ದೀರ್ಘಾವಧಿ ಬಳಿಕ ಸಕಲೇಶಪುರ ಪುರಸಭೆ ಸಾಮಾನ್ಯ ಸಭೆ

| Published : Dec 31 2024, 01:01 AM IST

ದೀರ್ಘಾವಧಿ ಬಳಿಕ ಸಕಲೇಶಪುರ ಪುರಸಭೆ ಸಾಮಾನ್ಯ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಕಾಡಪ್ಪ ಸ್ವಚ್ಚತೆ ಕಾರ್ಯಕೈಗೊಳ್ಳುವ ಪೌರಕಾರ್ಮಿಕರಿಗೆ ಮನೆಗಳಿಲ್ಲದ್ದಾಗಿದ್ದು, ಚಳಿಮಳೆಯಲ್ಲಿ ದಿನ ಕಳೆಯುವಂತಾಗಿದೆ. ಕೊಡಲೇ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಸುಮಾರು ೭ ಕೋಟಿ ರು. ವೆಚ್ಚದಲ್ಲಿ ಪುರಸಭೆ ಪೌರಕಾರ್ಮಿಕರಿಗೆ ೬೨ ಮನೆಗಳನ್ನು ನಿರ್ಮಿಸಲಾಗುತ್ತಿದೆ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ, ಈ ಬಗ್ಗೆ ಗಮನಹರಿಸಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪೌರಕಾರ್ಮಿಕರಿಗೆ ವಸತಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.

ಸೋಮವಾರ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಕಾಡಪ್ಪ ಸ್ವಚ್ಚತೆ ಕಾರ್ಯಕೈಗೊಳ್ಳುವ ಪೌರಕಾರ್ಮಿಕರಿಗೆ ಮನೆಗಳಿಲ್ಲದ್ದಾಗಿದ್ದು, ಚಳಿಮಳೆಯಲ್ಲಿ ದಿನ ಕಳೆಯುವಂತಾಗಿದೆ. ಕೊಡಲೇ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಸುಮಾರು ೭ ಕೋಟಿ ರು. ವೆಚ್ಚದಲ್ಲಿ ಪುರಸಭೆ ಪೌರಕಾರ್ಮಿಕರಿಗೆ ೬೨ ಮನೆಗಳನ್ನು ನಿರ್ಮಿಸಲಾಗುತ್ತಿದೆ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ, ಈ ಬಗ್ಗೆ ಗಮನಹರಿಸಲಾಗುವುದು ಎಂದರು. ಪಟ್ಟಣದ ಇಂದಿರಾ ಕ್ಯಾಂಟಿನ್‌ನಲ್ಲಿ ಯಾವುದು ಸರಿಇಲ್ಲ. ಬಡವರಿಗೆ ಊಟ ನೀಡುವ ಉದ್ದೇಶಕ್ಕೆ ಆರಂಭವಾದ ಈ ಯೋಜನೆಯಲ್ಲಿ ಕೆಲವರು ಭ್ರಷ್ಟಚಾರ ನಡೆಸುತ್ತಿದ್ದಾರೆ. ಇಬ್ಬರಿಂದ ಎಂಟುನೂರು ಜನರಿಗೆ ಊಟ ಸಿದ್ಧಪಡಿಸಲು ಸಾಧ್ಯವಾ. ಇದಕ್ಕಿಂತ ಭ್ರಷ್ಟಚಾರಕ್ಕೆ ನಿದರ್ಶನ ಬೇಕಾ? ಸ್ವಚ್ಛತೆ ಇಲ್ಲ, ನಿಯಮದ ಪ್ರಕಾರ ಆಹಾರ ನೀಡುತ್ತಿಲ್ಲ. ಭ್ರಷ್ಟಚಾರ ನಡೆಯುತ್ತಿದೆ ಬಿಲ್ ತಡೆಹಿಡಿಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಬಿಲ್ ಪಾವತಿಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರ ಹಣ ಅನ್ಯಾಯವಾಗಿ ವ್ಯಯವಾಗುತ್ತಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕರು, ಈಗಿರುವ ಏಜೆನ್ಸಿಯನ್ನು ಬದಲಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು. ಕಳ್ಳರ ಹಾವಳಿ:

