ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ದೇಶದಲ್ಲಿ ಹಿಂದೂ ದೇವಾಲಯಗಳ ರಕ್ಷಣೆಗೆ ಸನಾತನ ಬೋರ್ಡ್ ಜಾರಿಗೆ ಬರಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.ಪೆರ್ಣಂಕಿಲ ಮಹಾಗಣಪತಿ ಮಹಾಲಿಂಗೇಶ್ವರ ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಇಂದು ಅನೇಕ ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದೆ. ಅವುಗಳ ಜೀರ್ಣೋದ್ಧಾರ ಆಗುತ್ತಿಲ್ಲ, ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ, ಭಕ್ತರು ನೀಡುವ ಕಾಣಿಕೆ ಸಧ್ವಿನಿಯೋಗ ಆಗುತ್ತಿಲ್ಲ ಎಂದು ಬೇಸರಿಸಿದ ಶ್ರೀಗಳು, ದೇಗುಲದ ಸಂಪತ್ತಿನಿಂದ ಊರಿಗೆ ಶಿಕ್ಷಣ ಸಿಗುವಂತಾಗಬೇಕು, ಊರಿನ ಜನರ ಆರೋಗ್ಯಕ್ಕೆ ಈ ಹಣ ಬಳಕೆಯಾಗಬೇಕು, ಅದಕ್ಕಾಗಿ ಎಲ್ಲ ದೇವಾಲಯಗಳನ್ನು ಸೇರಿಸಿ ಸನಾತನ ಬೋರ್ಡ್ ಸ್ಥಾಪನೆಯಾಗಬೇಕು ಎಂದು ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದರು.
ಪ್ರಯಾಗದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಅಭೂತಪೂರ್ವ ವ್ಯವಸ್ಥೆಗಳನ್ನು ಮಾಡಿದ್ದಾರೆ. ಆದರೂ ಕೆಲ ಅನನುಕೂಲತೆ ಆಗಿದೆ. ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಬೇಕು, ಅಪಾಯಕ್ಕೆ ಅವಕಾಶ ಮಾಡಿಕೊಡಬಾರದು ಎಂದವರು ಹೇಳಿದರು.ಗೋಸಂಪತ್ತು ರಕ್ಷಣೆಗೆ ಕರೆ ನೀಡಲಾಗಿದ್ದ ವಿಷ್ಣುಸಹಸ್ರನಾಮ ಶಿವಪಂಚಾಕ್ಷರಿ ನಾಮ ಅಭಿಯಾನಕ್ಕೆ ಅನೇಕ ಪೀಠಾಧಿಪತಿಗಳು, ಮಠಾಧಿಪತಿಗಳು, ಸಂತರು, ಸಮಾಜದಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಈಗ ಒಂದು ಹಂತದ ಅಭಿಯಾನ ನಡೆದಿದೆ. ಗೋರಕ್ಷಣೆಗೆ ಸರ್ಕಾರ ಬಗ್ಗದಿದ್ದರೆ ಮತ್ತೆ ನಮ್ಮ ಅಭಿಯಾನ ಮುಂದುವರಿಯುತ್ತದೆ. ಪೀಠಾಧಿಪತಿಗಳು ಸೌಮ್ಯ ಸ್ವರೂಪದಲ್ಲಿ ಹೋರಾಟ ಮಾಡಲು ಸಾಧ್ಯ, ಅದರಂತೆ ಮುಂದುವರಿಯುತ್ತೇವೆ ಎಂದವರು ಎಚ್ಚರಿಕೆ ನೀಡಿದರು.--------------------ಖರ್ಗೆ ಹೇಳಿಕೆ ಅವರ ಘನತೆಗೆ ತಕ್ಕುದಲ್ಲ: ಪೇಜಾವರ ಶ್ರೀಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದರೆ ದೇಶದ ಬಡತನ ನಿರ್ಮೂಲನ ಆಗುತ್ತದೆಯೇ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಇಂತಹ ಬಾಲಿಶ ಹೇಳಿಕೆ ಅವರ ಘನತೆಗೆ ತಕ್ಕುದ್ದಲ್ಲ. ಕುಂಭಮೇಳಕ್ಕೆ ಬಂದ ಎಲ್ಲರನ್ನೂ ಖರ್ಗೆ ಅವರು ಮೂರ್ಖರೆಂದು ಹೇಳಿದ ಹಾಗೆ ಆಯ್ತು, ಅಲ್ಲಿಗೆ ದೇಶ ವಿದೇಶದಿಂದ ಜನ ಬರುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು.