ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಂ.ಎಲ್.ಸುರೇಶ್ ವಿರುದ್ಧ ಸದಸ್ಯರ ಆಕ್ರೋಶ, ಸಭಾ ನಡವಳಿಯಲ್ಲಿ ಚುನಾವಣೆ ನಡೆಸದೆ ಹಾಲಿ ಆಡಳಿತ ಮಂಡಳಿಯನ್ನೇ ಮುಂದುವರೆಸುವ ವಿಷಯ ಪ್ರಸ್ತಾಪಿಸಿದ್ದಕ್ಕೆ ಖಂಡನೆ, ಅಧ್ಯಕ್ಷ-ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದ ಸದಸ್ಯರು, ಚುನಾವಣೆ ನಡೆಸಲೇಬೇಕೆಂದು ಬಿಗಿಪಟ್ಟು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಂ.ಎಲ್.ಸುರೇಶ್ ವಿರುದ್ಧ ಸದಸ್ಯರ ಆಕ್ರೋಶ, ಸಭಾ ನಡವಳಿಯಲ್ಲಿ ಚುನಾವಣೆ ನಡೆಸದೆ ಹಾಲಿ ಆಡಳಿತ ಮಂಡಳಿಯನ್ನೇ ಮುಂದುವರೆಸುವ ವಿಷಯ ಪ್ರಸ್ತಾಪಿಸಿದ್ದಕ್ಕೆ ಖಂಡನೆ, ಅಧ್ಯಕ್ಷ-ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದ ಸದಸ್ಯರು, ಚುನಾವಣೆ ನಡೆಸಲೇಬೇಕೆಂದು ಬಿಗಿಪಟ್ಟು, ಸದಸ್ಯರ ಆಕ್ರೋಶಕ್ಕೆ ಹೆದರಿ ಪಲಾಯನ ಮಾಡಿದ ಅಧ್ಯಕ್ಷ. ಪೊಲೀಸ್ ರಕ್ಷಣೆಯಲ್ಲಿ ಹಿಂಬಾಗಿಲ ಮೂಲಕ ಪರಾರಿ..!ನಗರದ ಕನಕ ಭವನದಲ್ಲಿ ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಭಾನುವಾರ ನಿಗದಿಯಾಗಿತ್ತು. ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ಸೇರಿದಂತೆ ಆಡಳಿತ ಮಂಡಳಿಯವರು ಹಾಜರಿದ್ದರು. ಸಂಘದ ನಿಯಮಾನುಸಾರ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು. ಆದರೆ, ಹಾಲಿ ಆಡಳಿತ ಮಂಡಳಿಯವರು ಚುನಾವಣೆ ನಡೆಸುವ ವಿಚಾರವನ್ನು ಪ್ರಸ್ತಾಪಿಸದೆ, ಈಗಿರುವ ಆಡಳಿತ ಮಂಡಳಿಯನ್ನೇ ಮುಂದಿನ ಅವಧಿಗೂ ಮುಂದುವರೆಸುವ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಸಂಘದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕರಾದ ಕೃಷ್ಣ ಹಾರೋಹಳ್ಳಿ, ಸಾತನೂರು ಮಹೇಶ್, ಅಣಸಾಲೆ ಶಿವಣ್ಣ ಅವರು, ಸಂಘದ ನಿಯಮದ ಪ್ರಕಾರ ಚುನಾವಣೆ ನಡೆಸಬೇಕು. ಹಾಲಿ ಇರುವ ಆಡಳಿತ ಮಂಡಳಿಯನ್ನು ಮುಂದುವರೆಸುವುದು ಬೇಡ. ನೀವೇ ಮುಂದುವರೆಯಬೇಕೆಂಬ ಹಠ ಏಕೆ. ಬೇರೆಯವರು ಅಧಿಕಾರ ನಡೆಸುವುದಕ್ಕೆ ಅಸಮರ್ಥರೇ ಎಂದು ಪ್ರಶ್ನಿಸಿದರು. ಸಭೆ ನಡೆಯುವ ಸಮಯದಲ್ಲೇ ಸ್ಥಳದಲ್ಲಿದ್ದುಕೊಂಡು ನಡವಳಿಗಳನ್ನು ಬರೆಯಬೇಕು. ಸಭೆಯಿಂದ ಹೊರಗೆ ಸದಸ್ಯರಿಂದ ಸಹಿ ಮಾಡಿಸಿಕೊಳ್ಳುತ್ತಿರುವುದೇಕೆ. ಸಭಾ ನಿರ್ಣಯದ ಬುಕ್ ಎಲ್ಲಿದೆ. ಅದನ್ನು ಇಲ್ಲಿಗೆ ತರಬೇಕೆಂದು ಒತ್ತಡ ಹೇರಿದಾಗ ಮಾತಿಗೆ ಮಾತು ಬೆಳೆದು ಪರಸ್ಪರ ವಾಗ್ವಾದ ನಡೆಸಿದರು. ಪರ-ವಿರೋಧ ಸದಸ್ಯರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದವು. ಪರಸ್ಪರ ಕೈ ಕೈ ಮಿಲಾಯಿಸಿದರು. ಅಧ್ಯಕ್ಷ ಎಂ.