ಆದರ್ಶ ತಾಯಿ ಅಪ್ಪಿ ಕೊರಗಗೆ ಸಂಜೀವಿನಿ ಪ್ರಶಸ್ತಿ

| Published : Oct 28 2024, 12:56 AM IST

ಸಾರಾಂಶ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಪ್ಪಿ ಕೊರಗ, ನಾನು ಮಗನಿಗಾಗಿ ಏನನ್ನೂ ಮಾಡಿಲ್ಲ. ಆತ ಸ್ವಂತ ಬುದ್ಧಿಯಿಂದ ಓದಿದ್ದಾನೆ. ಅವನಿಂದಾಗಿ ಇಂದು ನನಗೆ ಈ ಗೌರವ ಪ್ರಾಪ್ತಿಯಾಗಿದೆ ಎಂದು ಗದ್ಗಿತರಾದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಹಯೋಗದಲ್ಲಿ ಸಂಜೀವಿ ನಾರಾಯಣ ಅಡ್ಯಂತಾಯರ ಸ್ಮರಣಾರ್ಥ ಕೊಡಮಾಡುವ ‘ಸಂಜೀವಿನಿ ಪ್ರಶಸ್ತಿ’ಯನ್ನು ಕಾರ್ಕಳ ಅಡ್ವೆಯ ಅಪ್ಪಿ ಕೊರಗ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.

ನಗರದಲ್ಲಿರುವ ಸಂಘದ ಸಾಹಿತ್ಯ ಸದನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭ ಮಾತನಾಡಿದ ಜಾನಕಿ ಬ್ರಹ್ಮಾವರ, ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಹಾಕಿಕೊಂಡ ಮಾನದಂಡಗಳು ವಿಶಿಷ್ಟ ಮತ್ತು ಮಾದರಿಯಾಗಿವೆ. ತಾಯಂದಿರ ಗೌರವ ಹೆಚ್ಚಿಸುವ ರೀತಿಯಲ್ಲಿವೆ. ಸಂಜೀವಿನಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆದರ್ಶ ತಾಯಿಯೊಬ್ಬರನ್ನು ಸ್ಮರಿಸುವುದಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಲಿ ಎಂದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಪ್ಪಿ ಕೊರಗ, ನಾನು ಮಗನಿಗಾಗಿ ಏನನ್ನೂ ಮಾಡಿಲ್ಲ. ಆತ ಸ್ವಂತ ಬುದ್ಧಿಯಿಂದ ಓದಿದ್ದಾನೆ. ಅವನಿಂದಾಗಿ ಇಂದು ನನಗೆ ಈ ಗೌರವ ಪ್ರಾಪ್ತಿಯಾಗಿದೆ ಎಂದು ಗದ್ಗಿತರಾದರು. ಅವರ ಪುತ್ರ ಮೋಹನ್ ಮಾತನಾಡಿ, ನಾನು ನಡುರಾತ್ರಿ ತನಕ ಓದುತ್ತಿದ್ದೆ. ಆ ಸಂದರ್ಭದಲ್ಲಿ ಅಮ್ಮ ಕುಲಕಸುಬಿನಲ್ಲಿ ನಿರತರಾಗಿರುತ್ತಿದ್ದರು. ನಾನು ಮಲಗಿದ ಬಳಿಕ ಅವರು ಮಲಗುತ್ತಿದ್ದರು. ಮಕ್ಕಳ ಓದು ಮತ್ತು ಪ್ರಗತಿಯಲ್ಲಿ ಅಮ್ಮನ ಪಾತ್ರ ಬಹಳ ದೊಡ್ಡದು ಎಂದರು.

ಉದ್ಯಮಿ ಬೊಳ್ಯಗುತ್ತು ವರಪ್ರಸಾದ್ ಶೆಟ್ಟಿ ಅವರು ಸಂಜೀವಿ ಮತ್ತು ನಾರಾಯಣ ಅಡ್ಯಂತಾಯರ ಕೊಡುಗೆಗಳನ್ನು ಸಭೆಯ ಮುಂದಿಟ್ಟರು. ಬಂಟ್ವಾಳದ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ‘ಕೌಟುಂಬಿಕ ಸಹಜೀವನ ಮತ್ತು ಮಾನಸಿಕ ಭದ್ರತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ತುಳುವರ ಕೂಡುಕುಟುಂಬ ಪದ್ಧತಿಯಲ್ಲಿ ಭದ್ರತೆ ಇತ್ತು. ಆ ಸಂಸ್ಕೃತಿ ನಾಶವಾದಂತೆ ಅಭದ್ರತೆ ಆವರಿಸಿದೆ ಎಂದರು.

ಬಜಾಜ್ ಎಲೆಕ್ಟ್ರಿಕಲ್ಸ್ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಅಡ್ಯಂತಾಯ ಇದ್ದರು. ಪ್ರಶಸ್ತಿ ಪ್ರಾಯೋಜಕಿ ರೂಪಕಲಾ ಆಳ್ವ ಸ್ವಾಗತಿಸಿದರು. ಕಲೇವಾ ಕಾರ್ಯದರ್ಶಿ ಯಶೋಧ ಮೋಹನ್ ವಂದಿಸಿದರು. ಸಮಾರಂಭದ ಪೂರ್ವದಲ್ಲಿ ಸಾವಿತ್ರಿಬಾಯಿ ಪುಲೆ ಕೊರಗ ಮಹಿಳಾ ಸಾಂಸ್ಕೃತಿಕ ಕಲಾ ತಂಡದಿಂದ ಡೋಲು ನಲಿಕೆ ಪ್ರದರ್ಶಿಸಲಾಯಿತು.