ಪುರಸಭೆಯಲ್ಲಿ ಕಾಯುವವರೇ ಕಳ್ಳರಾಗುತ್ತಿದ್ದಾರೆ. ಹೀಗಾದರೆ ಗತಿಯೇನು? ಗೇಟ್‌ಗಳು, ಬಾಗಿಲುಗಳನ್ನು ಬಿಡದೆ ಕಳುವು ಮಾಡಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಪುರಸಭೆಯ ಸದಸ್ಯರು ಆತಂಕ ಹೊರಹಾಕಿದರು. ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಕಳ್ಳತನ ನಡೆದಿರುವುದು ಸತ್ಯ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದರು.

ಒಂದೂವರೆ ವರ್ಷದ ವಿಚಾರಗಳನ್ನು ಒಂದೇ ದಿನದ ಸಭೆಯಲ್ಲಿ ಚರ್ಚಿಸಲು ಸಾಧ್ಯವಾ, ಇದೆಂತಹ ಆಚಾತುರ್ಯ. ನಿಯಮದಂತೆ ಸಭೆ ನಡೆಸದಿದ್ದರೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸುವುದು ಹೇಗೆ ಎಂದು ಸದಸ್ಯೆ ಅನುಪೂರ್ಣ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ, ಸಾಮಾನ್ಯಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಬೇಕು ಎಂಬ ನಿಯಮವಿದೆ. ಕಾರಣಾಂತರಗಳಿಂದ ಸಭೆ ನಡೆಸಲಾಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಲೋಪವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಜಾತ್ರೆ ನಡೆಸುವುದೆಲ್ಲಿ?

ಸಾಮಾನ್ಯ ಸಭೆಯಲ್ಲಿ ಸಕಲೇಶ್ವರಸ್ವಾಮಿ ಜಾತ್ರೆಯ ವಸ್ತು ಪ್ರದರ್ಶನ ನೆಡೆಸುವುದೆಲ್ಲಿ? ಪ್ರತಿವರ್ಷ ನಡೆಯುತ್ತಿದ್ದ ಜಾತ್ರೆ ಸ್ಥಳದ ವಿವಾದ ನ್ಯಾಯಾಲಯದಲ್ಲಿದೆ. ಆದ್ದರಿಂದ ಜಾತ್ರೆ ನಡೆಸುವುದು ಎಲ್ಲಿ ಎಂಬ ವಿಚಾರದ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ಆದರ್ಶ, ಪ್ರತಿವರ್ಷ ಒಂದೊಂದು ಪ್ರದೇಶದಲ್ಲಿ ಜಾತ್ರೆ ನಡೆಸುವುದು ಬೇಡ. ಪ್ರತಿವರ್ಷ ಎಪಿಎಂಸಿ ಆವರಣದಲ್ಲಿ ಜಾತ್ರೆ ನಡೆಸಲು ಅನುಮತಿ ಪಡೆಯಿರಿ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯೆ ವನಜಾಕ್ಷಿ, ಎಪಿಎಂಸಿ ಆವರಣದಲ್ಲಿ ಜಾತ್ರೆ ನಡೆಸಲು ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ. ಆದ್ದರಿಂದ, ಅಲ್ಲಿ ಜಾತ್ರೆ ನಡೆಸುವುದು ಬೇಡ. ಹೇಮಾವತಿ ನದಿ ಸಮೀಪ ವಸತಿ ಉದ್ದೇಶಕ್ಕೆ ನಿರ್ಮಾಣವಾಗುತ್ತಿರುವ ಲೇಔಟ್‌ನಲ್ಲಿ ಜಾತ್ರೆ ನಡೆಸಿ ಎಂದರು. ಪರವಿರೋಧ ಚರ್ಚೆಗಳು ನಡೆಯಿತಾದರೂ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಜಾತ್ರೆ ನಡೆಸುವುದೆಲ್ಲಿ ಎಂಬ ವಿಚಾರ ಅಂತಿಮಕ್ಕಾಗಿ ವಿಶೇಷ ಸಭೆ ನಡೆಸಲು ತಿರ್ಮಾನಿಸಲಾಯಿತು.

