ಕನ್ನಡಪ್ರಭ ವಾರ್ತೆ ಸಿದ್ದಾಪುರ
ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತುತ ಇರುವ ಧಾರವಾಡ ವ್ಯಾಪ್ತಿಯಿಂದ ಮಂಗಳೂರು ಹೈಕೋರ್ಟ್ ವ್ಯಾಪ್ತಿಗೆ ವರ್ಗಾಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ. ಈ ಪ್ರಸ್ತಾವನೆಗೆ ನಮ್ಮ ವಿರೋಧವಿದ್ದು, ಇದು ಜಿಲ್ಲೆಯ ಜನಸಾಮಾನ್ಯರ ಹಿತಾಸಕ್ತಿಗೆ ತದ್ವಿರುದ್ಧವಾಗಿದೆ ಎಂದು ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.ಸ್ಥಳೀಯ ವಕೀಲರ ಸಂಘ, ತಾಲೂಕಿನ ಹಲವು ಸಂಸ್ಥೆ-ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉ.ಕ. ಜಿಲ್ಲೆ ಧಾರವಾಡದ ಜೊತೆ ಐತಿಹಾಸಿಕ, ಆಡಳಿತಾತ್ಮಕವಾದ ಒಡನಾಟ ಹೊಂದಿದೆ. ಜಿಲ್ಲೆಯ ಕಾರವಾರ ಮುಂತಾದ ಕರಾವಳಿ ಭಾಗದ ತಾಲೂಕುಗಳು, ಶಿರಸಿ, ಸಿದ್ದಾಪುರ ಸೇರಿದಂತೆ ಘಟ್ಟದ ಮೇಲಿನ ತಾಲೂಕುಗಳಿಗೆ ಧಾರವಾಡವು ಅತ್ಯಂತ ಹತ್ತಿರದಲ್ಲಿದೆ. ಸಾರಿಗೆ ಸಂಪರ್ಕವೂ ಸುಗಮವಾಗಿದೆ. ಶೈಕ್ಷಣಿಕ, ಆರ್ಥಿಕ ಮತ್ತು ಕಂದಾಯ ವ್ಯವಹಾರಗಳಿಗಾಗಿ ಜಿಲ್ಲೆಯ ಜನರು ಧಾರವಾಡವನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯ ಪದವಿ ಕಾಲೇಜುಗಳು ಧಾರವಾಡದ ಕರ್ನಾಟಕ ವಿವಿ ವ್ಯಾಪ್ತಿಗೆ ಬರುತ್ತವೆ. ಶಿಕ್ಷಣ ಕಾಯ್ದೆಯ ಮೇಲ್ಮನವಿ ಪ್ರಾಧಿಕಾರ ಧಾರವಾಡದಲ್ಲಿದೆ. ಇಲಾಖಾ ನೌಕರರ ಆಡಳಿತಾತ್ಮಕ ನ್ಯಾಯಮಂಡಳಿ ಧಾರವಾಡದ ಸಮೀಪದ ಬೆಳಗಾವಿಯಲ್ಲಿದೆ ಎಂದರು.ನಾವು ಮಂಗಳೂರು ಪೀಠ ಸ್ಥಾಪನೆಗೆ ವಿರೋಧಿಸುತ್ತಿಲ್ಲ. ನಮ್ಮ ಜಿಲ್ಲೆಯನ್ನು ಸೇರ್ಪಗೊಳಿಸಬಾರದು ಎನ್ನುವುದು ನಮ್ಮ ಆಗ್ರಹವಾಗಿದೆ. ಮಂಗಳೂರಿಗೆ ಹೈಕೋರ್ಟ್ ಪೀಠವನ್ನು ವರ್ಗಾಯಿಸಿದರೆ ಹಲವು ತೊಂದರೆಗಳು,ಸಮಸ್ಯೆಗಳು ಎದುರಾಗಲಿವೆ. ಜಿಲ್ಲೆಯ ಗಡಿಭಾಗಗಳಿಂದ ಮಂಗಳೂರನ್ನು ತಲುಪಲು ಭೌಗೋಳಿಕವಾಗಿ ತುಂಬಾ ದೂರವಾಗುತ್ತದೆ. ಉದಾಹರಣೆಗೆ ಸಿದ್ದಾಪುರ ತಾಲೂಕಿನಿಂದ ಧಾರವಾಡ ೧೬೩ ಕಿಮೀ ಇದ್ದರೆ ಮಂಗಳೂರು ೩೩೧ ಕಿಮೀ ದೂರದಲ್ಲಿದೆ. ಜನಸಾಮಾನ್ಯರು ಮಂಗಳೂರಿಗೆ ಹೋಗಬೇಕಾದರೆ ಸಾರಿಗೆ ಮತ್ತು ವಾಸ್ತವ್ಯದ ವೆಚ್ಚ ದುಪ್ಪಟ್ಟಾಗುತ್ತದೆ ಎಂದರು.
