ಮಾಗಡಿ: ಪಟ್ಟಣದ ಐತಿಹಾಸಿಕ ಪ್ರಸನ್ನ ಸೋಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.ರಥಸಪ್ತಮಿ ಅಂಗವಾಗಿ ಪ್ರತಿ ವರ್ಷದಂತೆ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ರುದ್ರಹೋಮ, ಯಾತ್ರಾದಾನ ಸೇವೆ, ಅಷ್ಟಾವದಾನ ಸೇವೆ, ಮಂತ್ರಪುಷ್ಪ ಸೇವೆ, ಫಲಪುಷ್ಪ ಸೇವೆ, ಹೂವಿನ ಅಲಂಕಾರ, ರುದ್ರಾಭಿಷೇಕ, ಕಲಾ ಸೇವೆ ನೆರವೇರಿತು.
ಮಾಗಡಿ: ಪಟ್ಟಣದ ಐತಿಹಾಸಿಕ ಪ್ರಸನ್ನ ಸೋಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.
ರಥಸಪ್ತಮಿ ಅಂಗವಾಗಿ ಪ್ರತಿ ವರ್ಷದಂತೆ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ರುದ್ರಹೋಮ, ಯಾತ್ರಾದಾನ ಸೇವೆ, ಅಷ್ಟಾವದಾನ ಸೇವೆ, ಮಂತ್ರಪುಷ್ಪ ಸೇವೆ, ಫಲಪುಷ್ಪ ಸೇವೆ, ಹೂವಿನ ಅಲಂಕಾರ, ರುದ್ರಾಭಿಷೇಕ, ಕಲಾ ಸೇವೆ ನೆರವೇರಿತು.ಮಧ್ಯಾಹ್ನ 12.40ರಿಂದ 1.30ರ ಶುಭ ಗಳಿಗೆಯಲ್ಲಿ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕೂರಿಸಿ ಭಕ್ತರ ಜೈಕಾರ, ಬಾಳೆಹಣ್ಣು, ದವನ ಎಸೆದು ಅದ್ದೂರಿ ಚಾಲನೆ ನೀಡಲಾಯಿತು. ರಥ ದೇವಸ್ಥಾನದ ಅರ್ಧ ಭಾಗದವರೆಗೂ ಮಾತ್ರ ತೇರನ್ನೆಳೆದು, ಮತ್ತೆ ಸ್ವಲ್ಪಸ್ವಲ್ಪವೇ ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ವೇಳೆ ತೇರೆಳೆಯುವುದು ಇಲ್ಲಿನ ವಿಶೇಷ.
ಶಾಸಕ ಎಚ್.ಸಿ.ಬಾಲಕೃಷ್ಣ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿ, ಜನವರಿಯಲ್ಲಿ ಮೊದಲ ಹಬ್ಬ ರಥಸಪ್ತಮಿ ಆಚರಿಸುತ್ತಿದ್ದೇವೆ. ಕೆಂಪೇಗೌಡರ ಕಾಲದ ಐತಿಹಾಸಿಕ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಹಬ್ಬ ನಡೆಯುತ್ತಿದ್ದು, ತಾಲೂಕಿನಲ್ಲಿ ಸಮೃದ್ಧ ಮಳೆ ಬೆಳೆಯಾಗಿ ದೇವರು ಎಲ್ಲರನ್ನು ಸಂತೋಷವಾಗಿಡಬೇಕು ಎಂದು ಪ್ರಾರ್ಥಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣನವರ ಸಹಕಾರದೊಂದಿಗೆ 20 ಕೋಟಿ ವೆಚ್ಚದಲ್ಲಿ ದೇವಸ್ಥಾನ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿದ್ದು ಗೋಪುರ ಸೇರಿದಂತೆ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ಶೀಘ್ರದಲ್ಲೇ ಅಭಿವೃದ್ಧಿ ಮಾಡಲಾಗುತ್ತದೆ. ದೇವಸ್ಥಾನದ ಹಿಂಭಾಗದಲ್ಲಿ 63 ಅಡಿ ಎತ್ತರದ ಶಿವನ ಪ್ರತಿಮೆ ನಿರ್ಮಿಸುವ ಗುರಿ ಇದೆ ಎಂದರು.ರಥಸಪ್ತಮಿ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಸಂಗೀತೋತ್ಸವ, ಉಯ್ಯಾಲೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಚ್.ಎಂ.ರೇವಣ್ಣ, ತಹಸೀಲ್ದಾರ್ ತೇಜಸ್ವಿನಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬಾಲಾಜಿ ರಂಗನಾಥ್, ಕಾಂಗ್ರೆಸ್ ಹಿರಿಯ ಮುಖಂಡರಾದ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಶೈಲಜಾ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಪಟೇಲ್, ಸದಸ್ಯರಾದ ಗೋಪಾಲ ದೀಕ್ಷಿತ್, ನಾಗರಾಜು, ಸತೀಶ್ ಪ್ರಸಾದ್, ಶಿವರಾಜು, ಮಂಜುನಾಥ್, ಪೂಜಾ ಶಾಂತಕುಮಾರ್, ಹೇಮಲತಾ ನಾಗರಾಜು ಇತರರು ಭಾಗವಹಿಸಿದ್ದರು.