ಗುತ್ತಿಗೆದಾರನ ಮೋಸ ಬಿಸಿಬಿಸಿ ಚರ್ಚೆ:

ಕಳೆದ ಬಾರಿ ಜಾತ್ರೆ ವಸ್ತುಪ್ರದರ್ಶನದ ಗುತ್ತಿಗೆ ಪಡೆದಿದ್ದ ಅರಕಲಗೂಡು ಪಟ್ಟಣದ ಪರಮೇಶ್ ಎಂಬ ವ್ಯಕ್ತಿ ಸುಮಾರು ೧೭ ಲಕ್ಷ ರು. ಬಿಲ್ ಪಡೆದು ಯಾರಿಗೂ ಹಣ ಪಾವತಿ ಮಾಡದೇ ಪರಾರಿಯಾಗಿದ್ದಾರೆ. ಈ ಗುತ್ತಿಗೆದಾರನ ಕಳ್ಳಾಟಕ್ಕೆ ಪುರಸಭೆ ಅಧಿಕಾರಿಗಳು ಹಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಪುರಸಭೆ ಸದಸ್ಯರನ್ನು ಹೊರಗಿಟ್ಟು ಜಾತ್ರೆ ವಸ್ತುಪ್ರದರ್ಶನ ನಡೆಸಿದ್ದೇ ಕಾರಣ. ಮುಂದಿನ ಸಭೆಯಲ್ಲಿ ಈ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಗುತ್ತಿಗೆದಾರರನ್ನು ಸಭೆಗೆ ಕರೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ನಾವೇನು ಬ್ರೋಕರ್‌ಗಳ?

ಪುರಸಭೆಯಲ್ಲಿ ನಡೆದಿದೆ ಎನ್ನಲಾಗುವ ಅಭಿವೃದ್ಧಿ ಕಾಮಗಾರಿಗಳಿಗೆ ಸದಸ್ಯರ ಗಮನಕ್ಕೆ ತರದೇ ಬಿಲ್ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಮುಂದೆ ಹೀಗಾಗುವುದಿಲ್ಲ ಎನ್ನುತ್ತಾರೆ ಎಂದು ಸದಸ್ಯ ಪ್ರದೀಪ್ ಆಕ್ರೋಶ ವ್ಯಕ್ತಪಡಿಸಿದರು. ಹಾಗಾದರೆ ಹಿಂದೆ ಮಾಡಿದ ಬಿಲ್‌ಗಳ ಗತಿಯೇನು? ಅಧಿಕಾರಿಗಳು ಮಾಡಿದ್ದೆಲ್ಲವನ್ನು ಒಪ್ಪಿಕೊಳ್ಳಲು ನಾವೇನು ಬ್ರೋಕರ್‌ಗಳ ಎಂದು ಸದಸ್ಯ ಸಮೀರ್‌ ಬೇಸರ ವ್ಯಕ್ತಪಡಿಸಿದರು. ಪುರಸಭೆಗೆ ಬಂದ ಆದಾಯವೆಲ್ಲ ಬೀದಿದೀಪ ನಿರ್ವಹಣೆಗೆ ಹೋಗುತ್ತಿದೆಯಲ್ಲ ಪ್ರತಿ ತಿಂಗಳು ಎರಡು ಲಕ್ಷ ಹಣ ಅದೇಂತಹ ನಿರ್ವಹಣೆಗಾಗಿ ಖರ್ಚು ಮಡಲಾಗುತ್ತಿದೆ. ಇಷ್ಟೊಂದು ಹಣ ನೀಡಿದರೂ ಸರಿಯಾದ ನಿರ್ವಹಣೆ ಇಲ್ಲ. ಹಾಕಿದ ಬಲ್ಪುಗಳು ಎರಡು ದಿನಕ್ಕೆ ಹಾಳಾಗುತ್ತಿವೆ. ಪ್ರತಿ ವಿದ್ಯುತ್ ಕಂಬಗಳಲ್ಲಿ ತಂತಿಗಳು ಇಳಿಬಿದ್ದಿದ್ದು ಅಪಾಯದ ಮುನ್ಸೂಚನೆ ನೀಡುತ್ತಿವೆ. ಹಿಂದೆ ಇದರ ತಪಾಸಣೆಗಾಗಿ ಅಧಿಕಾರಿಗಳನ್ನು ನೇಮಿಸಲಾಗುತಿತ್ತು. ಈಗ ಇಂತಹ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಆದ್ದರಿಂದ, ಗುತ್ತಿಗೆದಾರರು ಮಾಡಿದ್ದೇ ಕೆಲಸವಾಗಿದೆ. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸದಸ್ಯೆ ವನಜಾಕ್ಷಿ ಬೀದಿದೀಪ ನಿರ್ವಹಣೆಯ ಬಗ್ಗೆ ಅತೃಪ್ತಿ ಹೊರಹಾಕಿದರು.

