ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಚಿತ್ರಿಕರಣ ಮಾಡಿ ಬ್ಲಾಕ್ ಮಾಡುತ್ತಿದ್ದ ಆಟೋ ಚಾಲಕನಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 20 ವರ್ಷ ಕಠಿಣ ಕಾರಗೃಹ ಶಿಕ್ಷೆ ವಿಧಿಸಿದೆ.ಆರೋಪಿ ಕಾಪು ತಾಲೂಕಿನ ಮಜೂರು ನಿವಾಸಿ ಶಂಶುದ್ದೀನ್ (24) ಈತ ತನ್ನ ಆಟೋದಲ್ಲಿ ಬಾಲಕಿಯನ್ನು ನಿತ್ಯ ಶಾಲೆಗೆ ಬಿಡುತ್ತಿದ್ದು, ತನ್ನ ಮೊಬೈಲ್‌ನಲ್ಲಿ ಒತ್ತಾಯ ಪೂರ್ವಕವಾಗಿ ಆಕೆಯ ಫೋಟೋ ತೆಗೆದಿದ್ದ. ಬಳಿಕ ಈ ಫೋಟೋವನ್ನು ಬೇರೆಯವರಿಗೆ ಕಳುಹಿಸಿ ವೈರಲ್ ಮಾಡುವುದಾಗಿ ಹೆದರಿಸಿ, ತನ್ನ ಜೊತೆ ಬಂದರೇ ಫೋಟೋ ಡಿಲೀಟ್ ಮಾಡುವುದಾಗಿ ನಂಬಿಸಿದ್ದ.
ಆತನನ್ನು ನಂಬಿದ ಬಾಲಕಿ ಕಾಪುವಿನ ಲಾಡ್ಜ್‌ಗೆ ಆತನೊಂದಿದೆ ಹೋಗಿದ್ದಳು. ಅಲ್ಲಿ ಆತ ಆಕೆಯನ್ನು ತನ್ನ ಹೆಂಡತಿ ಎಂದು ಸುಳ್ಳು ಮಾಹಿತಿ ನೀಡಿ ರೂಮ್ ಪಡೆದು ಅತ್ಯಾಚಾರ ಎಸಗಿದ್ದ, ಮಾತ್ರವಲ್ಲ ಬಾಲಕಿಯ ವಿಡಿಯೋ ಮಾಡಿದ್ದ. ನಂತರ ಡಿಲೀಟ್ ಮಾಡ ಬೇಕಾದರೆ ಹಣ ನೀಡಬೇಕೆಂದು ಬೆದರಿಕೆ ಹಾಕಿ ಆಕೆಯಿಂದ ಹಣವನ್ನೂ ಪಡೆದುಕೊಂಡಿದಿದ್ದ, ನಂತರವೂ ಆಕೆಯನ್ನು ಬ್ಲಾಕ್ ಮೇಲ್ ಮಾಡಿ ರೆಸಾರ್ಟ್‌ಗೆ ಕರೆದುಕೊಂಡು ಆತ್ಯಾಚಾರ ಎಸಗಿದ್ದ.ನಂತರ ಆಕೆ ನಿರಾಕರಿಸಿದಕ್ಕೆ ಆಕೆಯ ನಗ್ನಚಿತ್ರಗಳನ್ನು ಆಕೆಯ ತಾಯಿಯ ಮೊಬೈಲ್‌ಗೆ ಕಳುಹಿಸಿ ತಾನು ಕೇಳಿದಷ್ಟು ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದನು. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಆಗಿನ ಕಾಪು ಪೊಲೀಸ್ ಠಾಣಾ ಎಸ್ಸೈ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡು, ವೃತ್ತ ನಿರೀಕ್ಷಕ ಪ್ರಕಾಶ್ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಒಟ್ಟು 13 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ನೊಂದ ಬಾಲಕಿಯ ಹೇಳಿಕೆ, ಮೊಬೈಲ್‌ಗಳಲ್ಲಿದ್ದ ಚಿತ್ರಗಳಿಂದ ಆರೋಪ ಸಾಬೀತಾಗಿದೆ ಎಂದು ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ ಗುರುವಾರ ತೀರ್ಪು ನೀಡಿದ್ದಾರೆ.ಸರ್ಕಾರ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದಾರೆ. 20 ವರ್ಷಗಳ ಜೈಲು ಶಿಕ್ಷೆ
ಅತ್ಯಾಚಾರಕ್ಕೆ 10ವರ್ಷ, ಫೋಕ್ಸೋ ಕಾಯ್ದೆಯಡಿ 20 ವರ್ಷ, ಬೆದರಿಕೆಗೆ 1 ವರ್ಷ, ಹಲ್ಲೆಗೆ 1 ವರ್ಷ, ಅನೈತಿಕ ವಿಡಿಯೋ ಚಿತ್ರೀಕರಣಕ್ಕೆ 5 ವರ್ಷ, ಐಟಿ ಕಾಯ್ದೆಯಡಿ 2 ವರ್ಷ ಜೈಲು ವಾಸವನ್ನು ಏಕಕಾಲದಲ್ಲಿ ಅನುಭವಿಲು ಆದೇಶಿಸಲಾಗಿದೆ.ಅಲ್ಲದೆ ಒಟ್ಟು 62ಸಾವಿರ ರು. ದಂಡ ವಿಧಿಸಲಾಗಿದ್ದು, ಅದರಲ್ಲಿ 50 ಸಾವಿರ ರು. ಬಾಲಕಿಗೆ, ಉಳಿದ 12 ಸಾವಿರ ರು. ಸರಕಾರಕ್ಕೆ ಪಾವತಿಸುವಂತೆ ಆದೇಶಿಸಲಾಗಿದೆ. ನೊಂದ ಬಾಲಕಿಗೆ 1 ಲಕ್ಷ ರು. ಪರಿಹಾರವನ್ನು ನ್ಯಾಯಾಧೀಶರು ಸರ್ಕಾರಕ್ಕೆ ಸೂಚಿಸಿದ್ದಾರೆ.