ಬದುಕಿಗೆ ಸೇವಾನುಭವ ನೀಡುವ ಸ್ಕೌಟ್ಸ್‌, ಗೈಡ್ಸ್‌

| Published : Oct 26 2025, 02:00 AM IST

ಸಾರಾಂಶ

ಯುವ ಸಮೂಹದಲ್ಲಿ ಸೇವೆಯೇ ಪರಧರ್ಮ ಎಂಬುದನ್ನು ಅರಿಯಲು ರೇಂಜರ್ಸ್‌, ರೋವರ್ಸ್‌ ಪೂರಕವಾಗಿದೆ ಎಂದು ಮಾಜಿ ಸಚಿವ ಹಾಗೂ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಶಿವಮೊಗ್ಗ: ಯುವ ಸಮೂಹದಲ್ಲಿ ಸೇವೆಯೇ ಪರಧರ್ಮ ಎಂಬುದನ್ನು ಅರಿಯಲು ರೇಂಜರ್ಸ್‌, ರೋವರ್ಸ್‌ ಪೂರಕವಾಗಿದೆ ಎಂದು ಮಾಜಿ ಸಚಿವ ಹಾಗೂ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು. ನಗರದ ಎನ್‌ಇಎಸ್‌ ಇನ್ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌ ಕಾಲೇಜಿನ ವತಿಯಿಂದ ಶನಿವಾರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಎರಡು ದಿನಗಳ ರೋವರ್ಸ್‌ ಮತ್ತು ರೇಂಜರ್ಸ್‌ ಅಹೋರಾತ್ರಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನುಭವಗಳು ಜೀವನದಲ್ಲಿ ಯಶಸ್ವಿಯಾಗಲು ಹೆಚ್ಚು ಪ್ರೇರಣೆ ನೀಡುತ್ತದೆ. ಅಂತಹ ಅದ್ಭುತ ಸೇವಾನುಭವವನ್ನು ಬದುಕಿಗೆ ನೀಡುವಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಒಂದು ಪೂರಕ ಶಕ್ತಿಯಾಗಿದೆ ಎಂದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಿಂತನೆಗಳು ಮೊದಲು ಅಧ್ಯಾಪಕ ವೃಂದಕ್ಕೆ ಮನವರಿಕೆ ಮಾಡಿಕೊಡಬೇಕು. ಇದರಿಂದ ಯುವ ಸಮೂಹವನ್ನು ವೇಗವಾಗಿ ತಲುಪಲು ಸಾಧ್ಯ ಮಾಡಿಕೊಡಲಿದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಮುಂದುವರೆದ ಭಾಗವೇ ರೇಂಜರ್ಸ್‌ ರೋವರ್ಸ್‌ ಎಂದರು.

ಸಮಾಜವನ್ನು ಎದುರಿಸಲು ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗೆ ಬೇಕಿದೆ. ನಮ್ಮ ಇತಿಹಾಸ ಪರಂಪರೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದೆ. ನಂತರದ ದಿನಮಾನಗಳಲ್ಲಿ ವಚನಗಾರರು, ಹಿರಿಯರು ನೀಡಿದ ಆದರ್ಶಯುತ ಸಂದೇಶದಂತೆ, ಸೇವೆಯು ಪ್ರಾಧಾನ್ಯತೆಯನ್ನು ಪಡೆಯಿತು ಎಂದರು.

ಶಿಸ್ತಿನ ಕೊರತೆ ಎಂಬುದು ಸಮಾಜ ನಿರ್ಮಾಣ ಕಾರ್ಯದಲ್ಲಿ ಎಂದಿಗೂ ತೊಡಕಾಗಿರುವ ವಿಚಾರ. ಇಂತಹ ತೊಡಕುಗಳನ್ನು ನಿವಾರಿಸಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ನಂತಹ ಸಂಸ್ಥೆಗಳಲ್ಲಿ ಸಕ್ರಿಯರಾಗುವ ಮೂಲಕ, ಶಿಸ್ತು, ಸಂಯಮ, ಸಮಾಜ ಸೇವೆ, ಪ್ರಕೃತಿ ರಕ್ಷಣೆಯಂತಹ ಕಾರ್ಯದಲ್ಲಿ ಕಂಕಣ ಬದ್ಧರಾಗಿ ಎಂದು ಕರೆ ನೀಡಿದರು.

ಈಚೆಗೆ ಹಾಸನಾಂಬೆ ದರ್ಶನವು ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಡಳಿತದೊಂದಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಶ್ರಮಿಸಿದ್ದಾರೆ. ಮಲೆಮಹದೇಶ್ವರ ಬೆಟ್ಟದಲ್ಲಿ ಉಂಟಾಗುವ ಕಾಡ್ಗಿಚ್ಚನ್ನು ಆರಿಸಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಮೂಹವನ್ನು ಬಳಸಲಾಗುತ್ತಿದೆ. ಇಂತಹ ಅನೇಕ ಸಂದರ್ಭಗಳ ನಿರ್ವಹಣೆಗೆ ಸಂಸ್ಥೆ ನಿದರ್ಶನವಾಗಿದೆ ಎಂದಾದರೆ, ಅದಕ್ಕೆ ಕಾರಣ ಸಂಸ್ಥೆಯನ್ನು ಕಟ್ಟಿಬೆಳೆಸಿದ ದಿಗ್ಗಜರ ಕೊಡುಗೆ ಕಾರಣ. ಸದಾ ತಯಾರಾಗಿರಿ ಎಂಬ ಘೋಷ ವಾಕ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ತರಬೇತಿ ಪಡೆದವರು ಸದಾ ಸೇವೆಗಾಗಿ ಸಿದ್ಧರಾಗಿರುತ್ತಾರೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್‌ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎನ್‌ಇಎಸ್‌ ಸಂಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣದ ಜೊತೆಗೆ ಕೌಶಲ್ಯತೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಬಿತ್ತುವ ಕಾರ್ಯ ವಿದ್ಯಾಸಂಸ್ಥೆಗಳಿಂದ ನಡೆಯುತ್ತಿದೆ. ಸೇವಾ ಮನೋಭಾವ ನಾಯಕತ್ವದ ನಿಜವಾದ ಮೂಲ. ಈ ಹಿನ್ನೆಲೆಯಲ್ಲಿ ರೇಂಜರ್ಸ್‌. ರೋವರ್ಸ್‌ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಯುವ ಸಮೂಹ ಶ್ರಮಿಸಲಿ ಎಂದು ಆಶಿಸಿದರು.

ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಮುಖ್ಯ ಆಯುಕ್ತರಾದ ಶಕುಂತಲ ಚಂದ್ರಶೇಖರ್‌, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಘಟಕದ ರೋವರ್ಸ್ ಜಿಲ್ಲಾ ಆಯುಕ್ತ ಕೆ.ರವಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಶಿವಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕರಾದ ರೋವರ್‌ ಸ್ಕೌಟ್‌ ನಾಯಕ ವಿನಯ್, ಎಚ್.ಬಿ.ಪಟೇಲ್‌, ಅರುಣ್‌ ಕುಮಾರ್‌, ರೇಂಜರ್‌ ನಾಯಕಿ ರಮ್ಯಶ್ರೀ ಉಪಸ್ಥಿತರಿದ್ದರು.