ತಪ್ಪುಲೆಕ್ಕ:

ಪುರಸಭೆಗೆ ಉದ್ದಿಮೆ ಪರವಾನಗಿಯಿಂದ ನಾಲ್ಕು ಲಕ್ಷ ಬಂದಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದನ್ನು ಪ್ರಶ್ನಿಸಿದ ಸದಸ್ಯ ಮುಖೇಶ್ ಶೆಟ್ಟಿ ವಾರ್ಷಿಕವಾಗಿಯು ಇಷ್ಟೊಂದು ಆದಾಯ ಪುರಸಭೆಗೆ ಬರುವುದಿಲ್ಲ. ಆದ್ದರಿಂದ, ಲೆಕ್ಕದಲ್ಲಿ ತಪ್ಪಾಗಿದೆ ನೋಡಿ ಎಂದರು. ಈ ವೇಳೆ ಮಾತನಾಡಿದ ಅಭಿಯಂತರೆ ಸುಜಾತ ಲೆಕ್ಕ ತಪ್ಪಾಗಿದೆ ಎಂದು ಒಪ್ಪಿಕೊಂಡರು. ಹಾಗಾದರೆ ಇಡೀ ತಿಂಗಳ ಲಕ್ಕವೇ ತಪ್ಪಲ್ಲವಾ ಎಂದರೆ ಅಧಿಕಾರಿಗಳಿಂದ ಮೌನವೇ ಉತ್ತರವಾಯಿತು.

ಕಳ್ಳಬಿಲ್:

ಸುಭಾಷ್ ಮೈದಾನದಲ್ಲಿ ಹಾಕಲಾಗಿರುವ ಕಸವನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ೬೩ ಸಾವಿರ ಬಿಲ್ ಮಾಡಲಾಗಿದೆ. ಆದರೆ ಇಲ್ಲಿನ ತ್ಯಾಜ್ಯವನ್ನು ಎಲ್ಲಿಗೂ ಸಾಗಿಸದೆ ಕಳೆದ ಬಾರಿಯ ಜಾತ್ರೆ ಗುತ್ತಿಗೆ ವಹಿಸಿದ್ದ ಪರಮೇಶ್ ಅವರಿಗೆ ಕಳ್ಳ ಬಿಲ್ ಮಾಡಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಜರೀನಾ ಉಪಸ್ಥಿತರಿದ್ದರು.

* ಬಾಕ್ಸ್‌: ಬೇಡವೆಂದು ಬಾಡೂಟ ತಿಂದ ಸದಸ್ಯರು!ಸಾಮಾನ್ಯ ಸಭೆಗೆ ಊಟ ತರುಸುವ ಅಡುಗೆ ಗುತ್ತಿಗೆದಾರರಿಗೆ ಬಿಲ್ ನೀಡುವುದಿಲ್ಲ. ಇಂತಹ ಊಟ ಮಾಡುವುದು ನಮಗೆ ಶಾಪ. ಆದ್ದರಿಂದ, ಇಂದಿನ ಊಟ ಮಾಡುವುದು ಬೇಡ ಎಂದು ಸದಸ್ಯ ಮೋಹನ್ ಹೇಳಿದರು. ಆದರೆ ಮಧ್ಯಂತರ ಸಭೆಯಲ್ಲಿ ಬಂದ ಮಾಂಸಾಹಾರವನ್ನು ಎಲ್ಲರೂ ಸವಿದರು.