ಮಂಗಳೂರು : ರಾಮಾಯಣ ಬರೆದ ಆದಿಕವಿ ವಾಲ್ಮೀಕಿ ಮಹರ್ಷಿ ಅವರು ಬದುಕಿನ ಪರಿವರ್ತನೆಗೆ ಆದರ್ಶನೀಯರು ಎಂದು ನಗರದ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಡಾ.ಜಯಪ್ರಕಾಶ್ ಹೇಳಿದರು.
ಅವರು ಕಾಲೇಜಿನ ಸಭಾಂಗದಲ್ಲಿ ಶನಿವಾರ ವಾಲ್ಮೀಕಿ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪುರಾಣ ಕಾಲದ ಮಹಾನ್ ಪುರುಷರ ಬಗ್ಗೆ ಅಧ್ಯಯನ ನಡೆಸಬೇಕು. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಹಿರಿಯ ಪತ್ರಕರ್ತ ಹರೀಶ್ ಮೋಟುಕಾನ ಮುಖ್ಯ ಅತಿಥಿಯಾಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಕೇವಲ ಒಬ್ಬ ಕವಿಯಲ್ಲ. ಅವರು ಮಾನವ ಕುಲದ ನೈತಿಕ ದಿಕ್ಸೂಚಿ. ಜಾತಿ, ಮತ, ಭಾಷೆಗಳ ಗಡಿಯನ್ನು ಮೀರಿ, ಮಾನವೀಯತೆಯನ್ನು ಎತ್ತಿ ಹಿಡಿಯುವ ಅವರ ವಿಚಾರಗಳು ಇಂದಿನ ಸಮಾಜ ಶಾಂತಿ, ಸಾಮರಸ್ಯ ಮತ್ತು ಪ್ರಗತಿಯ ಹಾದಿಯಲ್ಲಿ ನಡೆಯಲು ಅತ್ಯಂತ ಪ್ರಸ್ತುತ ಹಾಗೂ ಅನಿವಾರ್ಯವಾಗಿವೆ ಎಂದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಂದೀಪ್ ಖಾರ್ವಿ, ಕನ್ನಡ ಸಂಘದ ಸಂಯೋಜಕಿ ಶ್ರುತಿ ಅಮೀನ್, ಕನ್ನಡ ಸಂಘದ ವಿದ್ಯಾರ್ಥಿ ಸಂಯೋಜಕರಾದ ಬಿ.ಎ.ಪ್ರೀತಮ್ ಇದ್ದರು.ವಿದ್ಯಾರ್ಥಿಗಳಾದ ಸುಮಿತ್ ಸ್ವಾಗತಿಸಿದರು. ನಿಶ್ಮಿತಾ ವಂದಿಸಿದರು. ಪ್ರೀತಮ್ ನಿರೂಪಿಸಿದರು.