ಸಾರಾಂಶ
ರೈತರು ಮತ್ತು ಸಾರ್ವಜನಿಕರಿಗೆ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗದಂತೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸುವ ಕಾರಣಕ್ಕಾಗಿ ಸುಕ್ಷೇತ್ರ ಉಜ್ಜಯನಿಗೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಕೊಟ್ಟೂರು
ರೈತರು ಮತ್ತು ಸಾರ್ವಜನಿಕರಿಗೆ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗದಂತೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸುವ ಕಾರಣಕ್ಕಾಗಿ ಸುಕ್ಷೇತ್ರ ಉಜ್ಜಯನಿಗೆ ಪ್ರತ್ಯೇಕ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಹೇಳಿದರು.ತಾಲೂಕಿನ ಉಜ್ಜಯನಿಯಲ್ಲಿ ಜೆಸ್ಕಾಂನಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಜ್ಜಯನಿಗೆ ಪ್ರತ್ಯೇಕ ಪೀಡರ್ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯುತ್ತಿನ ತೊಂದರೆ ನಿವಾರಿಸಲು ಜೆಸ್ಕಾಂ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿರುವೆ ಯಾವುದೇ ಪೂರೈಕೆಯ ಸಮಸ್ಯೆಗಳು ಉಂಟಾದರೆ ಕೂಡಲೇ ಈ ಬಗ್ಗೆ ಗಮನ ಹರಿಸಿ ಜೆಸ್ಕಾಂನವರು ನಿವಾರಿಸಲು ಬೇಕಿರುವ ಎಲ್ಲಾ ಬಗೆಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿರುವೆ ಎಂದರು.ಉಜ್ಜಯನಿ ಗ್ರಾಮವನ್ನು ಪ್ರತ್ಯೇಕವಾಗಿ ಹೋಬಳಿಯಾಗಿಸಲು ಸರ್ಕಾರದ ಮೇಲೆ ಒತ್ತಡ ತರುವೆ ಎಂದರಲ್ಲದೇ, ಸದ್ಯ ಸರ್ಕಾರದ ಮುಂದೆ ಹೋಬಳಿ ಕೇಂದ್ರ ರಚನೆಯ ಯಾವುದೇ ಪ್ರಸ್ತಾಪವಿಲ್ಲ. ಮುಂದೆ ಹೋಬಳಿ ರಚನೆ ಮಾಡಲು ಮುಂದಾದರೆ ಮೊದಲ ಆದ್ಯತೆ ನೀಡಿ ಉಜ್ಜಯನಿ ಮತ್ತು ಚಿಕ್ಕಜೋಗಿಹಳ್ಳಿಯನ್ನು ಹೋಬಳಿ ಕೇಂದ್ರವಾಗಿಸಲು ಶ್ರಮಿಸುವೆ ಎಂದರು.
ಕಾರ್ಯಕ್ರಮದಲ್ಲಿ ಜೆಸ್ಕಾಂ ಎಇಇ ಮಂಜುಳಾ, ಎಂಜಿನಿಯರ್‌ಗಳಾದ ಚಂದ್ರ ಮೋಹನ್ ನಾಗರಾಜ, ಶರಣಪ್ಪ, ಉಜ್ಜಯನಿಯ ಜೆಸ್ಕಾಂ ಸಿಬ್ಬಂದಿ ವರ್ಗ ಮತ್ತು ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ನಾಯ್ಕ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಗ್ರಾಪಂ ಅಧ್ಯಕ್ಷ ಚೌಡಪ್ಪ ಮತ್ತಿತರರು ಇದ್ದರು.