ಹುಬ್ಬಳ್ಳಿ:

ಸ್ವಚ್ಛ ನಗರ ನಿರ್ಮಾಣವೇ ತಮ್ಮ ಮೊದಲ ಆದ್ಯತೆಯಾಗಿದ್ದು, ಮಳೆಗಾಲ ಹಿನ್ನೆಲೆಯಲ್ಲಿ ನಗರದಲ್ಲಿ ಅಪಾಯಕಾರಿಯಾಗಿರುವ ಮರಗಳ ಕೊಂಬೆ ತೆರವುಗೊಳಿಸುವುದು, ಚರಂಡಿಗಳ ಸ್ವಚ್ಛತೆ ಹಾಗೂ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ಪಾಲಿಕೆ ನೂತನ ಮೇಯರ್ ದುರ್ಗಮ್ಮ ಬಿಜವಾಡ ಹೇಳಿದರು.

ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಬುಧವಾರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ವಿವಿಧ ಭಾಗಗಳಲ್ಲಿ ಚರಂಡಿಗಳು ತುಂಬಿ ನೀರು ನಿಲ್ಲುವ ಸಮಸ್ಯೆ ಕಂಡುಬರುತ್ತಿದ್ದು, ಅವುಗಳನ್ನು ತಕ್ಷಣವೇ ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರತಿವಾರ ಪರಿಶೀಲನೆ ನಡೆಸಲಾಗುವುದು ಎಂದರು.

ಫುಟ್‌ಪಾತ್ ಅತಿಕ್ರಮಣ ಕುರಿತು ಮಾತನಾಡಿ, ಸರ್ಕಾರಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ ಬಳಿಕ ಕೆಲವರು ಮತ್ತೆ ಫುಟ್‌ಪಾತ್ ಮೇಲೆ ಅಂಗಡಿ ಸಾಮಗ್ರಿ, ಬೋರ್ಡ್ ಹಾಗೂ ಇತರೆ ವಸ್ತುಗಳನ್ನು ಇಟ್ಟು ಅತಿಕ್ರಮಣ ಮಾಡುತ್ತಿದ್ದಾರೆ. ಮೊದಲಿಗೆ ಒಂದು ಅಥವಾ ಎರಡು ಬಾರಿ ಎಚ್ಚರಿಕೆ ನೀಡಲಾಗುವುದು. ಆದರೂ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಜತೆಗೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿ ಭಾನುವಾರವೇ ಕಾರ್ಯಾಚರಣೆ ನಡೆಸುವುದಿಲ್ಲ. ನಿಗದಿತ ದಿನ ತಿಳಿಸಿದರೆ ಅತಿಕ್ರಮಣಕಾರರು ಆ ದಿನ ಮಾತ್ರ ಎಚ್ಚರಿಕೆ ವಹಿಸುತ್ತಾರೆ. ಆದ್ದರಿಂದ ವಾರದ ಯಾವುದೇ ದಿನ ಅಚ್ಚರಿ ದಾಳಿ ನಡೆಸಿ ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ತಿಳಿಸಿದರು.


ಚರ್ಚಿಸಿ ನಿರ್ಧಾರ:

ಗುರುವಾರ ಬೆಳಗಾವಿಯಲ್ಲಿ ವಿಭಾಗ ಮಟ್ಟದ ಸಭೆ ನಡೆಯಲಿದ್ದು ಪಾಲಿಕೆಗೆ ₹210 ಕೋಟಿಗೂ ಅಧಿಕ ಅನುದಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಇಲ್ಲಿಂದ ನಿಯೋಗ ತಗೆದುಕೊಂಡು ಹೋಗುವ ಕುರಿತು ಪಾಲಿಕೆ ಸದಸ್ಯರದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು‌ ಎಂದರು.

ಎಸ್‌ಐಆರ್ ಪ್ರಕ್ರಿಯೆಯಿಂದ ಕೆಲ ಸಾರ್ವಜನಿಕ ಸೇವೆಗಳಲ್ಲಿ ತಾತ್ಕಾಲಿಕ ವಿಳಂಬ ಉಂಟಾಗಿರುವುದನ್ನು ಒಪ್ಪಿಕೊಂಡ ಮೇಯರ್, ಇದು ಕೇವಲ ಒಂದು ತಿಂಗಳ ಸಮಸ್ಯೆ. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲ ಸೇವೆಗಳು ಸಹಜ ಸ್ಥಿತಿಗೆ ಮರಳಲಿವೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ಅಧಿಕಾರಿಗಳೊಂದಿಗೆ ಸಭೆ:

ಸುದ್ದಿಗೋಷ್ಠಿಗೂ ಪೂರ್ವದಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೇಯರ್‌, ಸ್ವಚ್ಛತೆ, ಸಮರ್ಪಕ ನೀರು ಪುರೈಕೆ, ನಾಲಾ, ಚರಂಡಿಯಲ್ಲಿನ ಹೂಳು ತೆಗೆಯುವುದು, ಎಲ್‌ಇಡಿ ಲೈಟ್‌ ಅಳವಡಿಕೆ, ಬೀಳುವ ಹಂತದಲ್ಲಿರುವ ಮರಗಳ ತೆರವು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಸಂತೋಷ ಯರಂಗಳಿ ಮಾತನಾಡಿ, ಅವಳಿ ನಗರದಲ್ಲಿ 300ಕ್ಕೂ ಅಧಿಕ ಬ್ಲಾಕ್‌ ಸ್ಪಾಟ್‌ಗಳಿದ್ದವು. ನಿರಂತರ ಕಾರ್ಯಾಚರಣೆಯಿಂದ ಅವುಗಳ ಸಂಖ್ಯೆ 144ಕ್ಕೆ ಇಳಿದಿದೆ. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದರು. ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಅವಳಿ ನಗರದ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ವ್ಯಾಪಕ ಪ್ರಮಾಣದಲ್ಲಿದ್ದು, ಸದ್ಯ ಮಳೆ ಬೀಳುತ್ತಿದೆ. ಗುಂಡಿ ಮುಚ್ಚಿದರೂ ಪ್ರಯೋಜನವಾಗುವುದಿಲ್ಲ. ಗಣೇಶ ಚತುರ್ಥಿ ವೇಳೆಗೆ ಗುಂಡಿಗಳಿಗೆ ತೆಪೆ ಹಾಕುವ ಕಾರ್ಯ ಆರಂಭಿಸುತ್ತೇವೆ ಎಂದರು.

ಈ‌ ವೇಳೆ ಉಪಮೇಯರ್ ರತ್ನಾಬಾಯಿ ನಾಝರೆ, ಉಪ ಆಯುಕ್ತ ‌ವಿಜಯಕುಮಾರ ಸೇರಿದಂತೆ ಪಾಲಿಕೆ ವಲಯ ಆಯುಕ್ತರು, ಅಧಿಕಾರಿಗಳು ಪಾಲ್ಗೊಂಡಿದ್ದರು.