ಸಾರಾಂಶ
ಹಾವೇರಿ: ಬರಗಾಲದ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಗೆ ಜಿಲ್ಲೆಯಲ್ಲಿ ಭರ್ಜರಿ ಸಿದ್ಧತೆ ನಡೆದಿದೆ.
ಹಬ್ಬದ ಖರೀದಿ ಭರಾಟೆ ಜೋರಾಗಿದ್ದು, ಬಗೆಬಗೆಯ ಆಕಾಶ ಬುಟ್ಟಿಗಳು ವಿಶಿಷ್ಟ ಚಿತ್ತಾರಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವಿಭಿನ್ನ ವಿನ್ಯಾಸಗಳಿಂದ ಗ್ರಾಹಕರನ್ನು ಆಕರ್ಷಿಸುತ್ತಿವೆ.ದೀಪಾವಳಿಯ ಹಬ್ಬದ ಪ್ರಮುಖ ಆಕರ್ಷಣೆಯಾದ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಬಣ್ಣ, ಬಣ್ಣದ ವಿಶಿಷ್ಟ ಆಕಾರದ ಆಕಾಶಬುಟ್ಟಿಗಳ ಸಾಲುಗಳು ಪ್ರಮುಖ ಆಕರ್ಷಣೆಯಾಗಿವೆ. ವೈವಿಧ್ಯಮಯ ಆಕಾಶಬುಟ್ಟಿಗಳನ್ನು ಕೊಳ್ಳಲು ಜನತೆ ಮುಗಿಬಿಳುತ್ತಿದ್ದಾರೆ.
ರೈತರಿಗಿಲ್ಲ ಹಬ್ಬದ ಸಂಭ್ರಮ: ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆ ಕಂಗೆಟ್ಟಿರುವ ಜಿಲ್ಲೆಯ ಅನ್ನದಾತರಲ್ಲಿ ಈ ವರ್ಷ ದೀಪಾವಳಿ ಹಬ್ಬದ ಸಂಭ್ರಮ ಅಷ್ಟಾಗಿ ಕಂಡುಬರುತ್ತಿಲ್ಲ. ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾನಿಗೀಡಾಗಿದ್ದು, ರೈತರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬರಗಾಲದಿಂದ ರೈತರ ಬದುಕು ತಲ್ಲಣಗೊಂಡಿದೆ. ಕೂಲಿಕಾರ್ಮಿಕರಿಗೂ ಕೆಲಸ ಇಲ್ಲದಂತಾಗಿದೆ. ಸಂಕಷ್ಟದಲ್ಲಿದ್ದರೂ ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಲು ರೈತರು ಸಿದ್ಧತೆ ನಡೆಸಿದ್ದಾರೆ.ಹಬ್ಬಕ್ಕೆ ಭರದ ಸಿದ್ಧತೆ: ನಾಡಿನ ದೊಡ್ಡ ಹಬ್ಬವಾದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಜಿಲ್ಲೆಯಾದ್ಯಂತ ಸಿದ್ಧತೆ ನಡೆದಿದೆ. ಹಬ್ಬದ ಪೂರ್ವ ತಯಾರಿಯಾಗಿ ಜನತೆ ಬಗೆ-ಬಗೆಯ ಹೂವು, ಹಣ್ಣು ಸೇರಿದಂತೆ ಇತರ ದಿನಸಿ ಖರೀದಿಗೆ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ದೀಪಾವಳಿ ನಿಮಿತ್ತ ಲಕ್ಷ್ಮಿ ಹಾಗೂ ಸರಸ್ವತಿ ದೇವಿಯನ್ನು ಮನೆ, ಅಂಗಡಿಗಳಲ್ಲಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುವ ಸಂಪ್ರದಾಯವಿದೆ. ಆದರೆ, ದಿನನಿತ್ಯದ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಇದು ಜನಸಾಮಾನ್ಯರಲ್ಲಿ ಹಬ್ಬ ಆಚರಣೆ ಉತ್ಸಾಹ ಕಳೆಗುಂದುವಂತೆ ಮಾಡಿದೆ. ಮೇಣಬತ್ತಿ ದೀಪ, ಆಕಾಶ ಬುಟ್ಟಿ, ಸೇವಂತಿಗೆ ಹೂವು, ಸಿಹಿ ತಿನಿಸುಗಳಲ್ಲಿ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಜೇಬುಗಳಿಗೆ ಕಹಿ ಅನುಭವ ನೀಡುತ್ತಿದೆ. ಅಲಂಕಾರಿಕ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಹಾಗಾಗಿ ಗ್ರಾಹಕರು ಯೋಚಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಕಂಡು ಬರುತ್ತಿದ್ದರೂ ವ್ಯಾಪಾರ ಮಾತ್ರ ಕಳೆದ ಬಾರಿಗಿಂತ ತೀರಾ ಕಡಿಮೆಯಾಗಿದೆ.
ಅಲಂಕಾರಿಕ ಸಾಮಗ್ರಿ ಖರೀದಿ: ದೀಪಾವಳಿ ಹಬ್ಬದಲ್ಲಿ ರೈತನ ಮಿತ್ರ ಎತ್ತುಗಳು ಸೇರಿದಂತೆ ಜಾನುವಾರುಗಳಿಗೆ ವಿಶೇಷವಾಗಿ ಅಲಂಕಾರ ಮಾಡಲಾಗುತ್ತಿದೆ. ಹಬ್ಬದ ಖಷಿಗಾಗಿ ಮನೆಯ ಎಲ್ಲ ಸದಸ್ಯರಿಗೆ ಹೊಸ ಬಟ್ಟೆ ಖರೀದಿ ಮಾಡುವಂತೆ ಜಾನುವಾರುಗಳಿಗೆ ಅಲಂಕಾರದ ಸಾಮಗ್ರಿಗಳನ್ನು ಖರೀದಿ ಮಾಡಲಾಗುತ್ತಿದೆ. ಪ್ರಮುಖವಾಗಿ ಮೂಗುದಾರ, ಜೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು, ಗೆಜ್ಜೆಸರ, ಕೊಂಬಿಗೆ ಹಚ್ಚಲು ಬಗೆಬಗೆಯ ಬಣ್ಣ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ತೊಡಗಿದ್ದರು. ಜತೆಗೆ ವಾಹನಗಳ ಅಲಂಕಾರಿಕ ವಸ್ತುಗಳ ವ್ಯಾಪಾರವೂ ಜೋರಾಗಿತ್ತು.