ಸಾರಾಂಶ
ಗುಂಡ್ಲುಪೇಟೆ: ದೇಶ ವಿಭಜನೆಯ ಹೇಳಿಕೆ ನೀಡಿರುವ ಬೆಂಗಳೂರು ಗ್ರಾ. ಕ್ಷೇತ್ರದ ಸಂಸದ ಡಿ.ಕೆ.ಸುರೇಶ್‌ರನ್ನು ಖಂಡಿಸಿ ಬಿಜೆಪಿ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಡಿಕೆಸು ಪ್ರತಿಕೃತಿ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿ ಡಿ.ಕೆ.ಸುರೇಶ್ ಹಾಗೂ ಕಾಂಗ್ರೆಸ್ ವಿರುದ್ಧ ದಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್‌ಕುಮಾರ್ ಮಾತನಾಡಿ ದೇಶ ವಿಭಜನೆ ಎಂಬ ಪಿಡುಗು ಕಾಂಗ್ರೆಸ್‌ನ ಡಿಎನ್ಎದಲ್ಲೇ ಬಂದಿದ್ದು, ಸ್ವಾತಂತ್ರ್ಯದ ದಿನದಿಂದಲೂ ದೇಶವನ್ನ ಒಡೆದು ಆಳುವ ನೀತಿಯನ್ನ ಕಾಂಗ್ರೆಸ್ಸ್ ಮಾಡಿಕೊಂಡು ಬಂದಿದೆ ಇದರ ಮುಂದುವರೆದ ಭಾಗವಾಗಿ ಡಿಕೆ ಸುರೇಶ್ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಸಂಸದ ಡಿ.ಕೆ.ಸುರೇಶ್‌ರನ್ನ ಸಂಸತ್ ಸದಸ್ಯತ್ವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆ ನಂತರ ಪಟ್ಟಣದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ತೆರಳಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಅಧ್ಯಕ್ಷ,ನೂತನ ಮಂಡಲ ಅಧ್ಯಕ್ಷ ಸೇರಿದಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇದ್ದರು.