ಪುತ್ತೂರು: ಮುಂಗಾರು ಸಮೀಪಿಸಿದರೂ ನಡೆದಿಲ್ಲ ಚರಂಡಿ ದುರಸ್ತಿ

| Published : May 09 2024, 01:01 AM IST

ಪುತ್ತೂರು: ಮುಂಗಾರು ಸಮೀಪಿಸಿದರೂ ನಡೆದಿಲ್ಲ ಚರಂಡಿ ದುರಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ರಸ್ತೆಗಳಿದ್ದು ಈ ರಸ್ತೆಗಳಲ್ಲಿನ ಚರಂಡಿಗಳನ್ನು ಪ್ರತಿ ವರ್ಷವೂ ಮಳೆಗಾಲಕ್ಕೆ ಮುನ್ನ ದುರಸ್ತಿಗೊಳಿಸಿ ಸುಗಮ ನೀರು ಹರಿಯಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಚರಂಡಿ ಕಾಮಗಾರಿಗಳು ಆರಂಭಗೊಂಡಿಲ್ಲ

ಸಂಶುದ್ದೀನ್ ಸಂಪ್ಯ

ಕನ್ನಡಪ್ರಭ ವಾರ್ತೆ ಪುತ್ತೂರು ಎಲ್ಲೆಡೆ ಸುಡು ಬಿಸಿಲು ಹೆಚ್ಚಾಗಿದ್ದು, ಆಗೊಮ್ಮೆ ಈಗೊಮ್ಮೆ ಮೋಡಗಳು ಕವಿದು ಮುಂದಿನ ಮಳೆಗಾಲದ ಮುನ್ಸೂಚನೆಯನ್ನು ನೀಡುತ್ತಿದೆ. ಜೂನ್ ತಿಂಗಳಿನಿಂದ ಬಹುತೇಕ ಎಲ್ಲೆಡೆ ಮಳೆಯಾಗುವ ಸಾಧ್ಯತೆಗಳಿವೆ. ಮಳೆಗಾಲವನ್ನು ಎದುರಿಸಲು ಪುತ್ತೂರು ಸ್ಥಳೀಯಾಡಳಿತದಿಂದ ಯಾವುದೇ ಸಿದ್ಧತೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿಲ್ಲ. ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಗಾಲಕ್ಕೆ ಮುನ್ನ ರಸ್ತೆ ಬದಿಯಲ್ಲಿನ ಚರಂಡಿಗಳ ಹೂಳೆತ್ತಿ ಸುಗಮವಾಗಿ ನೀರು ಹರಿಯಲು ಅನುವು ಮಾಡಿ ಕೊಡಲಾಗುತ್ತದೆ. ಆದರೆ ಪುತ್ತೂರು ನಗರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಬದಿಗಳಲ್ಲಿನ ಚರಂಡಿ ಕಾಮಗಾರಿಗಳನ್ನು ಅರೆ ಬರೆ ಮಾಡಲಾಗಿತ್ತು. ಆ ಬಳಿಕ ಮುಂದುವರಿಸಿ ಚರಂಡಿ ಕಾಮಗಾರಿಗಳು ನಡೆಸಿರುವ ಬಗ್ಗೆ ಕಂಡು ಬರುತ್ತಿಲ್ಲ. ಈಗಲೂ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಬಹುತೇಕ ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿವೆ.

ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ರಸ್ತೆಗಳಿದ್ದು ಈ ರಸ್ತೆಗಳಲ್ಲಿನ ಚರಂಡಿಗಳನ್ನು ಪ್ರತಿ ವರ್ಷವೂ ಮಳೆಗಾಲಕ್ಕೆ ಮುನ್ನ ದುರಸ್ತಿಗೊಳಿಸಿ ಸುಗಮ ನೀರು ಹರಿಯಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ಚರಂಡಿ ಕಾಮಗಾರಿಗಳು ಆರಂಭಗೊಂಡಿಲ್ಲ. ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿನ ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿಯೂ ಚರಂಡಿ ದುರಸ್ತಿಯ ಕಾಮಗಾರಿ ಆರಂಭಿಸಲಾಗಿಲ್ಲ. ಮಳೆಗಾಲ ಆರಂಭಗೊಂಡ ಬಳಿಕ ಚರಂಡಿ ಕಾಮಗಾರಿಗೆ ಮುಂದಾದರೆ ರಸ್ತೆಗಳು ಹಾಳಾಗುವ ಸಂಭವ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮಳೆಗಾಲಕ್ಕೆ ಮುನ್ನವೇ ಚರಂಡಿ ಕಾಮಗಾರಿ ನಡೆದಲ್ಲಿ ಮಳೆಗಾಲದಲ್ಲಿ ರಸ್ತೆಗಳ ರಕ್ಷಣೆಗೂ ಸಹಕಾರಿಯಾಗಲಿದೆ.

ಚೆಲ್ಯಡ್ಕ ಸೇತುವೆ ಗೋಳು:

ಮುಳುಗು ಸೇತುವೆಯೆಂದೇ ಪ್ರಚಲಿತದಲ್ಲಿರುವ ತಾಲೂಕಿನ ಚೆಲ್ಯಡ್ಕ ಮುಗುಳು ಸೇತುವೆಯು ಪ್ರತಿ ವರ್ಷವೂ ಮಳೆಗಾಲದಲ್ಲಿ ಕನಿಷ್ಠ ಆರೇಳು ಬಾರಿ ಮುಳುಗಡೆಯಾಗಿ ಈ ಭಾಗದಲ್ಲಿ ರಸ್ತೆ ಸಂಚಾರವು ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಚೆಲ್ಯಡ್ಕ ಸೇತುವೆಯು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದೆ. ಶತಮಾನದ ಇತಿಹಾಸ ಹೊಂದಿರುವ ಈ ಸೇತುವೆಯು ಪುತ್ತೂರು- ಪಾಣಾಜೆ ಮೂಲಕ ಕೇರಳವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.

ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸೀರೆ ಹೊಳೆಗೆ ನಿರ್ಮಿಸಲಾಗಿರುವ ಈ ಸೇತುವೆಯ ಪಿಲ್ಲರ್ ಮತ್ತು ಅಡಿಭಾಗ ಕುಸಿದು ಹೋಗಿದೆ. ಹಿಂದೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಈ ರಸ್ತೆಯ ಬಳಿಕ ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ರಸ್ತೆ ಮೇಲ್ದರ್ಜೆಗೇರಿದ್ದರೂ ಮುಳುಗು ಸೇತುವೆ ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ. ಕೇವಲ ೪ ಅಡಿಗಳಷ್ಟು ಎತ್ತರವಿರುವ ಈ ಸೇತುವೆಯು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದೆ ಎಂಬ ಮಾಹಿತಿ ಇದೆ.