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಸಾಂಸ್ಕೃತಿಕ ಮತ್ತು ಭಾಷಾ ಶೈಲಿಯಲ್ಲಿ ವ್ಯತ್ಯಾಸಗಳಿವೆ. ಜಿಲ್ಲೆಯ ಗ್ರಾಮೀಣ ಕಕ್ಷಿದಾರರಿಗೆ ಅಲ್ಲಿನ ತುಳು ಮತ್ತು ವಿಶಿಷ್ಠ ಭಾಷಾಶೈಲಿಗಳಿಂದಾಗಿ ನ್ಯಾಯಾಲಯದ ವ್ಯವಹಾರದ ಸಂವಹನದಲ್ಲಿ ತೊಡಕಾಗಬಹುದಾಗಿದೆ. ೨೦೦೮ರಿಂದ ಜಿಲ್ಲೆಯ ನ್ಯಾಯವಾದಿಗಳು, ಸಾರ್ವಜನಿಕರು ಮತ್ತು ಅಧೀನ ನ್ಯಾಯಾಲಯಗಳು ಧಾರವಾಡ ಹೈಕೋರ್ಟ್ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಿದರೆ ಪ್ರಕರಣಗಳು ಮತ್ತಷ್ಟು ವಿಳಂಬವಾಗಿ ಜನರಿಗೆ ನ್ಯಾಯ ಸಿಗುವುದು ತಡವಾಗಲಿದೆ. ಇದು ಕೇವಲ ವಕೀಲರ ಸಮಸ್ಯೆಯಲ್ಲ. ಸಹಕಾರಿ ಸಂಘಗಳು, ಸಂಘ-ಸಂಸ್ಥೆಗಳು ಸೇರಿದಂತೆ ಇಡೀ ಜಿಲ್ಲೆಯ ಜನರ ಬದುಕಿನ ಪ್ರಶ್ನೆ. ಸರ್ಕಾರ ಈ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು. ಒಂದೊಮ್ಮೆ ಜನರ ಹಿತಾಸಕ್ತಿಯನ್ನು ಬಲಿಗೊಟ್ಟು ಈ ನಿರ್ಧಾರ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ ಜನಪರ ಮತ್ತು ಕಾನೂನು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿರಿಯ ವಕೀಲ ರವಿ ಹೆಗಡೆ ಹೂವಿನಮನೆ ಮಾತನಾಡಿದರು.
ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಅಶೋಕ ನಾಯ್ಕ, ಕಾರ್ಯದರ್ಶಿ ಸುರೇಶ ಕೆ.ಗೌಡ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಆರ್.ಎಸ್. ಹೆಗಡೆ ಹರಗಿ, ಕೆ.ಜಿ. ನಾಗರಾಜ, ಪ್ರಕಾಶ ಎಂ.ಹೆಗಡೆ, ಸತೀಶ ಗೌಡರ, ಸುಬ್ರಹ್ಮಣ್ಯ ಭಟ್ಟ, ರಾಘವೇಂದ್ರ ಭಟ್ಟ ,ಗುರುನಾಥ ವೇರ್ಣೆಕರ, ಸುಧೀರ ಗೌಡರ, ವಿ.ಎಂ. ಹೆಗಡೆ ತ್ಯಾಗಲಿ ಮುಂತಾದವರಿದ್ದರು.