ವಿದ್ಯಾರ್ಥಿಗಳ ಖುಷಿ ಕಸಿದ ಶಕ್ತಿ ಯೋಜನೆ

| Published : Feb 04 2024, 01:33 AM IST

ಸಾರಾಂಶ

ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ಘತ್ತರಗಾ ಭಾಗ್ಯವಂತಿ ದೇವಲ ಗಾಣಗಾಪುರ ದತ್ತಾತ್ರೇಯ ಸೇರಿ ಪುಣ್ಯ ಕ್ಷೇತ್ರಗಳ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಶೇ.90ರಷ್ಟು ಮಹಿಳಾ ಪ್ರಯಾಣಿಕರಿರುತ್ತಾರೆ. ಇದರಿಂದ ದಿನನಿತ್ಯ ಓಡಾಡುವ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಪುರುಷರಿಗೆ ಪ್ರಯಾಣ ಕಷ್ಟವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಶಕ್ತಿ ಯೋಜನೆ ಜಾರಿಯಾದ ಬಳಿಕ ತಾಲೂಕಿನ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ವಿಪರೀತವಾಗಿದೆ.

ತಾಲೂಕಿನ ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ಘತ್ತರಗಾ ಭಾಗ್ಯವಂತಿ ದೇವಲ ಗಾಣಗಾಪುರ ದತ್ತಾತ್ರೇಯ ಸೇರಿ ಪುಣ್ಯ ಕ್ಷೇತ್ರಗಳ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಶೇ.90ರಷ್ಟು ಮಹಿಳಾ ಪ್ರಯಾಣಿಕರಿರುತ್ತಾರೆ. ಇದರಿಂದ ದಿನನಿತ್ಯ ಓಡಾಡುವ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಪುರುಷರಿಗೆ ಪ್ರಯಾಣ ಕಷ್ಟವಾಗುತ್ತಿದೆ.

55 ಪ್ರಯಾಣಿಕರು ಸಂಚರಿಸುವ ಬಸ್‌ಗಳಲ್ಲಿ ಈಗ 100 ಜನ ಪ್ರಯಾಣಿಸುತ್ತಿದ್ದಾರೆ. ಇದರಿಂದ ಬಹಳಷ್ಟು ಹಳ್ಳಿಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ಏರಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರ ದಟ್ಟಣೆಯಿಂದ ಬಸ್‌ ಏರುವುದೇ ಸಾಹಸವಾಗಿದೆ. ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿ ನಿತ್ಯ ಪಟ್ಟಣಕ್ಕೆ ಬಸ್‌ನಲ್ಲಿ ಕಾಲೇಜಿಗೆ ಹೋಗುತ್ತಾರೆ. ಶಕ್ತಿ ಯೋಜನೆ ಪರಿಣಾಮ ತಾಲೂಕಿನ ಬಹುತೇಕ ಮಾರ್ಗದ ಬಸ್ಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದ್ದು, ಶಾಲಾ ಕಾಲೇಜಿಗೆ ತೆರಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಚಾರಕ್ಕೆ ಪರದಾಡುವಂತಾಗಿದೆ.

ಸರ್ಕಾರದಿಂದ ಶೇಕಡಾ 50ರಷ್ಟು ಸೀಟ್‌ ಮಾತ್ರ ಮಹಿಳಾ ಪ್ರಯಾಣಿಕರಿಗೆ ಮೀಸಲಿಡಲಾಗಿದ್ದು, ಉಳಿದವು ಪುರುಷರಿಗೆ ಮೀಸಲಾಗಿರಬೇಕು ಎಂಬ ನಿಯಮ ಮಾಡಲಾಗಿದೆ. ಆದರೆ ಈ ನಿಯಮದ ಪಾಲನೆ ಆಗುತ್ತಿಲ್ಲ ಎಂಬುದು ಪ್ರಯಾಣಿಕರ,

ಆರೋಪವಾಗಿದೆ. ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ ಉತ್ತಮ ಯೋಜನೆಯೇನೋ ಹೌದು. ಆದರೆ ಸೂಕ್ತ ಪೂರ್ವ ಸಿದ್ಧತೆ ಇಲ್ಲದೇ ಜಾರಿಗೊಳಿಸಿರುವುದರಿಂದ ಮಹಿಳೆಯರು, ವಿದ್ಯಾರ್ಥಿಗಳು ಪುರುಷರು ಸೇರಿ ಎಲ್ಲ ಪ್ರಯಾಣಿಕರೂ ತೊಂದರೆ ಅನುಭವಿಸುವಂತಾಗಿದೆ. ಸಂಭಂದಿಸಿದ ಇಲಾಖೆ ಅಧಿಕಾರಿಗಳು ಅಗತ್ಯಕ್ಕೆ ತಕ್ಕಷ್ಟು ಸಾರಿಗೆ ಸಂಸ್ಥೆ ಹೆಚ್ಚವರಿ ಬಸ್‌ ಬಿಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತಾಲೂಕಿನ ವಿದ್ಯಾರ್ಥಿಗಳು ಹಾಗೂ ಪುರುಷ ಪ್ರಯಾಣಿಕರು ಒತ್ತಾಯಿಸಿದ್ದಾರೆ.