ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ವೈಜ್ಞಾನಿಕ ದಾಖಲೆಗಳಿಂದ ಹಲವಾರು ಮಂದಿಗೆ ಶಿಕ್ಷೆಯಾದ ಉದಾಹರಣೆಗಳೂ ಇವೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಸಹಿತ ಸಿಬ್ಬಂದಿ ವೃತ್ತಿಯಲ್ಲಿ ಅಗತ್ಯ ತಾಂತ್ರಿಕ ಕೌಶಲಗಳನ್ನು ಗಳಿಸಿಕೊಂಡರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಿದೆ ಎಂದು ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಅಮಿತ್ ಸಿಂಗ್ ಹೇಳಿದರು.ಅವರು ಇಲ್ಲಿನ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಶನಿವಾರ ನಡೆದ ಪಶ್ಚಿಮ ವಲಯ ಮಟ್ಟದ 6ನೇ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪೊಲೀಸ್ ಕರ್ತವ್ಯ ಕೂಟಗಳು ಜ್ಞಾನ ವರ್ಧನೆಯ ಜತೆಗೆ ವೃತ್ತಿಪರ ತನಿಖೆಗೆ ಬಹಳಷ್ಟು ಸಹಕಾರಿಯಾಗುತ್ತದೆ. ಮುಂದಿನ ಕರ್ತವ್ಯ ಕೂಟ ಸಹಿತ ರಾಷ್ಟ್ರಮಟ್ಟದಲ್ಲಿಯೂ ಮತ್ತಷ್ಟು ಪದಕ ಸಿಗುವಂತಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಅವರು ಕೂಟದ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ಘೋಷಿಸಿದರು.ಮಾಹೆಯ ಸಿಒಒ ಡಾ. ರವಿರಾಜ್ ಎನ್.ಎಸ್. ಮಾತನಾಡಿ, ಪೊಲೀಸರು ಕಾನೂನು ಪಾಲನೆ ಮಾಡುವ ಜತೆಗೆ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಗಮನಹರಿಸಬೇಕು. ಇದರೊಂದೊಗೆ ಇತರರಿಗೆ ಸಹಕಾರ ನೀಡುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಮಣಿಪಾಲದ ಡಾ. ಟಿ.ಎಂ.ಎ. ಪೈ ಅವರು ಈ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಿದ್ದರು. ಪೊಲೀಸರಿಗೆ ಬೇಕಿರುವ ಕೌಶಲ ತರಬೇತಿಗಳನ್ನು ನೀಡಲು ಮಾಹೆ ಬದ್ಧವಾಗಿದ್ದು, ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕೆ.ಅರುಣ್, ಮಂಗಳೂರು ವಲಯದ ಅಭಿಯೋಜನ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಿ.ಎ.ಹೆಗಡೆ ಉಪಸ್ಥಿತರಿದ್ದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ಸ್ವಾಗತಿಸಿದರು. ಪಶ್ಚಿಮ ವಲಯ ಎಫ್‌ಪಿಬಿ ಡಿವೈಎಸ್‌ಪಿ ಗೌರೀಶ್ ವಂದಿಸಿದರು. ಪೊಲೀಸ್ ಸಿಬಂದಿ ಶಿವಾನಂದ ನಾಯರಿ ನಿರೂಪಿಸಿದರು.ಈ ಕರ್ತವ್ಯ ಕೂಟದಲ್ಲಿ ಪೊಲೀಸ್ ಸಿಬ್ಬಂದಿಗೆ ಅಪರಾಧ ಕಾನೂನು, ವಿಧಿ ವಿಜ್ಞಾನ ಪರೀಕ್ಷೆ, ಫಾರೆನ್ಸಿಕ್ ಫೋಟೋಗ್ರಫಿ, ಬೆರಳಚ್ಚು ಪರೀಕ್ಷೆ, ಹ್ಯಾಂಡ್ಲಿಂಗ್, ಲಿಫ್ಟಿಂಗ್, ಪ್ಯಾಕಿಂಗ್, ಫೋಟೋಗ್ರಫಿ, ವೀಡಿಯೋಗ್ರಫಿ ಸಹಿತ ಹಲವಾರು ರೀತಿಯ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
-------ಶೈನಿಗೆ ಪ್ರಶಸ್ತಿಈ ಕೂಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶ್ವಾನ ಶೈನಿಗೆ ಅತ್ಯುತ್ತಮ ಶ್ವಾನ ಪ್ರಶಸ್ತಿ ಲಭಿಸಿತು. ಸಂತೋಷ್ ಗೌಡ ಹಾಗೂ ಗಜಾನನ ಅವರು ಇದರ ತರಬೇತುದಾರರಾಗಿದ್ದಾರೆ. ಇಲಾಖೆಯಲ್ಲಿ ಈ ಶ್ವಾನ ಮೂರುವರೆ ವರ್ಷದಿಂದ ಕರ್ತವ್ಯ ನಿರ್ವಹಿಸಿಕೊಂಡಿದೆ.