ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಠಗಳು ನಡೆಸುವ ಧಾರ್ಮಿಕ ಸೇವಾ ಕಾರ್ಯಗಳಿಂದ ಘನತೆ, ಗೌರವ ಹೆಚ್ಚುವಂತೆ ಮಾಡುತ್ತವೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪಮಾನಪ್ಪ ಲಮಾಣಿ ಹೇಳಿದರು.ತಾಲೂಕಿನ ಬೇಬಿ ಗ್ರಾಮದ ದುದಂಡೇಶ್ವರ ಮಠದ ಆವರಣದಲ್ಲಿ ನಡೆದ ಮಹಾತಪಸ್ವಿ, ಶತಾಯುಷಿ ಲಿಂಗೈಕ್ಯ ಶ್ರೀಮರಿದೇವರು ಶಿವಯೋಗಿ ಮಹಾ ಸ್ವಾಮೀಜಿಗಳ 17ನೇ ವರ್ಷದ ಪುಣ್ಯಸ್ಮರಣೆ ಹಾಗೂ 9ನೇ ವರ್ಷದ ಮಹಾ ರಥೋತ್ಸವ ಉದ್ಘಾಟಿಸಿ ಮಾತನಾಡಿದರು.
ಬೇಬಿಗ್ರಾಮದ ದುದಂಡೇಶ್ವರ ಮಠವು ಸೇವಾ ಕಾರ್ಯದಲ್ಲಿ ಮುಂದಿದೆ. ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸಿ ಸಹಾಯ ಮಾಡುವ ಗುಣಗಳನ್ನು ಮೈಗೂಡಿಸಿಕೊಂಡು ಮಠವನ್ನು ಸನ್ಮಾರ್ಗದಲ್ಲಿ ಮುನ್ನೆಡಸುತ್ತಿದ್ದಾರೆ ಎಂದರು.ಗ್ರಾಮೀಣ ಪ್ರದೇಶದಲ್ಲಿ ಮಠದಿಂದ ಶಾಲೆ ತೆರೆದು ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಹಿರಿಯ ಶ್ರೀಗಳ ಬಗ್ಗೆ ಅಪಾರವಾಗಿ ಗುರುಭಕ್ತಿ ಗೌರವ ಹೊಂದಿದ್ದಾರೆ ಎನ್ನುವುದಕ್ಕೆ ಇವರು ಪ್ರತಿವರ್ಷ ನಡೆಸುವ ಪುಣ್ಯಸ್ಮರಣೆ ಹಾಗೂ ರಥೋತ್ಸವಗಳೇ ಸಾಕ್ಷಿ ಎಂದು ಬಣ್ಣಿಸಿದರು.
ವಿನಯ್ ಗುರೂಜಿ ಮಾತನಾಡಿ, ಸರ್ಕಾರದ ವ್ಯವಸ್ಥೆಯ ಮೊದಲೇ ಮಠಗಳು ವಿದ್ಯೆ, ಆಶ್ರಯ, ದಾಸೋಹ ನೀಡುತ್ತಿದ್ದವು. ಬೇಬಿ ಮಠವು ನನಗೆ ಅಣ್ಣ ಇದ್ದಂತೆ. ಶ್ರೀಗಳು ಮುಂದಿನ ದಿನಗಳಲ್ಲಿ ಗ್ರಾಮವನ್ನು ದೊಡ್ಡಮಟ್ಟದಲ್ಲಿ ಬೆಳೆಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.ಮನುಷ್ಯನಲ್ಲಿ ಇರುವಂತಹ ವಿಷವನ್ನು ಮಠಗಳು ಹೋಗಲಾಡಿಸುವ ಕೆಲಸ ಮಾಡುತ್ತಿವೆ. ಪ್ರಶಸ್ತಿ, ಗೌರವ, ಪುರಸ್ಕಾರಗಳು ವ್ಯಕ್ತಿಗೆ ಗೌರವ ತಂದುಕೊಡುತ್ತವೆ. ಅದೇರೀತಿ ಕೆಲವು ಸಾಧಕ ವ್ಯಕ್ತಿಗಳಿಗೆ ನೀಡುವ ಪುರಸ್ಕಾರಗಳು ಪ್ರಶಸ್ತಿಗೆ ಗೌರವ ತಂದುಕೊಡುತ್ತವೆ ಎಂದರು.
