ಕುಮಾರಪಟ್ಟಣ: ಮಲೆನಾಡು ಹಾಗೂ ಭದ್ರಾವತಿ ಭಾಗದಲ್ಲಿ ಕಳೆದ ೪ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ತುಂಗಾ ಜಲಾಶಯ ಭರ್ತಿಯಾಗಿರುವುದರಿಂದ ಜಲಾಶಯದಲ್ಲಿ ಹೆಚ್ಚಾಗಿರುವ ೨೨,೦೦೦ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಹಾವೇರಿ-ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಹೀಗಾಗಿ ಕುಮಾರಪಟ್ಟಣದ ಸಮೀಪ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿದೆ.

ಹಾವೇರಿ ಜಿಲ್ಲೆಯಲ್ಲಿ ಮಳೆ ಸುರಿದಿದ್ದರಿಂದಲೂ ಕುಮದ್ವತಿ ನದಿಯಲ್ಲಿ ಹೆಚ್ಚಿನ ನೀರು ಹರಿದು ತುಂಗಭದ್ರಾ ನದಿ ಸೇರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾದ ಕಾರಣ ಸೂಳೆಕೆರೆ ಹಳ್ಳದಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದೆ. ಆ ನೀರು ಸಹ ತುಂಗಭದ್ರಾ ನದಿ ಸೇರುತ್ತಿದೆ.

ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಸ್ಥಳೀಯರಿಗೆ ಸಂತಸವಾಗಿದೆ. ನದಿ ನೀರು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಜತೆಗೆ ಪ್ರವಾಸಿಗರೂ ಆಗಮಿಸುತ್ತಿದ್ದಾರೆ.

ಒಂದು ವರ್ಷಕ್ಕೂ ಅಧಿಕ ಕಾಲ ನದಿಯ ಉಗಮ ಸ್ಥಾನದಿಂದ ಹಾವೇರಿ ಜಿಲ್ಲೆಯ ಗಡಿ ಅಂಚಿನವರೆಗಿನ ಕಂಚಾರಗಟ್ಟಿ ಹತ್ತಿರದ ಸೇತುವೆಯ ವರೆಗಿನ ಪ್ರದೇಶದಲ್ಲಿ ನದಿಯಲ್ಲಿ ಬೆಳೆದು ನಿಂತಿದ್ದ ಅಂತರಗಂಗೆ ಬಳ್ಳಿ ಹಾಗೂ ಇತರೆ ಕಸ-ಕಡ್ಡಿಗಳು ರಾಶಿ ರಾಶಿಯಾಗಿ ಹರಿಯುತ್ತಿರುವ ನೀರಿನ ರಭಸಕ್ಕೆ ವೇಗವಾಗಿ ತೇಲಿಹೋಗುತ್ತಿವೆ. ಕೆಲವು ದೊಡ್ಡ ಮರದ ಕೊಂಬೆಗಳು, ಮರಗಳು ನೀರಿನಲ್ಲಿ ತೇಲುತ್ತಾ ಸಾಗಿವೆ.


ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರಿಂದ ಗ್ರಾಮಾಂತರ ಪ್ರದೇಶಗಳ ಜನರಿಗೆ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಜಾಕ್‌ವೆಲ್, ದಾವಣಗೆರೆ, ಹಾವೇರಿ, ವಿಜಯನಗರ, ಬಳ್ಳಾರಿ, ಗದಗ ಜಿಲ್ಲೆಗಳ ಅನೇಕ ನಗರ ಪಟ್ಟಣಗಳ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್‌ವೆಲ್‌ಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆತಂತಾಗಿದೆ. ನದಿಯ ಅಕ್ಕಪಕ್ಕದ ಗ್ರಾಮಗಳ ರೈತರು ತಮ್ಮ ಜಮೀನುಗಳಲ್ಲಿನ ಬೆಳೆಗಳಿಗೆ ಮೋಟಾರು ಬಳಸಿ, ನೀರುಣಿಸಲು ಮುಂದಾಗಿದ್ದಾರೆ.

ತುಂಗಾ ನದಿ ಭರ್ತಿಯಾಗಿದ್ದರೂ, ಭದ್ರಾ ನದಿ ಇನ್ನೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲದ ಕಾರಣ ಆ ಭಾಗದ ರೈತರಿಗೆ ಆತಂಕವಾಗಿದೆ. ಜೂನ್ ಅಂತ್ಯದ ವೇಳೆಗೆ ಎರಡೂ ನದಿಗಳು ಭರ್ತಿಯಾಗಬೇಕಿತ್ತು. ಆದರೆ, ಜುಲೈ ಬಂದರೂ ಭದ್ರಾ ಅಣೆಕಟ್ಟಿನ ಮಟ್ಟ ಇನ್ನೂ ಏರಿಕೆಯಾಗಿಲ್ಲ. ಹೀಗಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮನೆಮಾಡಿದೆ. ಅತ್ತ ಮಲೆನಾಡಿನಲ್ಲಿ ಮಳೆ ಮುಂದುವರಿದಲ್ಲಿ ಭದ್ರಾ ಅಣೆಕಟ್ಟೆಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗುತ್ತದೆ.