ಲಕ್ಷ ರು. ಲಂಚ ಪಡೆಯುತ್ತಿದ್ದಾಗ ಉಪ ಕೃಷಿ ನಿರ್ದೇಶಕಿ ಲೋಕಾ ಬಲೆಗೆ

| Published : Oct 22 2023, 01:01 AM IST

ಲಕ್ಷ ರು. ಲಂಚ ಪಡೆಯುತ್ತಿದ್ದಾಗ ಉಪ ಕೃಷಿ ನಿರ್ದೇಶಕಿ ಲೋಕಾ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ ರುಪಾಯಿ ಲಂಚ ಸ್ವೀಕಾರ ವೇಳೆ ಕೃಷಿ ಉಪ ನಿರ್ದೇಶಕಿ ಲೋಕಾಯುಕ್ತ ಬಲೆಗೆ
ಕನ್ನಡಪ್ರಭ ವಾರ್ತೆ ಮಂಗಳೂರು ಒಂದು ಲಕ್ಷ ರು. ಲಂಚದ ಹಣ ಪಡೆಯುತ್ತಿದ್ದಾಗಲೇ ಮಂಗಳೂರು ವಿಭಾಗದ ಉಪ ಕೃಷಿ ನಿರ್ದೇಶಕಿ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಉಪ ಕೃಷಿ ನಿರ್ದೇಶಕಿ ಭಾರತಮ್ಮ ಬಂಧಿತ ಅಧಿಕಾರಿ. ನಿವೃತ್ತ ವಲಯ ಕೃಷಿ ಅರಣ್ಯಾಧಿಕಾರಿ ಪರಮೇಶ್‌ ಎನ್‌.ಪಿ. ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ದೂರುದಾರ ಪರಮೇಶ್ ಅವರು ಕಳೆದ ಆಗಸ್ಟ್ 31ರಂದು ನಿವೃತ್ತರಾಗಿದ್ದರು. ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ 2022-23 ಮತ್ತು 2023-24ನೇ ಸಾಲಿನಲ್ಲಿ ಕೃಷಿ ಇಲಾಖೆ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬಂಟ್ವಾಳದ ಸಜಿಪಮುನ್ನೂರು, ಸಜಿಪಮೂಡ, ಸಜಿಪನಡು, ಕುರ್ನಾಡು, ನರಿಂಗಾನ, ಬಾಳೆಪುಣಿ, ಮಂಜನಾಡಿ ಗ್ರಾಮಗಳ ಸಾರ್ವಜನಿಕರಿಗೆ ಸರ್ಕಾರದ ವತಿಯಿಂದ 50 ಲಕ್ಷ ರು. ಮೌಲ್ಯದ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ಸರಬರಾಜು ಮತ್ತು ನಾಟಿ ಕಾಮಗಾರಿ ಮಾಡಲಾಗಿತ್ತು. ಸುಮಾರು 18 ಲಕ್ಷ ರು. ಮೌಲ್ಯದ ತೋಟಗಾರಿಕಾ ಸಸಿಗಳನ್ನು ಕಣ್ಣನ್‌ ನರ್ಸರಿ ಮಾಲೀಕರಾದ ಧೋರಿ, ಶಬರೀಶ್‌, ಬೈರೇಗೌಡ ಮುಂತಾದವರಿಂದ ಪಡೆಯಲಾಗಿತ್ತು. ಅದೇ ರೀತಿ 32 ಲಕ್ಷ ರು. ಮೌಲ್ಯದ ಅರಣ್ಯ ಸಸಿಗಳನ್ನು ಗುತ್ತಿಗೆದಾರರಿಂದ ಪಡೆಯಲಾಗಿತ್ತು. ಈ ನರ್ಸರಿ ಮಾಲೀಕರು ಮತ್ತು ಅರಣ್ಯ ಗುತ್ತಿಗೆದಾರರಿಗೆ ಒಟ್ಟು 50 ಲಕ್ಷ ರು. ಹಣ ಸರ್ಕಾರದಿಂದ ಬರಲು ಬಾಕಿಯಿದ್ದು, ಈ ಹಣ ಒದಗಿಸುವಂತೆ ಅವರು ಪರಮೇಶ್‌ ಬಳಿ ಆಗಾಗ ಕೇಳುತ್ತಿದ್ದರು. ಅಲ್ಲದೆ, ಬಿಲ್‌ ಪಾವತಿ ಮಾಡುವ ಕೃಷಿ ಅಧಿಕಾರಿ ಭಾರತಮ್ಮ ಅವರ ಬಳಿ ನರ್ಸರಿ ಮಾಲೀಕರು ಹಾಗೂ ಅರಣ್ಯ ಗುತ್ತಿಗೆದಾರರು ತೆರಳಿ ಬಾಕಿ ಮೊತ್ತ ಪಾವತಿಸುವಂತೆ ತಿಳಿಸಿದಾಗ, ಬಿಲ್‌ ಮೊತ್ತದ ಶೇ.15ರಷ್ಟು ಹಣವನ್ನು ಲಂಚದ ರೂಪದಲ್ಲಿ ನೀಡುವಂತೆ ಭಾರತಮ್ಮ ಬೇಡಿಕೆ ಇಟ್ಟಿದ್ದರು. ಇದರ ಬಳಿಕ ಪರಮೇಶ್‌ ಕೂಡ ಭಾರತಮ್ಮ ಅವರ ಕಚೇರಿಗೆ ತೆರಳಿ ಬಿಲ್‌ ನೀಡುವಂತೆ ಕೇಳಿದಾಗಲೂ 1 ಲಕ್ಷ ರು. ಲಂಚ ನೀಡುವಂತೆ ತಿಳಿಸಿದ್ದರು. ಈ ಬಗ್ಗೆ ಪರಮೇಶ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಲಂಚದ ಹಣ ನೀಡುತ್ತಿದ್ದಾಗಲೇ ರೈಡ್‌ ಮಾಡಿದ ಲೋಕಾಯುಕ್ತ ಪೊಲೀಸರು, ಭಾರತಮ್ಮ ಅವರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ. ಸೈಮನ್‌ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಕಲಾವತಿ ಕೆ., ಚಲುವರಾಜು, ಪೊಲೀಸ್ ನಿರೀಕ್ಷಕ ಸುರೇಶ್ ಕುಮಾರ್‌ ಪಿ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.