ನದಿ ನೀರು ಹೆಚ್ಚಳ, ಬ್ಯಾರೇಜ್‌ಗಳು ಜಲಾವೃತ

| Published : Jul 20 2024, 12:54 AM IST

ಸಾರಾಂಶ

ಕೃಷ್ಣಾ ನದಿಗೆ 61,130 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿಯ ನೀರಿನ ಮಟ್ಟ ಸುಮಾರು 3 ಅಡಿಯಷ್ಟು ಮತ್ತೆ ಏರಿಕೆಯಾಗಿದ್ದು, ಕೆಳಹಂತದ ಬ್ಯಾರೇಜ್‌ಗಳು ಮತ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ 61,130 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿಯ ನೀರಿನ ಮಟ್ಟ ಸುಮಾರು 3 ಅಡಿಯಷ್ಟು ಮತ್ತೆ ಏರಿಕೆಯಾಗಿದ್ದು, ಕೆಳಹಂತದ ಬ್ಯಾರೇಜ್‌ಗಳು ಮತ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಸುಳಕುಡ ಬ್ಯಾರೇಜ್‌ನಿಂದ ದೂಧಗಂಗಾ ನದಿಗೆ 15,130 ಕ್ಯುಸೆಕ್ ಮತ್ತು ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 46,000 ಕ್ಯುಸೆಕ್ ಹೀಗೆ ಒಟ್ಟು 61,130 ಕ್ಯುಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ.

ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ, ಕಾರದಗಾ-ಭೋಜ, ಮಲಿಕವಾಡ-ದತವಾಡ ಮತ್ತು ಮಾಂಜರಿ-ಸವದತ್ತಿ ಕೆಳಹಂತದ ಹಳೆ ಬ್ಯಾರೇಜ್‌ಗಳು ಜಾಲಾವೃತಗೊಂಡು ಸಂಚಾರ ಸ್ಥಗಿತಗೊಂಡಿವೆ.

ಕೊಯ್ನಾ-114 ಮಿ.ಮೀ., ವಾರಣಾ-55, ಕಾಳಮ್ಮಾವಾಡಿ-73, ಮಹಾಬಳೇಶ್ವರ-131, ನವಜಾ-166, ರಾಧಾನಗರಿ-163, ಕೊಲ್ಲಾಪುರ 22 ಮತ್ತು ಸಾಂಗಲಿ-09 ಮಿಮಿ ಮಳೆಯಾಗಿರುವ ಕುರಿತು ವರದಿಯಾಗಿದೆ.

ಶುಕ್ರವಾರ ಚಿಕ್ಕೋಡಿ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಮಳೆ ಸಂಜೆಯವರೆಗೂ ಮಳೆ ಸುರಿಯಿತು. ಚಿಕ್ಕೋಡಿ ತಹಸೀಲ್ದಾರ್ ಚಿದಂಬರ ಕುಲಕರ್ಣಿ ಕಲ್ಲೋಳ ಬಳಿ ನದಿ ನೀರಿನ ಮಟ್ಟ ಪರಿಶೀಲನೆ ನಡೆಸಿದರು.