ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಪೋಷಕರೂ ಕೈ ಜೋಡಿಸಲಿ: ಹಿರಿಯ ಪತ್ರಕರ್ತ ಕಣ್ಣಪ್ಪ

| Published : Nov 15 2025, 01:30 AM IST

ಸಾರಾಂಶ

ಪೋಷಕರು ಮಕ್ಕಳನ್ನು ಕೇವಲ ಶಾಲೆಗಳಿಗೆ ಕಳುಹಿಸಿದರೆ ಸಾಲದು, ಮಕ್ಕಳ ಮೇಲೆ ಸಂಪೂರ್ಣ ಹಿಡಿತ ಹೊಂದಿರಬೇಕು. ಮಕ್ಕಳ ಶಿಕ್ಷಣದ ಜೊತೆಗೆ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಪೋಷಕರು ಸಹ ಕೈಜೋಡಿಸಬೇಕೆಂದು ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶೈಕ್ಷಣಿಕ ಸಲಹೆಗಾರ, ಹಿರಿಯ ಪತ್ರಕರ್ತ ಕಣ್ಣಪ್ಪ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಪೋಷಕರು ಮಕ್ಕಳನ್ನು ಕೇವಲ ಶಾಲೆಗಳಿಗೆ ಕಳುಹಿಸಿದರೆ ಸಾಲದು, ಮಕ್ಕಳ ಮೇಲೆ ಸಂಪೂರ್ಣ ಹಿಡಿತ ಹೊಂದಿರಬೇಕು. ಮಕ್ಕಳ ಶಿಕ್ಷಣದ ಜೊತೆಗೆ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಪೋಷಕರು ಸಹ ಕೈಜೋಡಿಸಬೇಕೆಂದು ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶೈಕ್ಷಣಿಕ ಸಲಹೆಗಾರ, ಹಿರಿಯ ಪತ್ರಕರ್ತ ಕಣ್ಣಪ್ಪ ಮನವಿ ಮಾಡಿದರು.

ಶುಕ್ರವಾರ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಪೋಷಕರ-ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉನ್ನತ ಸೌಲಭ್ಯಗಳು ಇಲ್ಲದೆ ಇರುವ ಸಂದರ್ಭದಲ್ಲಿ ಶಾಲೆಗಳನ್ನು ನಿರ್ಮಿಸಲು ನಮ್ಮ ಪೂರ್ವಿಕರ ಶ್ರಮ ಹೆಚ್ಚಿನದ್ದಾಗಿದೆ. ಇಂತಹ ಶಾಲೆಗಳು ಇದೀಗ ಕಣ್ಮರೆಯಾಗುತ್ತಿವೆ. ಅದರಲ್ಲೂ ಸರ್ಕಾರಿ ಶಾಲೆ ಉಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ. ಹಿರಿಯ ವಿದ್ಯಾರ್ಥಿಗಳು ವಿದ್ಯೆ ಕಲಿತ ಸ್ಥಳದ ಕಟ್ಟಡ ಪ್ರಸ್ತುತ ಶಿಥಿಲಗೊಂಡಿದೆ. ತರಗತಿಗಳನ್ನು ಹೊಸ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಆದರೆ ಈ ಕಟ್ಟಡ ಉಳಿಯಬೇಕು. ಭವಿಷ್ಯದಲ್ಲಿ ಈ ರೀತಿಯ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ದಾನಿಗಳು, ಹಳೇ ವಿದ್ಯಾರ್ಥಿಗಳು ಕಟ್ಟಡ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದರು.

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮಕ್ಕಳನ್ನು ಪ್ರತಿಯೊಬ್ಬರು ಪ್ರೀತಿಸಬೇಕು. ಅವರನ್ನು ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರು, ಪೋಷಕರು ಹಾಗೂ ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದರು.

ಹಳೆಯ ವಿದ್ಯಾರ್ಥಿಗಳಾದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಎಸ್. ಗೋವಿಂದ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಿ. ರಮಾಕಾಂತ್, ವಿಐಎಸ್‌ಎಲ್ ನಿವೃತ್ತ ನೌಕರ ಸುರೇಶ್ ವರ್ಮಾ, ಮೋಹನ್ ಸೇರಿದಂತೆ ಇನ್ನಿತರರು ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಬೇಡ. ಈ ಶಾಲೆಯಲ್ಲಿ ಓದಿರುವ ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳು ಮಿತಿ ಮೀರಿ ಮೊಬೈಲ್ ಬಳಕೆಯಿಂದ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಅಲ್ಲದೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇವುಗಳಿಂದ ದೂರವಿದ್ದು, ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ವಿದ್ಯೆ, ಜ್ಞಾನ, ಉತ್ತಮ ಸಂಸ್ಕಾರಕ್ಕೆ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಹೆಚ್ಚಿದೆ ಎಂದರು.

ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಕಾಂತಪ್ಪ, ಹಳೆಯ ವಿದ್ಯಾರ್ಥಿಗಳಾದ ಹಳೇನಗರ ಕುಂಬಾರರ ಬೀದಿ ನಿವಾಸಿ ಬಸವರಾಜ್, ಮುನಿರಾಜ್, ಎನ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಮಿಳು ಸಂಘಮ್ ಮಾಜಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರು ಸೇರಿದಂತೆ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.