ಎಲ್.ಸುರೇಶ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.ಈ ಸಮಯದಲ್ಲಿ ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ನಾಗರಾಜು ಸದಸ್ಯರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಹಿಂಬಾಗಿಲಿನಿಂದ ಅಧ್ಯಕ್ಷ ಪರಾರಿ:ಸ್ವಲ್ಪ ಸಮಯದ ಬಳಿಕ ಮತ್ತೆ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಸದಸ್ಯರ ಕೂಗಾಟ, ಆಕ್ರೋಶ ಹೆಚ್ಚಾಗತೊಡಗಿತು. ಪರಿಸ್ಥಿತಿಯನ್ನು ಅರಿತ ಪೊಲೀಸರು ಅಧ್ಯಕ್ಷ ಎಂ.ಎಲ್.ಸುರೇಶ್ ಅವರನ್ನು ಕನಕ ಭವನದ ಹಿಂಬಾಗಿಲ ಮೂಲಕ ಕರೆದೊಯ್ದರು. ಸದಸ್ಯರ ಮಾತಿಗೆ ಉತ್ತರ ನೀಡಲಾಗದೆ ಅಧ್ಯಕ್ಷ ಎಂ.ಎಲ್.ಸುರೇಶ್ ಕೂಡ ಭವನದಿಂದ ಪರಾರಿಯಾದರು.
ಸದಸ್ಯರಿಂದ ಪ್ರತಿಭಟನೆ:ಅಧ್ಯಕ್ಷ ಎಂ.ಎಲ್.ಸುರೇಶ್ ಅವರ ಸರ್ವಾಧಿಕಾರಿ ಧೋರಣೆ, ಆಡಳಿತ ಮಂಡಳಿಯ ಏಕಪಕ್ಷೀಯ ಧೋರಣೆ ಖಂಡಿಸಿ ಸಂಘದ ಸದಸ್ಯರು ಕನಕ ಭವನದ ಎದುರು ಪ್ರತಿಭಟನೆ ನಡೆಸಿದರು.
ನಿಯಮಾನುಸಾರ ಸಂಘದ ಆಡಳಿತ ಮಂಡಳಿಗೆ ಹೊಸದಾಗಿ ಚುನಾವಣೆ ನಡೆಸಬೇಕು. ಹಾಲಿ ಆಡಳಿತ ಮಂಡಳಿ ಮುಂದುವರೆಯುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಕೂಡಲೇ ಅಧ್ಯಕ್ಷ ಎಂ.ಎಲ್.ಸುರೇಶ್ ಸೇರಿದಂತೆ ಎಲ್ಲಾ ನಿರ್ದೇಶಕರು ರಾಜೀನಾಮೆ ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮಂಜೇಗೌಡ, ಮಳವಳ್ಳಿ ಸಿದ್ದೇಗೌಡ, ಹಾರೋಹಳ್ಳಿ ಕೃಷ್ಣ, ದೊಡ್ಡಯ್ಯ, ಪ್ರಧಾನ ಕಾರ್ಯದರ್ಶಿ ಶಶಿಧರ್, ಸಾತನೂರು ರಾಜು, ಮಹೇಶ್, ರಾಜೇಶ್, ಸಾವಿತ್ರಮ್ಮ ಇತರರಿದ್ದರು.ಸಭೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ. ಒಂದು ವಿಚಾರ ಚರ್ಚೆ ಮಾಡುವಾಗ ಗೊಂದಲವಾಗಿದೆ. ಸದಸ್ಯರಲ್ಲದ ಕೆಲವರು ಸಭೆಗೆ ಬಂದು ಗಲಾಟೆ ಮಾಡಿದ್ದಾರೆ. ನಾವು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಮ್ಮ ಅವಧಿ ಮಾರ್ಚ್ 6ರವರೆಗೂ ಇದೆ.
- ಎಂ.ಎಲ್.ಸುರೇಶ್, ಕುರುಬರ ಸಂಘದ ಜಿಲ್ಲಾಧ್ಯಕ್ಷ