡಿರುವುದರಿಂದ ನೀರು ಸಂಗ್ರಹಗೊಂಡಿತು. ಕೆಲವೆಡೆ ತೀರಾ ತಗ್ಗು ಪ್ರದೇಶವಿರುವುದರಿಂದ ಎಲ್ಲಾ ನೀರು ಅಲ್ಲಿಗೇ ಬಂದು ಸೇರಿಕೊಂಡಿತು. ಇದರಿಂದಾಗಿ ಕೆಲವೆಡೆ ರಸ್ತೆ ಜಲಾವೃತವಾಯಿತು.

ಕೆಸರು ಗದ್ದೆಯಾದ ರಸ್ತೆಗಳು:

ನಗರದೊಳಗೆ ನಿರಂತರ ನೀರು ಕುಡಿಯುವ ಯೋಜನೆಗಾಗಿ ರಸ್ತೆ ಅಗೆದಿರುವ ರಸ್ತೆಗಳು ಮಳೆಯಿಂದಾಗಿ ಕೆಸರಿನ ಗದ್ದೆಗಳಾದವು. ಗುಂಡಿಗಳಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ವಾಹನಗಳ ಸಂಚಾರವಿರಲಿ, ಪಾದಚಾರಿಗಳು ಸಹ ನಡೆದುಕೊಂಡು ಹೋಗಲು ಪರದಾಡಬೇಕಾಯಿತು. ಗಾಳಿಯ ಅಬ್ಬರಕ್ಕೆ ಕೆಲವೆಡೆ ಮರಗಳು, ಕೊಂಬೆಗಳು ಬಿದ್ದಿರುವ ವರದಿಯಾಗಿದೆ. ಮಳೆ ಕಾರಣಕ್ಕೆ ಹಲವೆಡೆ ವಿದ್ಯುತ್ ಕೂಡ ಕೈ ಕೊಟ್ಟಿದ್ದರಿಂದ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾಯಿತು.

ಮಳೆಯಿಂದ ತೊಂದರೆಯಾದ ವಾರ್ಡುಗಳಿಗೆ ಕೆ.ಶೇಷಾದ್ರಿ (ಶಶಿ) ಭೇಟಿ ನೀಡಿ ಪರಿಶೀಲನೆ:

ರಾಮನಗರ: ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತೊಂದರೆಗೀಡಾದ ಜಿಲ್ಲಾ ಕೇಂದ್ರ ರಾಮನಗರದ ಹಲವು ವಾರ್ಡುಗಳಿಗೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರು ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಕಾಯಿಸೊಪ್ಪಿನ ಬೀದಿ, ಗಾಂದಿನಗರ , ಜಿಯಾವುಲ್ಲಾ ಬ್ಲಾಕ್ , ಕೊತ್ತಿಪುರ, ಟಿಪ್ಪುನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ರಸ್ತೆಗಳಿಗೆ ಹಾನಿಯಾಗಿದ್ದು, ಚರಂಡಿ ನೀರು ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಕೆಲವು ವಾರ್ಡುಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಆ ರಸ್ತೆಗಳು ಗುಂಡಿಮಯವಾಗಿದ್ದು, ಮಳೆ ನೀರು ಸಂಗ್ರಹವಾಗಿದೆ.

ಈ ವಿಷಯ ತಿಳಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿಯವರು ಅಧಿಕಾರಿಗಳೊಂದಿಗೆ ಗಾಂದಿನಗರ ಸ್ಲಂ ಕಾಲೋನಿ ಮತ್ತು ಕಾಯಿಸೊಪ್ಪಿನ ಬೀದಿಗೆ ಭೇಟಿ ನೀಡಿ, ಕಾಲೋನಿಯಲ್ಲಿ ಚರಂಡಿಯಲ್ಲಿ ಕೆಸರು ತುಂಬಿದ್ದರಿಂದ ಮಳೆ ನೀರು ಮನೆಯೊಳಗೆ ನುಗ್ಗಿರುವುದನ್ನು ಕಂಡ ಕೆ.ಶೇಷಾದ್ರಿಯವರು ಕೂಡಲೇ ಚರಂಡಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರು.

ಯಾರಬ್ ನಗರ ಬಡಾವಣೆಗೆ ತೆರಳಿದ ಕೆ.ಶೇಷಾದ್ರಿಯವರು, ಮಳೆಯಿಂದಾಗಿ ಚರಂಡಿ ನೀರು ಕೆಲ ಮನೆಗಳಿಗೆ ಹರಿದಿರುವುದು ಹಾಗೂ ರಸ್ತೆಗಳು ಗುಂಡಿ ಬಿದ್ದಿರುವುದನ್ನು ವೀಕ್ಷಿಸಿದರು. ಗುಂಡಿ ಬಿದ್ದಿರುವ ರಸ್ತೆಗಳನ್ನು ಕೂಡಲೇ ದುರಸ್ಥಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಯಾವುಲ್ಲಾ ಬ್ಲಾಕ್ ನ ಮಹಬೂಬ್ ನಗರದಲ್ಲಿ ದೊಡ್ಡ ಚರಂಡಿ ಕಟ್ಟಿಕೊಂಡಿದ್ದು, ಸೇತುವೆ ಮಳೆ ನೀರಿನ ರಭಸಕ್ಕೆ ಕೊರೆದಿರುವುದನ್ನು ವೀಕ್ಷಣೆ ಮಾಡಿದರು. ಬಳಿಕ ಕೊತ್ತಿಪುರ, ಟಿಪ್ಪುನಗರ ಬಡಾವಣೆಗಳಲ್ಲಿ ಮಳೆಯಿಂದ ಹಾನಿಯಾದ ರಸ್ತೆಗಳನ್ನು ಪರಿಶೀಲಿಸಿದ ಅಧ್ಯಕ್ಷರು, ರಸ್ತೆಗಳ ದುರಸ್ಥಿಗೆ ಕ್ರಮ ವಹಿಸುವುದಾಗಿ ಜನರಿಗೆ ಭರವಸೆ ನೀಡಿದರು. ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಗೋವಿಂದರಾಜು, ಸೋಮಶೇಖರ್ , ಎಇಇ ವಿಶ್ವನಾಥ್ , ಪರಿಸರ ಅಭಿಯಂತರ ಸುಬ್ರಹ್ಮಣ್ಯ, ನಿರೀಕ್ಷಕ ವಿಜಯ್ ಕುಮಾರ್ , ಆರ್ ಐ ನಾಗರಾಜು ಮತ್ತಿತರರು ಹಾಜರಿದ್ದರು.