ಅಭಿನಂದನೆ ಸ್ವೀಕರಿಸಿ ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಮಾತನಾಡಿ, ಕಲ್ಲು ಮಂಟಪವನ್ನು ಮಠವನ್ನಾಗಿ ಬೆಳೆಸಿದ ಕೀರ್ತೀ ತ್ರಿನೇತ್ರಮಹಂತ ಸ್ವಾಮೀಜಿಗೆ ಸಲ್ಲುತ್ತದೆ. ಶ್ರೀಗಳು ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಜತೆಗೆ ನಿತ್ಯ ಸಮಾಜದ ಸೇವೆಗಾಗಿ ದುಡಿಯುತ್ತಿದೆ ಎಂದರು.ಸಮಾಜದ ಶ್ರೇಯಾಭಿವೃದ್ಧಿಗಾಗಿ ಶ್ರೀಗಳು ಪ್ರತಿವರ್ಷ ನವರಾತ್ರಿಯಂದು ಮೌನಾಚರಣೆ, ಜತೆಗೆ ಹೆಣ್ಣುಮಕ್ಕಳಿಗೆ ಮಡಿಲು ಅಕ್ಕಿ ವಿತರಿಸುತ್ತಾರೆ. ಇದಕ್ಕಾಗಿ ಈ ಮಠವನ್ನು ಹೆಣ್ಣುಮಕ್ಕಳ ತವರು ಮಠವೆಂದು ಕರೆಯುತ್ತಾರೆ. ಅಲ್ಲದೇ, ಕೇವಲ ಎರಡು ತಲೆ ಮಾರಿನ ಇತಿಹಾಸ ಹೊಂದಿರುವ ಚಂದ್ರವನ ಹಾಗೂ ಬೇಬಿ ಮಠವು ಹಲವು ದಶಕಗಳಲ್ಲಿ ಮಾಡಬಹುದಾದ ಸಾಧನೆ ಹಾಗೂ ಸೇವಾ ಕೆಲಸ ಕಾರ್ಯ ಮಾಡುವ ಮೂಲಕ ಭಕ್ತರಿಂದ ಮೆಚ್ಚುಗೆ ಪಡೆದಿದೆ ಎಂದು ಬಣ್ಣಿಸಿದರು.
ಉಪ ಸಭಾಪತಿಗಳ ಆಪ್ತ ಕಾರ್ಯದರ್ಶಿ ಡಾ.ಶ್ರೀಪಾದ ಮಾತನಾಡಿ, ಪ್ರತಿಭೆಗಳು ಎಲ್ಲಿ ಅರಳುತ್ತವೆ, ಹುಟ್ಟುತ್ತವೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಸಣ್ಣ ಕುಗ್ರಾಮಗಳಲ್ಲಿ ದೊಡ್ಡದೊಡ್ಡ ಪ್ರತಿಭೆಗಳು ಎನ್ನುವುದಕ್ಕೆ ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್ ಅವರು ದೊಡ್ಡ ಉದಾಹರಣೆ ಎಂದರು.ದಯಾಶಂಕರ್ ಅವರು ಕುಗ್ರಾಮದಲ್ಲಿ ಜನಿಸಿ ದೇವಸ್ಥಾನದ ಕಲ್ಲುಚಪ್ಪಡಿಯ ಮೇಲೆ ಕುಳಿತು ಓದಿದರು. ನಂತರ ಸಿದ್ದಂಗಂಗಾ ಮಠದಲ್ಲಿ ವಿದ್ಯಾಭ್ಯಾಸ ನಡೆಸಿ ಸರಕಾರಿ ಅಧಿಕಾರಿಯಾಗಿ ನೇಮಕಗೊಂಡರು. ಅವರು ಉತ್ತಮ ಆಡಳಿತ ಅಧಿಕಾರಿಯಾಗಿ ಕೆಲಸ ಮಾಡುವ ಜತೆಗೆ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದರು.
ಇದೇ ವೇಳೆ ಮಹಾಚೇತನ ಶ್ರೀ ಮರಿದೇವರು ಶಿವಯೋಗಿ ಜೀವನದಿ ರಾಷ್ಟ್ರೀಯ ಪ್ರಶಸ್ತಿಯನ್ನು ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್ ಅವರಿಗೆ ನೀಡಿ ಗೌರವಿಸಿದರು. ಜೀಕನ್ನಡ ಸರಿಗಮಪ ವಿಜೇತೆ ಶಿವಾನಿ ಅವರನ್ನು ಅಭಿನಂದಿಸಿದರು.ಇದಕ್ಕೂ ಮುನ್ನ ಶ್ರೀಮರೀದೇವರು ಮಹಾಸ್ವಾಮೀಜಿಗಳ ರಥೋತ್ಸವ ನಡೆಯಿತು. ರಥೋತ್ಸವಕ್ಕೆ ಹಲವು ಶ್ರೀಗಳು ಪೂಜೆಸಲ್ಲಿಸಿ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಗಮಿಸಿ ಮರಿದೇವರು ಮಹಾಸ್ವಾಮೀಜಿಗಳಿಗ ಗದ್ದುಗೆಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಡಾ.ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ, ಶಿವಗಂಗಾ ಕ್ಷೇತ್ರದ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ತಾಲೂಕು ಅಧ್ಯಕ್ಷ ಧನಂಜಯ್, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್, ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ವೀರಶೈವ ಲಿಂಗಾಯತ ಜಿಲ್ಲಾಧ್ಯಕ್ಷ ಎಸ್.ಆನಂದ್, ತಾಲೂಕು ಅಧ್ಯಕ್ಷ ಎಂ.ಶಿವಕುಮಾರ್, ಗ್ರಾಪಂ ಅಧ್ಯಕ್ಷೆ ಪುಟ್ಟಲಿಂಗಮ್ಮ, ಮಾಜಿ ಅಧ್ಯಕ್ಷರಾದ ಎಸ್.ಟಿ.ನಾಗಣ್ಣ, ಚಂದ್ರಶೇಖರಯ್ಯ, ಮಂಗಳಮ್ಮ, ಡಿ.ಸಿ.ಕುಮಾರ್, ಪಿಡಿಒ ಪಿ.ಸಿ.ಕುಮಾರ್, ಕೆ.ಬಿ.ಶಿವರಾಮಯ್ಯ, ಅಮೃತಿ ರಾಜಶೇಖರ್ ಸೇರಿದಂತೆ ಹಲವರು ಇದ್ದರು.