ಸಾರಾಂಶ
ಶಿರಹಟ್ಟಿ: ಕನ್ನಡ ಏಕೀಕರಣಕ್ಕಾಗಿ ದುಡಿದವರ ಶ್ರಮ ಸಾರ್ಥಕವಾಗಬೇಕಾದರೆ ನಾವೆಲ್ಲರೂ ಅವರನ್ನು ನಿತ್ಯ ಸ್ಮರಿಸುವ ಜತೆಗೆ ಕನ್ನಡ ಭಾಷೆ, ನೆಲ,ಜಲವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಬೆಳ್ಳಟ್ಟಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ನವೀನ ಅಳವಂಡಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಕರ್ನಾಟಕ ಏಕೀಕರಣ, ನೆಲ, ಜಲ ರಕ್ಷಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಲವಾರು ಮಹನೀಯರು ಕನ್ನಡ ನೆಲ, ಜಲ ಹಾಗೂ ಭಾಷೆಗಾಗಿ ದುಡಿದಿದ್ದಾರೆ. ಅವರ ಪರಿಶ್ರಮ ಸಾರ್ಥಕವಾಗಿಸಲು ಹೆಚ್ಚು ಕಾರ್ಯೋನ್ಮುಖರಾಗೋಣ. ಜತೆಗೆ ಕನ್ನಡ ನಾಡಿನ ಬಗ್ಗೆ ಅಭಿಮಾನವಿರಬೇಕು. ಬಹುಮುಖ್ಯವಾಗಿ ಭಾಷೆಯನ್ನು ಹೆಚ್ಚು ಬಳಸಿ ಅದನ್ನು ಉಳಿಸಿ ಬೆಳೆಸಲು ಪ್ರಬುದ್ಧರಾಗಬೇಕಾಗಿದೆ ಎಂದರು.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ನಾಡು, ನುಡಿ, ಜಲ ನಮ್ಮ ಹಕ್ಕು,ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಆಲೂರ ವೆಂಕಟರಾಯರು, ಡೆಪ್ಯೂಟಿ ಚನ್ನಬಸಪ್ಪ,ಅಂದಾನೆಪ್ಪ ದೊಡ್ಡಮೇಟಿ ಕೊಡುಗೆ ಅವೀಸ್ಮರಣೀಯ. ಈ ಎಲ್ಲ ಮಹನೀಯರ ಋಣ ಇಂದಿಗೂ ತೀರಿಸಲಾಗಿಲ್ಲ. ಯಾರೋ ಪರದೇಶಿಗಳಿಂದ ನಮ್ಮ ಭಾಷೆ ಸೊರಗಿಲ್ಲ. ನಮ್ಮಿಂದ, ಕುರುಡು ಕಾಂಚಾಣಕ್ಕೆ ಕೈ ಒಡ್ಡುವ ಕೆಲ ಕನ್ನಡಿಗರಿಂದಲೇ ನಾಡು ನುಡಿಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಎಸ್.ಬಿ. ಹೊಸೂರ ಮಾತನಾಡಿ, ಕರ್ನಾಟಕದ ಏಕೀಕರಣಕ್ಕೆ ರಾಜ್ಯದ ಎರಡನೇ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರ ಕೊಡುಗೆ ಅಪಾರವಾಗಿದೆ. ಅಖಂಡ ಕರ್ನಾಟಕ ನಿರ್ಮಾಣ ಮಾಡಲು ಸಾಹಿತಿಗಳು, ಕೆಲ ಮುತ್ಸದ್ದಿ ರಾಜಕಾರಣಿಗಳು, ಕನ್ನಡದ ಕಟ್ಟಾಳುಗಳ ಪರಿಶ್ರಮದಿಂದ ನಾವು ಸಮೃದ್ಧ ಕರ್ನಾಟಕದಲ್ಲಿ ಇದ್ದೇವೆ. ನಾಡು ನುಡಿಯ ವಿಷಯ ಬಂದಾಗ ನಾಡಿನವರೆಲ್ಲರೂ ಒಂದಾಗಬೇಕು ಎಂದು ಹೇಳಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿ ತನ್ನ ಅಸ್ಮಿತೆ ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡಿಗರು ಜಾಗೃತರಾಗಿ ತಮ್ಮ ಭಾಷೆ ರಕ್ಷಿಸಿಕೊಳ್ಳಬೇಕು. ಕನ್ನಡಿಗರಲ್ಲಿ ಕನ್ನಡದ ಕಾಳಜಿ ಕಡಿಮೆಯಾಗುತ್ತಿದೆ. ಎಲ್ಲರಲ್ಲಿಯೂ ಕನ್ನಡದ ಅಭಿಮಾನ ಮೂಡಬೇಕು. ಅಖಂಡ ಕರ್ನಾಟಕದ ಸಮಗ್ರತೆ ಮತ್ತು ಏಕತೆಯಿಂದ ಭಾಷೆ, ನೆಲ, ಜಲ, ಸಂಸ್ಕೃತಿ ಉಳಿಯುವಂತೆ ಚಿಂತನ ಮಂಥನ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಿರಿಚಂದ್ರ ಹರಿಜನ, ಮಕ್ಕಳಲ್ಲಿ ಕನ್ನಡ ಭಾಷಾ ಕಲಿಕೆ ಕುಂಠಿತಗೊಳ್ಳುತ್ತಿರುವುದಕ್ಕೆ ಪೋಷಕರು, ಶಿಕ್ಷಕರು ಹಾಗೂ ಸಮುದಾಯ ಕಾರಣವೆಂದ ಅವರು, ಕನ್ನಡ ಭಾಷೆ ಬಳಸಿದಷ್ಟು ಉಳಿಸಲು ಸಾಧ್ಯ. ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ ಎಂದು ಹೇಳುತ್ತಿದ್ದೇವೆ.ಆದರೆ ನಾವು ಎಷ್ಟರ ಮಟ್ಟಿಗೆ ಕನ್ನಡ ಬಳಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಶಿಕ್ಷಕ ಸುರೇಶ ಸರ್ಜಾಪೂರ ಪ್ರಾಸ್ತಾವಿಕ ಮಾತನಾಡಿದರು. ವೈ.ಬಿ. ಪಾಟೀಲ, ಐ.ಜೆ. ಅಗಡಿ, ಸುರೇಶ ರಾಠೋಡ, ರಮೇಶ ಬಡ್ನಿ, ಸತೀಶ ದೇಶಪಾಂಡೆ, ಮಹಾಂತೇಶ ಹಗೆದಾಳ,ರಾಜೇಶ್ವರಿ ಸಂಕನಗೌಡ್ರ, ಸವಿತಾ ಬದಾಮಿ, ಎಸ್.ಟಿ.ಶಿರಹಟ್ಟಿ, ಎಚ್.ಎಂ. ದೇವಗಿರಿ, ಚಂದ್ರು ಕದಡಿ, ಎಸ್.ಬಿ. ಗುಂಜಳ ಸೇರಿ ಪ್ರೌಢ ಶಾಲಾ, ಪ್ರಾಥಮಿಕ ಶಾಲಾ ಸಿಬ್ಬಂದಿ ಇದ್ದರು.