ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ   ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಿ ಸಾಲ ವಿತರಣೆಗೆ ಕ್ರಮ 

 ಬೆಂಗಳೂರು : ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್‌) ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ (ಪಿಎಂಎಫ್‌ಎಂಇ) ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಿ ಸಾಲ ವಿತರಣೆಗೆ ಕ್ರಮವಹಿಸಲು ಬ್ಯಾಂಕುಗಳಿಗೆ ಸೂಚಿಸಿರುವುದಾಗಿ ರಾಜ್ಯಮಟ್ಟದ ಬ್ಯಾಂಕುಗಳ ಕಮಿಟಿ ಸಂಚಾಲಕ ಎಂ.ಭಾಸ್ಕರ್‌ ಚಕ್ರವರ್ತಿ ತಿಳಿಸಿದ್ದಾರೆ.

45 ಪಾಲುದಾರ ಬ್ಯಾಂಕುಗಳ ಜತೆಗೆ ಪ್ರಗತಿ ಪರಿಶೀಲನಾ ಸಭೆ

ಬುಧವಾರ ಪಿಎಂಎಫ್ಎಂಇ ಯೋಜನೆಯ 45 ಪಾಲುದಾರ ಬ್ಯಾಂಕುಗಳ ಜತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪಿಎಂಎಫ್‌ಎಂಇ ಯೋಜನೆಯಡಿ ಕಿರು ಉದ್ಯಮ ಸ್ಥಾಪನೆಗೆ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರ ₹6 ಲಕ್ಷ , ಕರ್ನಾಟಕ ಸರ್ಕಾರ ₹9ಲಕ್ಷ ಸೇರಿ ಕೆಪೆಕ್‌ ಮೂಲಕ ಒಟ್ಟು ₹15 ಲಕ್ಷ ಸಹಾಯಧನ ನೀಡಲಾಗುತ್ತದೆ. ಈ ಆರ್ಥಿಕ ವರ್ಷ 6,215 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 4137 ಅರ್ಜಿಗಳು ಬ್ಯಾಂಕುಗಳಿಗೆ ಸಲ್ಲಿಕೆಯಾಗಿದ್ದು, 2251 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಎಲ್ಲ ತಾಂತ್ರಿಕ ತೊಂದರೆಗಳನ್ನು ಪರಿಹರಿಸಿ ಶೀಘ್ರ ಸಾಲ ಮಂಜೂರಾತಿ ಪ್ರಕ್ರಿಯೆ ನಡೆಸುವಂತೆ ತಿಳಿಸಿದ್ದೇವೆ ಎಂದರು.

ಈವರೆಗೆ ಸಾಲ ಸೌಲಭ್ಯ 1682 ಜನರಿಗೆ ಮಂಜೂರಾಗಿದ್ದು, 1200 ಜನರಿಗೆ ಸಾಲ ವಿತರಣೆಯಾಗಿದೆ. ಸಾಕಷ್ಟು ಬ್ಯಾಂಕುಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಯಿಂದ, ದಾಖಲಾತಿ ಕೊರತೆಯಿಂದ ಸಾಲ ನೀಡಲಾಗುತ್ತಿಲ್ಲ. ಹೀಗಾಗಿ ಸೂಕ್ತ ಸೂಚನೆ ನೀಡಿದ್ದೇವೆ ಎಂದರು.

ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌.ಶಿವಪ್ರಕಾಶ್‌ ಮಾತನಾಡಿ, 2025-26ರ ಸಾಲಿನಲ್ಲಿ ಕೇಂದ್ರ ಸರ್ಕಾರ ನಾಲ್ಕು ಸಾವಿರ, ರಾಜ್ಯ ಸರ್ಕಾರ ಹೆಚ್ಚುವರಿ ಒಂದು ಸಾವಿರ ಗುರಿ ಕೊಟ್ಟಿತ್ತು. ಆದರೆ, ಗುರಿ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ. ಮಾರ್ಚ್‌ಗಿಂತ ಮೊದಲೇ ಅರ್ಹ ಫಲಾನುಭವಿಗಳಿಗೆ ಸಾಲಸೌಲಭ್ಯ, ಸಬ್ಸಿಡಿ ಸಿಗುವಂತೆ ಮಾಡಲು ಈಗಲೇ ಕ್ರಮ ವಹಿಸಿದ್ದೇವೆ. ಸಾಲ ಮಂಜೂರಾಗಿ ವಿತರಣೆ ಆಗದ 780 ಅರ್ಜಿಗಳಿದ್ದು, ಮೂರು ದಿನಗಳಲ್ಲಿ ಇತ್ಯರ್ಥ ಪಡಿಸಲು ತಿಳಿಸಿದ್ದೇವೆ ಎಂದು ತಿಳಿಸಿದರು.

ಸಿಬಿಲ್‌ ಸ್ಕೋರ್‌ ಕಡಿಮೆ ಇರುವಾಗ ಸಾಲ ಕೊಡಬಾರದು ಎಂಬ ತಪ್ಪು ಕಲ್ಪನೆ

ಬ್ಯಾಂಕುದಾರರ ಸಭೆಯಲ್ಲಿ ಅರ್ಜಿದಾರರ ಸಿಬಿಲ್‌ ಸ್ಕೋರ್‌ ಕಡಿಮೆ ಇರುವಾಗ ಸಾಲ ಕೊಡಬಾರದು ಎಂಬ ತಪ್ಪು ಕಲ್ಪನೆ ನಿವಾರಿಸಿದ್ದೇವೆ. ಆದಾಯ ಮಿತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ, ಜಿಎಸ್‌ಟಿ ಪ್ರಮಾಣಪತ್ರ ಸಲ್ಲಿಕೆ ಮಾಡಬೇಕು ಗೊಂದಲವನ್ನು ಪರಿಹರಿಸಿದ್ದೇವೆ, ಆಹಾರ ಸುರಕ್ಷತೆ ಗುಣಮಟ್ಟ ಮಂಡಳಿ, ಪಾನ್‌ ಕಾರ್ಡ್‌ ಕಡ್ಡಾಯ ಕುರಿತ ಸಮಸ್ಯೆಗಳನ್ನು ಪರಿಹರಿಸಿ ಸೌಲಸೌಲಭ್ಯ ನೀಡುವಂತೆ ತಿಳಿಸಲಾಗಿದೆ ಎಂದರು.

ಪಿಎಂಎಫ್‌ಎಂಇ ಯೋಜನೆಯಡಿ ಫಲಾನುಭವಿಗಳಿಗೆ ಆದಷ್ಟು ಬೇಗ ಸಾಲ, ಸಬ್ಸಿಡಿ ಸಿಗುವಂತಾಗಲು ಕ್ರಮ ವಹಿಸಿದ್ದೇವೆ. ಮಾರ್ಚ್‌ವರೆಗೆ ಕಾಯದೆ ಈಗಲೇ ಮುಂಜಾಗ್ರತಾ ಕ್ರಮವಾಗಿ ಬ್ಯಾಂಕರ್‌ಗಳ ಸಭೆ ನಡೆಸಿ ಬಾಕಿ ಅರ್ಜಿ ಇತ್ಯರ್ಥಕ್ಕೆ ತಿಳಿಸಲಾಗಿದೆ.

-ಸಿ.ಎನ್‌.ಶಿವಪ್ರಕಾಶ್‌, ವ್ಯವಸ್ಥಾಪಕ ನಿರ್ದೇಶಕರು, ಕೆಪೆಕ್‌