ಇಲ್ಲಿ ಸಮರ್ಪಕವಾದ ಸೇತುವೆ ನಿರ್ಮಿಸಬೇಕು ಎನ್ನುವುದು ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದೆ. ಹೊಸ ಸೇತುವೆಗಾಗಿ ಹಲವಾರು ಹೋರಾಟ, ಪ್ರತಿಭಟನೆ, ಮನವಿಗಳ ಸರಮಾಲೆಯಾಗಿದೆ. ಆದರೆ ಪ್ರತಿಫಲ ಮಾತ್ರ ಸಿಕ್ಕಿಲ್ಲ. ಜನರ ಬೇಡಿಕೆಯಂತೆ ಕೆಲವು ವರ್ಷಗಳ ಹಿಂದೆ ನಬಾರ್ಡ್‌ ಅಡಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ೧.೫ ಕೋಟಿ ರುಪಾಯಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸೇತುವೆಗೆ ಅನುದಾನ ದೊರಕಿರಲಿಲ್ಲ. ಹೀಗಾಗಿ ಇತರ ಯೋಜನೆಗಳ ಮೂಲಕ ಅನುದಾನ ಒದಗಿಸಿಕೊಳ್ಳಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದರು. ಬಳಿಕ ಹೊಸ ಸೇತುವೆ ನಿರ್ಮಾಣಕ್ಕಾಗಿ ಕೆಆರ್‌ಡಿಸಿಎಲ್ ಮೂಲಕ ರು. ೩.೫ ಕೋಟಿಯ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಈ ಅನುದಾನ ಮಂಜೂರಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ಕಾಮಗಾರಿ ಆರಂಭಗೊಂಡಿಲ್ಲ ಎನ್ನಲಾಗುತ್ತಿದೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಮಾಡದಿದ್ದಲ್ಲಿ ಮತ್ತೊಮ್ಮೆ ಹಲವು ಭಾರಿ ಈ ಅಂತಾರಾಜ್ಯ ಸಂಪರ್ಕ ರಸ್ತೆಯು ಮುಳುಗಡೆಯಾಗಿ ಈ ರಸ್ತೆಯಲ್ಲಿ ಪ್ರಯಾಣಿಸುವವರು ಸುತ್ತು ಬಳಸಿ ಸಾಗುವ ದುರ್ಗತಿ ತಪ್ಪಿಸಲು ಸಾಧ್ಯವಿಲ್ಲ.

ಕಳೆದ ವರ್ಷ ಮಳೆಗಾಲದಲ್ಲಿ ಸೇತುವೆ ೬ ಬಾರಿ ರಸ್ತೆ ಮುಳುಗಡೆಯಾಗಿತ್ತು. ಕೆಲವೊಮ್ಮೆ ಮಧ್ಯರಾತ್ರಿಯೂ ರಸ್ತೆ ಮುಳುಗಡೆಯಾಗಿ ರಸ್ತಯಲ್ಲಿ ಸಾಗುವವರು ಅರ್ಧದಲ್ಲಿಯೇ ಬಾಕಿಯಾದ ಘಟನೆಯೂ ನಡೆದಿತ್ತು.

-------------ಕಳೆದ ಸುಮಾರು 50 ವರ್ಷ ಗಳಿಂದ ಈಭಾಗದ ಜನರು ಚೆಲ್ಯಡ್ಕ ಸೇತುವೆಗೆ ಬೇಡಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಇದೀಗ 3.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಕಾಮಗಾರಿ ಆರಂಭಗೊಂಡಿಲ್ಲ. ನೀತಿ ಸಂಹಿತೆ ಮುಗಿದ ತಕ್ಷಣದಲ್ಲಿ ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.-ಕೃಷ್ಣ ಪ್ರಸಾದ್ ಆಳ್ವ, ಚೆಲ್ಯಡ್ಕ ನಿವಾಸಿ.

..............ಮಳೆಗಾಲವನ್ನು ಎದುರಿಸಲು ಎಲ್ಲಾ ವ್ಯವಸ್ಥೆ ಮಾಡಲಾಗುವುದು. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಲು ಸಾಧ್ಯವಾಗಿಲ್ಲ. ನೀತಿ ಸಂಹಿತೆ ಸಡಿಲಗೊಂಡ ತಕ್ಷಣವೇ ಸಭೆ ನಡೆಸಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿ ಕ್ರಿಯಾಶೀಲಗೊಳಿಸಲಾಗುವುದು. ರಸ್ತೆ ಬದಿಗಳಲ್ಲಿನ ಚರಂಡಿಯ ಹೂಳೆತ್ತಿ ಸುಗಮ ಮಳೆನೀರು ಹರಿಯಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.-ಅಶೋಕ್ ಕುಮಾರ್ ರೈ, ಪುತ್ತೂರು ಶಾಸಕ.