ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಧ್ಯಾನದಿಂದ ಶಾಂತಿ ಮತ್ತು ಆರೋಗ್ಯ ಲಭಿಸುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬಿ.ಕೆ. ಲಕ್ಷ್ಮೀಜಿ ಹೇಳಿದರು.ಹೂಟಗಳ್ಳಿಯ ಅನಂತೇಶ್ವರ ಭವನದಲ್ಲಿ ಭಾನುವಾರ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಪ್ರಾಂತೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆದ್ದರಿಂದ ಪ್ರತಿಯೊಬ್ಬರೂ ಬೆಳಗ್ಗೆ ಹಾಗೂ ಸಂಜೆಯ ವೇಳೆ ಧ್ಯಾನಾಸಕ್ತರಾಗಬೇಕು ಎಂದು ಕರೆ ನೀಡಿದರು.
ಧ್ಯಾನ ಮಾಡುವುದರಿಂದ ಮನಸ್ಸು ಪರಿಶುದ್ಧವಾಗಿರುತ್ತದೆ. ಪ್ರಶಾಂತತೆ ಲಭಿಸುತ್ತದೆ. ಇದ್ದರಿಂದ ನೆಮ್ಮದಿಯೂ ಇರುತ್ತದೆ. ಕೋಪ ಮಾಡಿಕೊಳ್ಳದಿದ್ದಲ್ಲಿ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಅವರು ಹೇಳಿದರು.ಮುಖ್ಯ ಭಾಷಣಕಾರರಾಗಿದ್ದ ದಕ್ಷಿಣ ವಲಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿಜಯಕುಮಾರ್ ಬಲ್ಲೇನಹಳ್ಳಿ ಮಾತನಾಡಿ,
ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ಮಕ್ಕಳಲ್ಲಿ ಕಂಡು ಬರುವ ಖಿನ್ನತೆ ಹೋಗಲಾಡಿಸಲು ಕೌನ್ಸೆಲಿಂಗ್ ಮಾಡಲಾಗುತ್ತದೆ. ಆಗಲೂ ಕೂಡ ಧ್ಯಾನ ಮಾಡುವಂತೆ ಸೂಚಿಸಲಾಗುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲದಿದ್ದಲ್ಲಿ ಆರೋಗ್ಯ ಹದಗೆಡುತ್ತದೆ ಎಂದರು.ಕೆಲವರು ಧ್ಯಾನ ಮಾಡಿ ಎಂದರೆ ಪೂಜೆ ಮಾಡುವುದು, ನಾವೇಕೆ ಮಾಡಬೇಕು? ಎಂದುಕೊಳ್ಳುತ್ತಾರೆ. ಧ್ಯಾನ ಬೇರೆ, ಪೂಜೆ ಬೇರೆ. ಧ್ಯಾನ ಮನಸ್ಸನ್ನು ಧನಾತ್ಮಕವಾಗಿ ಪರಿವರ್ತಿಸುತ್ದದೆ ಎಂದು ಅವರು ಹೇಳಿದರು.
ಯಾವುದೇ ರಕ್ತಪಾತವಿಲ್ಲದೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದ ಹೆಗ್ಗಳಿಕೆ ನಮ್ಮ ದೇಶಕ್ಕಿದೆ. ನಮ್ಮ ಮಕ್ಕಳು ಹೇಳುವುದನ್ನು ಕೇಳುವುದಿಲ್ಲ. ಆದರೆ ಮಾಡುವುದನ್ನು ಅನುಕರಿಸುತ್ತಾರೆ. ಆದ್ದರಿಂದ ಪೋಷಕರು ಸರಿಯಾದ ರೀತಿಯಲ್ಲಿ ನಡೆದುಕೊಂಡರೆ ಮಕ್ಕಳು ಕೂಡ ಪಾಲಿಸುತ್ತಾರೆ ಎಂದರು.ಆಹಾರ ಪದ್ಧತಿ ಮತ್ತು ಜೀವನಶೈಲಿ ಕೂಡ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ನೀರು, ನಿದ್ದೆ, ಪೌಷ್ಟಿಕ ಆಹಾರ ವ್ಯಾಯಾಮ, ಸಮಯ- ಈ ಪಂಚ ಸೂಚ್ರಗಳನ್ನು ಅನುಸರಿಸಿದರೆ ಆರೋಗ್ಯದಿಂದ ಇರಬಹುದು. ಮನಸ್ಥಿತಿ ಸರಿ ಇದ್ದಲ್ಲಿ ಪರಿಸ್ಥಿತಿ, ಮನೆ ಸ್ಥಿತಿ, ಮನಿ ಸ್ಥಿತಿ- ಎಲ್ಲವೂ ಚೆನ್ನಾಗಿರುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಧ್ಯಾನ ಮುಖ್ಯ ಎಂದು ಅವರು ಹೇಳಿದರು.
