ಡಿ. 28ರಂದು ಕಾರಟಗಿ ಪಟ್ಟಣಕ್ಕೆ ಆಗಮಿಸಲಿರುವ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯ ಕುರಿತು ಜಲ ಜಾಗೃತಿ ಹಾಗೂ ಜನ ಜಾಗೃತಿ ರಥಯಾತ್ರೆಯ ಪ್ರಚಾರದ ಎಲ್‌ಇಡಿ ವಾಹನಕ್ಕೆ ಸೋಮವಾರ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು.

ಕಾರಟಗಿ: ಕೋಟ್ಯಂತರ ಜನರ ಜೀವನಾಡಿ, ಕುಡಿಯುವ ನೀರು, ಕೃಷಿ, ಉದ್ಯಮಕ್ಕೆ ಮೂಲಧಾತು ತುಂಗಭದ್ರಾ ನದಿಯ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಡಿ. 28ರಂದು ಕಾರಟಗಿ ಪಟ್ಟಣಕ್ಕೆ ಆಗಮಿಸಲಿರುವ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯ ಕುರಿತು ಜಲ ಜಾಗೃತಿ ಹಾಗೂ ಜನ ಜಾಗೃತಿ ರಥಯಾತ್ರೆಯ ಪ್ರಚಾರದ ಎಲ್‌ಇಡಿ ವಾಹನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಕೋಟಿ ಕೋಟಿ ಜನತೆಯ ಜೀವನಾಡಿ ತುಂಗಭದ್ರಾ ನದಿಯನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಕಾಪಿಟ್ಟುಕೊಳ್ಳವ ಅನಿವಾರ್ಯತೆಯ ಪರಿಸ್ಥಿತಿಯಲ್ಲಿ ಇದ್ದೇವೆ. ಇತ್ತೀಚಿಗೆ ನದಿಯು ಕಲುಷಿತಗೊಂಡು ಕುಡಿಯಲೂ ಯೋಗ್ಯವಿಲ್ಲ ಎನ್ನುವ ವರದಿಗಳು ಪ್ರಕಟವಾಗಿರುವುದು ಆತಂಕ ಹುಟ್ಟಿಸಿದೆ. ಈ ವರದಿಯು ನದಿಯ ಜತೆಗೆ ಕೋಟ್ಯಂತರ ಜನರ ಬದುಕಿಗೆ ಅಷ್ಟೇ ಅಲ್ಲ, ಲಕ್ಷಾಂತರ ಜೀವರಾಶಿಗಳ ಬದುಕಿನ ಪ್ರಶ್ನೆ ಎದುರಾಗಿದೆ. ಹೀಗಾಗಿ ನದಿಯನ್ನು ಅತ್ಯಂತ ಜತನದಿಂದ ಕಾಪಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸಿ ನಿರ್ಮಲ ತುಂಗಭದ್ರೆಯನ್ನಾಗಿಸಬೇಕು. ಈ ನಿಟ್ಟಿನಲ್ಲಿ ಅಭಿಯಾನದಿಂದ ಡಿ. 27ರಿಂದ ಕಿಷ್ಕಿಂದೆಯಿಂದ ಮಂತ್ರಾಲಯದ ವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಅಭಿಯಾನ ಡಿ. 27ರಂದು ರಾತ್ರಿ ಪಟ್ಟಣಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದು, ಡಿ. 28ರಂದು ಬೆಳಗ್ಗೆ ಸಾರ್ವಜನಿಕವಾಗಿ ಬಹಿರಂಗ ಸಭೆ ನಡೆಯಲಿದೆ ಎಂದರು.

ಪಾದಯಾತ್ರೆಯ ಸಂಚಾಲಕ ಡಾ. ಶಿವಕುಮಾರ ಗಂಗಾವತಿ ಮಾತನಾಡಿ, ನಮ್ಮೆಲ್ಲರ ಜೀವನಾಡಿಯಾಗಿರುವ ತುಂಗಭದ್ರಾ ನದಿಯು ಇಂದು ಮಿತಿ ಮೀರಿದ ಮಾಲಿನ್ಯದಿಂದ ಅಲ್ಲಿನ ನೀರನ್ನು ಕುಡಿಯಲು ಕೂಡಾ ಯೋಗ್ಯವಿಲ್ಲದಂತಹ ದುಸ್ಥಿತಿಗೆ ದೂಡಿದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡು ನಾವೆಲ್ಲರೂ ನಿರ್ಮಲ ತುಂಗಭದ್ರೆಗಾಗಿ, ಅದರ ಸ್ವಚ್ಛತೆಗೆ ಹೋರಾಡಬೇಕಿದೆ ಎಂದರು.

ಈ ನಿಟ್ಟಿನಲ್ಲಿ ಜನ ಜಾಗೃತಿ, ಜಲ ಜಾಗೃತಿಗಾಗಿ ಹಮ್ಮಿಕೊಂಡಿರುವ ಈ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಈ ವೇಳೆ ಮುಖಂಡರಾದ ಕೆ. ಸಿದ್ದನಗೌಡ, ಚೆನ್ನಬಸಪ್ಪ ಸುಂಕದ, ಶಿವರೆಡ್ಡಿ ನಾಯಕ, ಬೂದಿಗಿರಿಯಪ್ಪ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾ.ಪಾ., ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯ ಹಿರೇಬಸಪ್ಪ ಸಜ್ಜನ್, ಶರಣೇಗೌಡ ಕೋ. ಪಟೇಲ್, ಬಿ. ಶರಣಯ್ಯಸ್ವಾಮಿ, ಅಯ್ಯಪ್ಪ ಉಪ್ಪಾರ, ಶರಣಪ್ಪ ಪರಕಿ, ರಾಮ್ ಮೋಹನ್, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ದೇವಪ್ಪ, ಸೋಮನಾಥ್ ದೊಡ್ಡಮನಿ, ಉದಯ ಈಡಿಗೇರ್, ರಾಜಶೇಖರ ಆನೆಹೊಸೂರು, ಖಾಜಾ ಹುಸೇನ್ ಮುಲ್ಲಾ ಸೇರಿದಂತೆ ಅಭಿಯಾನದ ಪ್ರಹ್ಲಾದ ಜೋಶಿ, ಪ್ರಭು ಉಪನಾಳ, ಬಸವರಾಜ ಶೆಟ್ಟರ್, ಶರಣಪ್ಪ ಕೋಟ್ಯಾಳ, ರುದ್ರೇಶ ಮಂಗಳೂರು, ಶರಣಪ್ಪ ಕಾಯಿಗಡ್ಡಿ, ಸಂದೀಪಗೌಡ ಇನ್ನಿತರರು ಇದ್ದರು.