ಮುಖ್ಯಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಆತ್ಮಹತ್ಯೆ ಹಾಗೂ ಅಪರಾಧ ಕೃತ್ಯ ಎಸಗುವವರು ಆ ಕ್ಷಣದಲ್ಲಿ ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಲ್ಲಿ ಅವಘಡಗಳಿಂದ ಪಾರಾಗಬಹುದು. ಒಂದು ಕ್ಷಣ ಆಲೋಚಿಸಿದಲ್ಲಿ ಮುಂದೆ ಪರಿತಪಿಸುವುದು ತಪ್ಪುತ್ತದೆ ಎಂದರು.ಅಲೆಯನ್ಸ್ ರಾಜ್ಯಪಾಲ ಸಿರಿಬಾಲು ಮಾತನಾಡಿ, ತಮಗೆ ಒಂದು ವರ್ಷ ಅವಧಿಯಲ್ಲಿ ಮೂರು ತಿಂಗಳು ಮಾತ್ರ ಬಾಕಿ ಇದೆ. ಈ ಅವಧಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ರಾಂತೀಯ ಅಧ್ಯಕ್ಷೆ ಇಂದಿರಾ ವೆಂಕಟೇಶ್ ಮಾತನಾಡಿದರು. ಅತಿಥೇಯ ಸಮಿತಿ ಅಧ್ಯಕ್ಷರಾದ ಒಂದನೇ ಉಪ ರಾಜ್ಯಪಾಲ ಎಸ್. ವೆಂಕಟೇಶ್ ಸ್ವಾಗತಿಸಿದರು.ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ. ಬೈರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಖಜಾಂಚಿ ಕೃಷ್ಣೋಜಿರಾವ್ ವಂದಿಸಿದರು. ಸಿರಿಮಾ ಮನೋಜ್ ರಾಷ್ಟ್ರಧ್ವಜ, ಶ್ರೀಕಾಂತ್ ಅಲೆಯನ್ಸ್ ಧ್ವಜವನ್ನು ವೇದಿಕೆಗೆ ತಂದರು.ಕ್ಲಬ್ಬಿನ ಮಾಜಿ ರಾಜ್ಯಪಾಲ ಜಿ.ಎಸ್. ನಂಜುಂಡಸ್ವಾಮಿ, ಮೂರನೇ ಉಪ ರಾಜ್ಯಪಾಲ ಎಂ.ಎಸ್. ಸಂತೋಷ್ ಕುಮಾರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ನ. ಗಂಗಾಧರಪ್ಪ, ಪಿಆರ್‌ಒ ಎನ್. ಬೆಟ್ಟೇಗೌಡ, ಅತಿಥೇಯ ಸಮಿತಿ ಕಾರ್ಯದರ್ಶಿ ಎಸನ್. ಸುನಿಲ್ ಕುಮಾರ್, ಖಜಾಂಚಿ ಶ್ರೀಕಾಂತ್ , ವಲಯ ಅಧ್ಯಕ್ಷೆ ಸಿರಿಮಾ ಬಿ. ರಾಜು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))